»   » ಗಾಂಧಿನಗರದಲ್ಲಿ ಸದ್ದಿಲ್ಲದಂತೆ ಮತ್ತೊಂದು ಚಿತ್ರ ಹಿಟ್

ಗಾಂಧಿನಗರದಲ್ಲಿ ಸದ್ದಿಲ್ಲದಂತೆ ಮತ್ತೊಂದು ಚಿತ್ರ ಹಿಟ್

Posted By:
Subscribe to Filmibeat Kannada

2010 ರಲ್ಲಿ ಒಟ್ಟು ಬಿಡುಗಡೆಯಾದ ಚಿತ್ರಗಳ ಸಂಖ್ಯೆ 50ಕ್ಕೂ ಹೆಚ್ಚು. ಇದರಲ್ಲಿ ಗೆದ್ದದ್ದು ಬೆರಳಣಿಕೆಯಷ್ಟು ಮಾತ್ರ. ಕನ್ನಡ ಚಿತ್ರಗಳು ಸೋಲಲು ಹಲವು ಕಾರಣಗಳನ್ನು ಕೊಡಬಹುದು. ಕಳಪೆ ಮಟ್ಟದ ಚಿತ್ರ, ಅದೇ ಲಾಂಗ್, ಮಚ್ಚು, ರಿಮೇಕ್ ಚಿತ್ರಗಳು, ಪರಭಾಷಾ ಚಿತ್ರಗಳ ಹಾವಳಿ, ವಾರಕ್ಕೆ ನಿಯಮಿತವಿಲ್ಲದೆ ಬಿಡುಗಡೆಯಾಗುತ್ತಿರುವ ಚಿತ್ರಗಳು, ಸಿನಿಮಾ ಮಂದಿರಕ್ಕೆ ಬರಲು ಕನ್ನಡಿಗರು ತೋರುತ್ತಿರುವ ಉದಾಸೀನತೆ ಇತ್ಯಾದಿ.. ಇತ್ಯಾದಿ. ಇದೆಲ್ಲದರ ನಡುವೆ 'ಕೃಷ್ಣನ್ ಲವ್ ಸ್ಟೋರಿ' ಚಿತ್ರ ಹಿಟ್ ಆಗಿದೆ.

ಪುನೀತ್ ಅಭಿನಯದ "ಪೃಥ್ವಿ' ಚಿತ್ರದ ನಂತರ 'ಕೃಷ್ಣನ್ ಲವ್ ಸ್ಟೋರಿ' ನಿಸ್ಸಂಶಯವಾಗಿ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಉತ್ತಮವಾದ ಸಂಭಾಷಣೆ, ಬಿಗಿಯಾದ ನಿರೂಪಣೆ, ಕಣ್ಣಿಗೆ ತಂಪು ನೀಡುವ ಲೋಕೇಶನ್ ಮತ್ತು ಛಾಯಾಗ್ರಹಣ, ಹಾಡುಗಳು, ಕಲಾವಿದರ ಅಭಿನಯ ನಿರ್ಮಾಪಕರನ್ನು ದಿಲ್ ಖುಷ್ ಗೊಳಿಸಿದೆ. ಚಿತ್ರದಲ್ಲಿನ ನಾಯಕಿ ರಾಧಿಕಾ ಪಂಡಿತ್ ನಟನೆ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಇದು ನಿರ್ದೇಶಕರ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿರ್ದೇಶಕ ಶಶಾಂಕ್ ಖಂಡಿತವಾಗಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ.

ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರದ ದಿನಗಳಲ್ಲಿ ಮುಕ್ಕಾಲು ತುಂಬುವ ಚಿತ್ರಮಂದಿರ ವಾರಾಂತ್ಯದಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಎಲ್ಲ ಎ ಮತ್ತು ಬಿ ಸೆಂಟರ್ ಗಳಿಗೆ ಚಿತ್ರತಂಡದೊಂದಿಗೆ ಭೇಟಿ ನೀಡುತ್ತಿರುವ ಶಶಾಂಕ್ ಇತ್ತೀಚಿಗೆ ಸ್ಯಾಂಡಲ್ ವುಡ್ ನ ನಿರ್ದೇಶಕರಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಗಿರೀಶ್ ಕಾಸರವಳ್ಳಿ, ರಘು, ಚಂದ್ರು, ಎ ಎಂ ಆರ್ ರಮೇಶ್, ನಾಗತಿಹಳ್ಳಿ ಮುಂತಾದವರು ಇದರಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಶಶಾಂಕ್ ಗುಣಗಾನ ನಡೆಯಿತು.

ಪ್ರಕಾಶ್ ರೈ ನಿರ್ಮಾಣದ 'ನಾನು ನನ್ನ ಕನಸು' ಚಿತ್ರ ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದರೂ ಕ್ಲಾಸ್ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ 50 ದಿನ ಪೂರೈಸಿದೆ, ಮಲ್ಟಿಪ್ಲೆಕ್ಷ್ ಗಳಿಗೆ ವಾರಾಂತ್ಯಗಳಲ್ಲಿ ಉತ್ತಮ ಗಳಿಕೆ ತಂದು ಕೊಡುತ್ತಿದೆ. ಇನ್ನು ಕಳೆದ ಶುಕ್ರವಾರ ಬಿಡುಗಡೆಯಾದ ಅನಂತನಾಗ್, ಸುಹಾಸಿನಿ ಅಭಿನಯದ 'ಎರಡನೇ ಮದುವೆ' ಮತ್ತು ಧರ್ಮ ಕೀರ್ತಿರಾಜ್ ಅಭಿನಯದ 'ಒಲವೇ ವಿಸ್ಮಯ' ಚಿತ್ರಕ್ಕೆ ಮಾಧ್ಯಮ ಮತ್ತು ಪತ್ರಿಕೆಗಳಿಂದ ಉತ್ತಮ ವಿಮರ್ಶೆ ವ್ಯಕ್ತವಾಗಿದೆ. ಆದರೆ ಈ ಚಿತ್ರಗಳು ಎಷ್ಟರ ಮಟ್ಟಿಗೆ ಯಶಸನ್ನು ಗಳಿಸುತ್ತದೆ ಎಂದು ಕಾದು ನೋಡಬೇಕು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada