»   » ಗಡಿ, ಭಾಷೆ ಮೀರಿರುವ ಸುದೀಪ್ ಸ್ನೇಹಬಳಗ

ಗಡಿ, ಭಾಷೆ ಮೀರಿರುವ ಸುದೀಪ್ ಸ್ನೇಹಬಳಗ

Posted By:
Subscribe to Filmibeat Kannada
Just Maat Matalli director Sudeep
ಇಂದು ಬೆಂಗಳೂರಿನ ಲೀ ಮೆರೀಡಿಯನ್ ಹೊಟೇಲಿನಲ್ಲಿ 'ಕಿಚ್ಚ' ಸುದೀಪ್ ನಟನೆ, ನಿರ್ದೇಶನದ ಚಿತ್ರ 'ಜಸ್ಟ್ ಮಾತ್ ಮಾತಲ್ಲಿ'ಯ ಆಡಿಯೋ ಬಿಡುಗಡೆ ಸಮಾರಂಭ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಸಿನೆಮಾ ಚಿತ್ರರಂಗಗಳ ಸಮಾಗಮದಂತಿತ್ತು.

ರಾಮ್ ಗೋಪಾಲ್ ವರ್ಮಾ ಚಿತ್ರ 'ರಕ್ತ ಚರಿತ್ರ'ದಲ್ಲಿ ಸುದೀಪ್ ಜೊತೆ ನಟಿಸುತ್ತಿರುವ ಹಿಂದಿ ನಟ ವಿವೇಕ್ ಓಬೆರಾಯ್ ಸುದೀಪ್ ಜೊತೆಗಿನ ಆತ್ಮೀಯತೆಯನ್ನು ಜಗಜ್ಜಾಹೀರು ಮಾಡಿದ್ದಾರೆ. ಬೆಂಗಳೂರಿಗೆ ಬಂದಾಗ ಸುದೀಪ್ ಮನೆಯಲ್ಲಿ ಊಟ ಮಾಡಿದ್ದಾರೆ. ಸುದೀಪ್ ಅವಕಾಶ ಕೊಟ್ಟರೆ ಕನ್ನಡ ಚಿತ್ರದಲ್ಲಿಯೂ ಅಭಿನಯಿಸಲು ಸೈ ಅಂತ ಹೇಳಿದ್ದಾರೆ. ಆತ ಉತ್ತಮ ನಟ ಮಾತ್ರವಲ್ಲ ಆತನಿಂದ ಕಲಿಯುವುದು ಸಾಕಷ್ಟಿದೆ ಎಂದು ವಿವೇಕ್ ಹೇಳಿರುವುದು ಸುದೀಪ್ ವೃತ್ತಿಪರತೆಗೆ ಹಿಡಿದ ಕನ್ನಡಿ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸುದೀಪ್, ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ತಮಿಳು ಮತ್ತು ತೆಲುಗು ಚಿತ್ರಗಳನ್ನೂ ಕನ್ನಡ ಚಿತ್ರರಂಗದೊಡನೆ ಬೆಸೆದಿದ್ದಾರೆ. ಹಿಂದಿ ನಟ ವಿವೇಕ್ ಓಬೆರಾಯ್, ತೆಲುಗಿನ ಖ್ಯಾತ ನಟ ಜಗಪತಿ ಬಾಬು ಮತ್ತು ತಮಿಳಿನ ಉದಯೋನ್ಮುಖ ನಟ ಸಿಂಬು ಜಸ್ಟ್ ಮಾತ್ ಮಾತಲ್ಲಿ ಆಡಿಯೋ ಬಿಡುಗಡೆಗೆ ವಿಶೇಷ ಕಳೆ ತಂದಿದ್ದರು.

ಸುದೀಪ್ ಸ್ನೇಹದಿಂದಾಗಿಯೇ ಆಡಿಯೋ ಬಿಡುಗಡೆಗಾಗಿ ಮುಂಬೈನಿಂದ ಆಗಮಿಸಿದ್ದ ವಿವೇಕ್, ಸುದೀಪ್ ಗೆ ಸ್ನೇಹಿತ ಮಾತ್ರವಲ್ಲ ನಾನು ಆತನ ಅಭಿಮಾನಿ ಎಂದು ಹೇಳಿದರು. ತಮ್ಮ ಚಿತ್ರಗಳ ಕಾರ್ಯಕ್ರಮದಲ್ಲಿಯೇ ಭಾಗವಹಿಸದ ತೆಲುಗಿನ ಜಗಪತಿ ಬಾಬು ಸುದೀಪ್ ಚಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದರು. ಸಿನೆಮಾದ ಬಗ್ಗೆ ಸುದೀಪ್ ಗೆ ಇರುವ ಪ್ಯಾಷನ್ ಮತ್ತು ಆತನ ವ್ಯಕ್ತಿತ್ವ ನೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಎಂದು ಹೇಳಿದ ಜಗಪತಿ ಬಾಬು ಸುದೀಪ್ ರನ್ನು ಹಾಡಿ ಹೊಗಳಿದರು.

ಸಿಂಬು ಕೂಡ ಸುದೀಪ್ ರನ್ನು ದಕ್ಷಿಣದ ಫಿಲಂಫೇರ್ ಸಿನೆಮಾ ಪ್ರಶಸ್ತಿ ಸಮಾರಂಭಗಳಲ್ಲಿ ಅನೇಕ ಬಾರಿ ನೋಡಿದ್ದರಂತೆ. ಸುದೀಪ್ ನಲ್ಲಿ ಅಡಗಿರುವ ಪ್ರತಿಭೆ ಮತ್ತು ಮಾನವೀಯತೆಯ ಸೆಳಕು ನೋಡಿ ಸಮಾರಂಭದಲ್ಲಿ ಭಾಗವಹಿಸಿದೆ ಎಂದು ಸಿಂಬು ನುಡಿದರು.

ಕಾರ್ಯಕ್ರಮದಲ್ಲಿ ಅಂಬರೀಷ್, ರಾಕ್ ಲೈನ್ ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು. ಜಸ್ಟ್ ಮಾತ್ ಮಾತಲ್ಲೇ ಸುದೀಪ್ ಜೊತೆ ಕಿರಿಕ್ ಮಾಡಿಕೊಂಡಿರುವ ರಮ್ಯಾ ಭಾಗವಹಿಸಿರಲಿಲ್ಲ. ಸುದೀಪ್ ನಿರ್ದೇಶನದ ಚಿತ್ರವನ್ನು ಶಂಕರೇಗೌಡರು ನಿರ್ಮಿಸುತ್ತಿದ್ದಾರೆ. ಸೈಕೋ ಚಿತ್ರದಿಂದ ವಿಭಿನ್ನ ಸಂಗೀತ ಗುಂಗು ಹಿಡಿಸಿರುವ ರಘು ದೀಕ್ಷಿತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅವರ ಸಂಗೀತ ಸಂಯೋಜನೆಯ ಎರಡು ಹಾಡುಗಳನ್ನು ಅಪಾರವಾಗಿ ಸೇರಿದ ಜನಸ್ತೋಮಕ್ಕೆ ಕೇಳಿಸಲಾಯಿತು. ಈ ಹಾಡುಗಳಿಗೆ ರಘು ದೀಕ್ಷಿತ್ ಒಂದೂವರ್ಷದ ಹಿಂದೆಯೇ ರಾಗ ಸಂಯೋಜಿಸಿದ್ದರು. ಚಿತ್ರ ಜನವರಿ 15ರಂದು ಬಿಡುಗಡೆಯಾಗುತ್ತಿದೆ.

ಜಸ್ಟ್ ಮಾತ್ ಮಾತಲ್ಲಿ ಚಿತ್ರವನ್ನು ಹಿಂದಿಯಲ್ಲಿಯೂ ನಿರ್ಮಿಸಲು ಸುದೀಪ್ ತಯಾರಿ ನಡೆಸಿದ್ದಾರೆ ಇದಕ್ಕಾಗಿ ಜಾನ್ ಅಬ್ರಹಾಂ ಅಥವಾ ಶಾಹೀದ್ ಕಪೂರ್ ಅವರನ್ನು ಪ್ರಮುಖ ಭೂಮಿಕೆಯಲ್ಲಿ ನಟಿಸಲು ಕೇಳಿದ್ದಾರೆ. ನಾಯಕಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಅಥವಾ ಗಜನಿ ಖ್ಯಾತಿಯ ಅಸಿನ್ ಅವರನ್ನು ಕೋರಿದ್ದಾರೆನ್ನಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada