»   » ಸಾಯಿ ಪ್ರಕಾಶ್‌ರನ್ನು ಮೀರಿಸಿದ ಮುನಿರತ್ನ ಡೈಲಾಗ್

ಸಾಯಿ ಪ್ರಕಾಶ್‌ರನ್ನು ಮೀರಿಸಿದ ಮುನಿರತ್ನ ಡೈಲಾಗ್

Posted By:
Subscribe to Filmibeat Kannada

ಅದ್ಭುತ ತಂಗಿ ಸೆಂಟಿಮೆಂಟಿನ ಡೈಲಾಗ್ ಹೊಡೆಯುವ ಮೂಲಕ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಸಾಯಿ ಪ್ರಕಾಶ್‌ರನ್ನು ಮೀರಿಸಿದ್ದಾರೆ! ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮುಂದಿನ ಜನ್ಮದಲ್ಲಿ ನನಗೆ ತಂಗಿಯಾಗಿ ಹುಟ್ಟಿಬರಲಿ ಎಂದಿದ್ದಾರೆ. ನಟ ದರ್ಶನ್ ಪತ್ನಿ ಮೇಲೆ ಕೈ ಮಾಡಿ ಪೊಲೀಸರ ಅತಿಥಿಯಾಗಿದ್ದೇ ತಡ, ಮುನಿರತ್ನಂ ತರಾತುರಿಯಲ್ಲಿ ನಿಖಿತಾ ಮೇಲೆ ಮೂರು ವರ್ಷ ನಿಷೇಧ ಹೇರಿಬಿಟ್ಟರು. ತನ್ನದೇನು ತಪ್ಪಿಲ್ಲದಿದ್ದರೂ ನಿಖಿತಾ ಮೇಲೆ ಬರೆ ಎಳೆದುಬಿಟ್ಟಿತ್ತು ನಿರ್ಮಾಪರ ಸಂಘ.

ಆಗ ಶುರುವಾಯಿತು ನೋಡಿ ಕನ್ನಡ ಚಿತ್ರರಂಗದ ಅಸಲಿ ಫೈಟ್. ಒಂದು ಕಡೆಯಿಂದ ಕಲಾವಿದರು ಇನ್ನೊಂದು ಕಡೆಯಿಂದ ಪಾರ್ವತಮ್ಮ ರಾಜ್‌ಕುಮಾರ್ ಹಿಗ್ಗಾ ಮುಗ್ಗಾ ಬೆಂಡೆತ್ತಿದರು. ಆಗ ಎಚ್ಚೆತ್ತುಕೊಂಡ ನಿರ್ಮಾಪಕರ ಸಂಘ ಕೆಟ್ಟೆನಪ್ಪೋ ಕೆಟ್ಟೆ ಎಂದು ಎದ್ದನೋ ಬಿದ್ದನೋ ಎಂದು ಸಭೆ ನಡೆಸಿಬಿಡ್ತು. ಸಭೆಯಲ್ಲಿ ನಿಖಿತಾ ಮೇಲಿನ ನಿಷೇಧವನ್ನು ವಾಪಸ್ ಪಡೆಯುತ್ತಿರುವುದಾಗಿಯೂ ಘೋಷಿಸಿದರು.

ಬಳಿಕ ಇಂಗುತಿಂದ ಮಂಗನಂತಾಗಿದ್ದ ಸಂಘದ ಪದಾಧಿಕಾರಿಗಳು ನಿಖಿತಾಗೆ ಬರೆದ ಒಂದು ಪತ್ರವನ್ನೂ ಓದಿದರು. ಕನ್ನಡದ ಉತ್ತಮ ಸಂಪ್ರದಾಯದ, ಸುಸಂಸ್ಕೃತ ಗೌರವಸ್ಥ ಸಾದ್ವಿ, ಸದ್ಗುಣ ಸಂಪನ್ನೆ, ಕಳಂಕ ರಹಿತ ಹಾಲಿನ ಮನಸ್ಸಿಗೆ ಸಮಾನರಾದ ಭಾರತದ ಬಹುಭಾಷಾ ನಟಿ ನಿಖಿತಾ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯುತ್ತಿದ್ದೇವೆ. ನಿಷೇಧ ಹೇರಿದ್ದು ನಮ್ಮ ಮೂರ್ಖತನ ಎಂದು ಒಂದು ಮೊಳ ಉದ್ದದ ಪತ್ರದಲ್ಲಿ ಕ್ಷಮೆ ಕೋರಿದರು.

ನಟಿ ನಿಖಿತಾ ಅವರು ಕರ್ನಾಟಕದಲ್ಲಿ ಇನ್ನು ಮುಂದೆ ಎಲ್ಲಿಗೆ ಬೇಕಾದರೂ ಹೋಗಬಹುದು. ಯಾವ ಚಿತ್ರದಲ್ಲಿ ಬೇಕಾದರೂ ಅಭಿನಯಿಸಬಹುದು. ನಮ್ಮದೇನು ತಕರಾರು, ಅಭ್ಯಂತರವಿಲ್ಲ. ನಮ್ಮ ತಪ್ಪನ್ನು ತಿದ್ದುಕೊಂಡಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ಬ್ಯಾನ್ ಎಂಬ ಪದಕ್ಕೆ ಬ್ಯಾನ್ ಮಾಡಿದ್ದೇವೆ ಎಂದರು.

ಇಷ್ಟಲ್ಲಾ ಓದಿದ ಮುನಿರತ್ನ ಕಡೆಗೆ ಹೇಳಿದ್ದೇನೆಂದರೆ, ಹಾಗೆಯೇ ವಿಜಯಲಕ್ಷ್ಮಿ ಅವರನ್ನು ನೋಡಲು ಹೋಗಿದ್ದು ತಪ್ಪು. ಅವರ ಆರೋಗ್ಯ ವಿಚಾರಿಸಿದ್ದೂ ತಪ್ಪು. ಅವರ ಮಾತುಗಳನ್ನು ಕೇಳಿ ಮರುಗಿದ್ದೂ ತಪ್ಪು. ತಮಗೆ ಮುಂದಿನ ಜನ್ಮವೆಂಬುದು ಇದ್ದರೆ ವಿಜಯಲಕ್ಷ್ಮಿ ನನ್ನ ತಂಗಿಯಾಗಿ ಹುಟ್ಟಿಬರಲಿ ಎಂದು ನಾನು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಎ ಗಣೇಶ್, ಗೌರವ ಕಾರ್ಯದರ್ಶಿ ಸೂರಪ್ಪಬಾಬು, ಖಜಾಂಚಿ ಪ್ರವೀಣ್ ಕುಮಾರ್, ನಿರ್ಮಾಪಕರಾದ ಎನ್ ಎಂ ಸುರೇಶ್, ಅಣಜಿ ನಾಗರಾಜ್, ಉಮೇಶ್ ಬಣಕಾರ್, ರಾಮಮೂರ್ತಿ ಸೇರಿದಂತೆ ಉಪಸ್ಥಿತರಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
After withdrawing ban on actress Nikita Thukral, Kannada film Producers' Association president Munirathna apologies the actress. Munirathna admitted that the decision was not only "hasty" but also "foolish". Terming the ban a mistake, in a letter addressed to the actress, he regretted having defamed such a "cultured" and "talented" actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada