»   »  ಗಲ್ಲಾಪೆಟ್ಟಿಗೆಯಲ್ಲಿ ಜೋಶ್, ಸವಾರಿಗಳ ಗದ್ದಲ

ಗಲ್ಲಾಪೆಟ್ಟಿಗೆಯಲ್ಲಿ ಜೋಶ್, ಸವಾರಿಗಳ ಗದ್ದಲ

Posted By: *ಜಯಂತಿ
Subscribe to Filmibeat Kannada
Josh movie still
ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದಲೋ, ಸಿನಿಮಾಗಳ ಬಗ್ಗೆ ಒಳ್ಳೆಯ ವಿಮರ್ಶೆ ಪ್ರಕಟವಾಗಿರುವುದರಿಂದಲೋ- ಕಾರಣ ಯಾವುದಾದರೂ ಇರಲಿ, 'ಸವಾರಿ" ಹಾಗೂ 'ಜೋಶ್" ಚಿತ್ರಗಳ ಬಗೆಗಿನ ಗಲ್ಲಾಪೆಟ್ಟಿಗೆ ರಿಪೋರ್ಟ್ ಚೆನ್ನಾಗಿದೆ. ಓಪನಿಂಗ್ ಸುಮಾರಾಗಿದ್ದರೂ, ಸಿನಿಮಾದ ಬಗೆಗಿನ ಮೌಖಿಕ ಮೆಚ್ಚುಗೆ ವ್ಯಾಪಕವಾಗಿರುವುದರಿಂದ ಜನ ಥಿಯೇಟರ್‌ಗೆ ನಿಧಾನವಾಗಿ ಬರುತ್ತಿದ್ದಾರೆ.

'ಜೋಶ್" ಚಿತ್ರ ನಿರ್ದೇಶಕ ಶಿವಮಣಿ ಹಾಗೂ ನಿರ್ಮಾಪಕ ಎಸ್.ವಿ.ಬಾಬು ಅವರಿಗೆ ಅಗ್ನಿಪರೀಕ್ಷೆ ರೀತಿಯ ಚಿತ್ರವಾಗಿತ್ತು. ಸಾಲು ಸಾಲು ಸೋಲುಗಳಿಂದ ಇಬ್ಬರೂ ಕಂಗೆಟ್ಟಿದ್ದರು. ಈ ಚಿತ್ರ ಸೋತಿದ್ದರೆ ಗಟ್ಟಿಕುಳ ಬಾಬು ತಡಕೊಳ್ಳುತ್ತಿದ್ದರೇನೊ, ಶಿವಮಣಿ ಅವರಿಗಂತೂ ಆ ಸೋಲು ದೊಡ್ಡ ಆಘಾತ ತರುತ್ತಿತ್ತು. ಆ ಎಚ್ಚರದಿಂದಲೇ ಶಿವಮಣಿ ಅಪಾರ ಎಚ್ಚರಿಕೆಯಿಂದ 'ಜೋಶ್" ರೂಪಿಸಿದ್ದರು. ಪ್ರತಿಭಾಶೋಧ ನಡೆಸಿ ಹೊಸ ಹುಡುಗರ ತಂಡ ಕಟ್ಟಿದ್ದರು. ಆ ತಂಡಕ್ಕೆ ತರಬೇತಿ ಕೊಡಿಸಿ ಅಭಿನಯವನ್ನೂ ಅಚ್ಚುಕಟ್ಟಾಗಿ ತೆಗೆದಿದ್ದಾರೆ. ಈ ಪೀಳಿಗೆಗೆ ಆಪ್ತವಾಗುವ ಕಥೆ ಹೆಣೆದಿದ್ದಾರೆ. ಪರಿಣಾಮವಾಗಿ 'ಜೋಶ್" ಗೆದ್ದಿದೆ.

'ಜೋಶ್" ಗೆಲುವು ಶಿವಮಣಿಗೆ ಖುಷಿ ತಂದಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತಲ್ಲ ಎನ್ನುವ ನಿರಾಳ ಅವರದ್ದು. ಈ ಗೆಲುವಿನಿಂದ ಉತ್ತೇಜಿತರಾಗಿರುವ ಅವರು, ಜೋಶ್ ಮಾದರಿಯಲ್ಲೇ ಮತ್ತಷ್ಟು ಕಥೆ ಹೆಣೆಯಲು ಸಿದ್ಧರಾಗಿದ್ದಾರೆ.

ಗೆಲುವಿನ ಸವಾರಿ: 'ಜೋಶ್" ಜೊತೆಯಲ್ಲೇ ಬಿಡುಗಡೆಯಾದ 'ಸವಾರಿ" ಚಿತ್ರದ ರಿಪೋರ್ಟ್ ಕೂಡ ಸಮಾಧಾನಕರವಾಗಿದೆ. ರಘು ಮುಖರ್ಜಿ ಮತ್ತು ಶ್ರೀನಗರ ಕಿಟ್ಟಿಯ ನಟನೆಯ ಬಗ್ಗೆ ಒಳ್ಳೆಯ ಮಾತುಗಳಿವೆ. ಸಂಭಾಷಣೆಕಾರ ಮಂಜು ಮಾಂಡವ್ಯ ಚಿತ್ರದ ಮತ್ತೊಬ್ಬ ಹೀರೊ.

'ಸವಾರಿ" ತೆಲುಗಿನ 'ಗಮ್ಯಂ" ಚಿತ್ರದ ಕನ್ನಡರೂಪ. ಅದೊಂದು ಕೊರಗು ಬಿಟ್ಟರೆ ಸಿನಿಮಾ ಅಚ್ಚುಕಟ್ಟಾಗಿದೆ. ಕನ್ನಡದ್ದೇ ಚಿತ್ರ ಎನ್ನುವಷ್ಟು ಶ್ರದ್ಧೆಯಿಂದ ನಿರ್ದೇಶಕ ವರ್ಗೀಸ್ 'ಸವಾರಿ" ರೂಪಿಸಿದ್ದಾರೆ. 'ಸವಾರಿ" ಗೆಲುವು ರೀಮೇಕ್ ತಯಾರಕರಿಗೆ ನೀರೆರೆಯುವಂತಿದೆ. ಶ್ರೀನಗರ ಕಿಟ್ಟಿಗೆ ಮತ್ತೊಂದು ರೀಮೇಕ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಹಿಂದಿಯ 'ರು ಬ ರು" ಸಿನಿಮಾ ಕನ್ನಡಕ್ಕೆ ಬರುತ್ತಿದ್ದು, ಮುಖ್ಯಪಾತ್ರದಲ್ಲಿ ಕಿಟ್ಟಿ ನಟಿಸುತ್ತಿದ್ದಾರೆ.

ಸದ್ಯಕ್ಕೆ ರೀಮೇಕ್ ಒಳಿತು ಕೆಡುಕುಗಳ ಬಗ್ಗೆ ಯೋಚಿಸುವ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗವಿಲ್ಲ. ಉದ್ಯಮಕ್ಕೆ ಜರೂರಾಗಿ ಬೇಕಾಗಿರುವುದು ಒಂದಷ್ಟು ಗೆಲುವು. ಆ ಗೆಲುವು ಯಾವ ರೂಪದಲ್ಲಿ ದೊರೆತರೂ ಬೇಡ ಎನ್ನುವ ಸ್ಥಿತಿಯಲ್ಲಿ ಯಾರೂ ಇಲ್ಲ.

ಏ ಮಚ್ಚಾ ಶಿವಮಣಿ ಜೋಶ್ ಸೂಪರ್ ಮಗಾ!
ಜೋಶ್ ನಟರಿಗೆ ಪಲ್ಸಾರ್ ಬೈಕ್ ಗಳ ಸಂಭಾವನೆ!
ಪ್ರೇಮದ ಪಯಣ ಹೊರಡಲು ಸವಾರಿ ಸಿದ್ಧ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada