For Quick Alerts
  ALLOW NOTIFICATIONS  
  For Daily Alerts

  ತಾರಾ ಮೌಲ್ಯ ಅಳಿಯದೆ ಚಿತ್ರರಂಗ ಉಳಿಯದು

  By Rajendra
  |

  'ನಿರ್ಮಾಪಕರನ್ನು ಅನ್ನದಾತರಂತೆ ಕಾಣದೆ, ತಾರಾಮೌಲ್ಯದ ದರ್ಪ ಮುಂದುವರಿಸಿದರೆ ಸರಕಾರ ಎಷ್ಟೇ ಸವಲತ್ತು ಕೊಟ್ಟರೂ ಕನ್ನಡ ಚಿತ್ರರಂಗ ಉದ್ಧಾರವಾಗದು...' ಹರಿದ ಪ್ಯಾಂಟ್ ಸರಿಪಡಿಸಿಕೊಳ್ಳಲು ಐದು ರೂ.ಗೆ ಅಲೆದಾ ಡಿದ್ದ ನಿರ್ದೇಶಕ ಸಿದ್ದಲಿಂಗಯ್ಯನವರ ಮಾತಿದು.

  ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಮಾತನಾಡಿ,ಯುವ ಕಲಾವಿದರು ಹಾಗೂ ನಿರ್ಮಾಪಕರು ಯಶಸ್ಸಿಗೆ ಅಡ್ಡ ದಾರಿ ಹಿಡಿಯಬಾರದು ಎಂದರು. ಒಂದು ಚಿತ್ರ ಗೆದ್ದ ಕೂಡಲೇ ನಾಯಕ ಸಂಭಾವನೆ ಕೋಟಿ ರೂ.ಗೆ ಹೆಚ್ಚಿಸಿಕೊಳ್ಳುತ್ತಾನೆ. ಮೊದಲ ಚಿತ್ರದ ಸಮಯದಲ್ಲಿ ನಿರ್ಮಾಪಕನ ಮನೆ ಕಾಯುವ ನಾಯಕ, ಚಿತ್ರ ಗೆದ್ದ ಮೇಲೆ ನಿರ್ಮಾಪಕನನ್ನು ಕಾಯಿಸುತ್ತಾನೆ. ಚಿತ್ರದ ಯಶಸ್ಸಿನಲ್ಲಿ ನಿರ್ದೇಶಕನದ್ದೇ ಬಹುಪಾಲು. ಅದನ್ನು ಯುವ ನಟರು ಅರಿತುಕೊಳ್ಳಬೇಕು ಎಂದರು.

  ತಾರಾ ಮೌಲ್ಯಕ್ಕೆ ಬೆಲೆ ಕೊಡುತ್ತ ಹೋದರೆ ಒಳ್ಳೆಯ ಚಿತ್ರಗಳು ಬರುವುದಿಲ್ಲ. ಎಲ್ಲವನ್ನೂ ನಾಯಕನೇ ನಿರ್ಧರಿಸಿದ ರೆ, ನಿರ್ದೇಶಕನ ಮೌಲ್ಯವೇನು? ಅಪ್ಪ ಮಾಡಿಟ್ಟ ಆಸ್ತಿ ಕರಗಿಸಲು, ಹಣ ಮಾಡಲು ಸಿನಿಮಾ ಬಗ್ಗೆ ಗೊತ್ತಿಲ್ಲದವರೂ ನಿರ್ಮಾಪಕರಾಗುತ್ತಿದ್ದಾರೆ. ಇಂತಹವರು ಇರೋವರೆಗೆ, ಸರಕಾರ ಏನೇ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ನೀಡಿದರೂ, ಕನ್ನಡ ಸಿನಿಮಾ ಉದ್ದಾರ ಆಗೋದಿಲ್ಲ. ಸಬ್ಸಿಡಿ,ತೆರಿಗೆ ವಿನಾಯಿತಿಯ ಅಗತ್ಯವಿಲ್ಲ.ಅದನ್ನು ನಿಲ್ಲಿಸಲಿ.

  ರಾಜ್‌ಕುಮಾರ್ ನಿರ್ಮಾಪಕರನ್ನು ಅನ್ನದಾತ ಎನ್ನುತ್ತಿದ್ದರು. ನಾವೆಲ್ಲವೂ ಅದೇ ರೀತಿ ಭಾವಿಸಿದ್ದೆವು. ಅವರಿಗೆ ಗೌರವ ನೀಡುತ್ತಿದ್ದೆವು. ನಿರ್ದೇಶಕ ಅಥವಾ ನಿರ್ಮಾಪಕರ ಮುಂದೆ ರಾಜ್‌ಕುಮಾರ್ ಸಿಗರೇಟು ಸೇದುತ್ತಿರಲಿಲ್ಲ. ಇಂದು ಒಂದು ಚಿತ್ರ ಗೆದ್ದರೆ, ಕಾಲು ಮೇಲೆ ಕಾಲು ಹಾಕುತ್ತಾರೆ. ಯಾರನ್ನೂ ಕೇರ್ ಮಾಡೋಲ್ಲ. ಸಿನಿಮಾ ರಂಗಕ್ಕೆ ಬರೋವ್ರಿಗೆ ಫೀಲ್ಡ್ ಬಗ್ಗೆ ತಿಳಿಸಿಕೊಡಿ.ಅನಂತರ ಛೇಂಬರ್ ಅಥವಾ ಇತರ ಸಂಘದ ಸದಸ್ಯತ್ವ ನೀಡಿ.

  ವಿತರಕರೇ ಫೈನಾನ್ಷಿಯರ್‌ಗಳಾಗಿ, ರೌಡಿ ಸಂಸ್ಕೃತಿ ಪ್ರದರ್ಶಿಸುತ್ತಿದ್ದಾರೆ. ಹಳೆಯ ಕಲಾವಿದರು-ಇಂದಿನವರ ನಡುವೆ ಸಂವಾದ ಏರ್ಪಡಿಸಿ, ಹಿಂದಿನವರ ಸಂಕಷ್ಟ ಹಾಗೂ ನಿಷ್ಟೆ ಬಗ್ಗೆ ತಿಳಿಸಿಕೊಡಬೇಕು. ನೀವು ಹಳೇ ಕಾಲದಲ್ಲೇ ಇದ್ದೀರಿ. ನಿಮ್ಮ ಕಥೆ, ಡೈರೆಕ್ಷನ್ ಈಗ ಓಡೋಲ್ಲ ಎಂದು ನಿರ್ಮಾಪಕರು ಹೇಳುತ್ತಾರೆ. ಅಂದ್ರೆ ಈಗ ಅಮ್ಮನನ್ನು ಅಪ್ಪ ಅನ್ನುತ್ತಾರಾ? ನಾಲಿಗೆಗೆ ಬೇಲಿ ಇಲ್ಲ. ನಿರ್ದೇಶಕನಿಗೆ ಗೌರವ ಇಲ್ಲ. ಕಾಡಿ ಬೇಡಿ ಗಂಜಿ ಕುಡಿಯಲು ನಂಗಿಷ್ಟ ಇಲ್ಲ. ಸಿನಿಮಾಕ್ಕೆ ನಿರ್ದೇಶಕ ಹೆಡ್‌ಮಾಸ್ಟರ್ ಇದ್ದಂಗೆ. ಆದರೆ, ಇಂದು ಅವನನ್ನು ಕೇರ್ ಮಾಡುತ್ತಿಲ್ಲ.

  'ಸಂಭವಾಮಿ ಯುಗೇ' ಚಿತ್ರ ಸೋತಾಗ, 28 ಲಕ್ಷ ರೂ. ನಷ್ಟ ಉಂಟಾಗಿತ್ತು. ನಡೆದು ಹೋಗುತ್ತಿದ್ದಾಗ ಕಾರಲ್ಲಿ ಬಂದ ಸ್ನೇಹಿತ, ಕರೆದು ಕೂರಿಸಿಕೊಂಡು ಸಾಲ ಮಾಡಿ ಇಟ್ಟುಕೊಂಡಿದ್ದ 100 ರೂ.ನಲ್ಲಿ ಪೆಟ್ರೋಲ್ ಹಾಕಿಸಿದ.ಅಂದಿನಿಂದ ಅವನನ್ನು ಕಂಡರೆ ಮುಖಮರೆಸಿಕೊಳ್ಳುತ್ತೇನೆ. ಇನ್ನೊಮ್ಮೆ, ಸ್ನೇಹಿತನಿಗಾಗಿ ಹೆಂಡತಿಯ ಒಡವೆಗಳನ್ನು ಅಡ ಇಟ್ಟಿದ್ದೆ.

  ಕಲಾಭಿಮಾನಿಗಳು ಕೆಟ್ಟ ಚಿತ್ರಗಳನ್ನು ತಿರಸ್ಕರಿಸಿದರೆ, ಹೊಡಿ-ಬಡಿ-ರೌಡಿ ಚಿತ್ರಗಳು ಬರುವುದಿಲ್ಲ. ನಮ್ಮಲ್ಲಿ ಉತ್ತಮ ಕಥೆಗಳಿವೆ.ಅವನ್ನು ಬಳಸಿಕೊಳ್ಳಬೇಕಷ್ಟೇ. ಮೊದಲಿನಿಂದಲೂ ಕನ್ನಡಿಗರು ಬೇರೆ ಭಾಷೆಗಳ ಚಿತ್ರ ನೋಡುತ್ತಿದ್ದರು. ಅವುಗಳಿಂದ ನಮ್ಮ ಚಿತ್ರಗಳಿಗೆ ಸಮಸ್ಯೆ ಇಲ್ಲ. ನೂರು ಒಳ್ಳೆ ಚಿತ್ರ ಕೊಟ್ಟ ಮೇಲೆ ಒಂದು ಚಿತ್ರ ವಿಫಲವಾದರೆ, ನಿರ್ದೇಶಕನನ್ನು ಎಲ್ಲರೂ ತೆಗಳುತ್ತಾರೆ. ಸರಕು ಖಾಲಿ ಆಯ್ತು ಎನ್ನುತ್ತಾರೆ.ಹೀಗಾಗಿ, ನಿರ್ದೇಶಕ ಯಾವತ್ತೂ ಕ್ರಿಯಾಶೀಲನಾಗಿ ರಬೇಕು.ಬರಹಗಾರರು, ಸಾಹಿತಿಗಳಿಗೆ ಮಹತ್ವ ನೀಡಬೇಕು.

  'ಬಂಗಾರದ ಮನುಷ್ಯ','ಭೂತಯ್ಯನ ಮಗ ಅಯ್ಯು' ಚಿತ್ರದಿಂದ ಸಾಕಷ್ಟು ಜನ ಬದಲಾಗಿದ್ದಾರೆ. ಅದನ್ನು ನನಗೆ ಹೇಳಿದಾಗ ನನ್ನ ಬದುಕು ಧನ್ಯ ಎನಿಸಿತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ, ಪತ್ರಕರ್ತ ಸುಬ್ಬರಾವ್ ನಿರೂಪಿಸಿದರು. ಪುಟ್ಟಸ್ವಾ ಮಿ ಅವರ 'ಸಿನಿಮಾ ಯಾನ" ಪುಸ್ತಕದ ಭಾಗಗಳನ್ನು ವಾಚಿಸಲಾಯಿತು. ಸಿದ್ದಲಿಂಗಯ್ಯನವರು ಲೇಖಕರನ್ನು ಅಭಿನಂದಿಸಿದರು. (ಸ್ನೆಹಸೇತು: ವಿಜಯ ಕರ್ನಾಟಕ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X