»   »  ವೆಂಕಟ ಇನ್ ಸಂಕಟನಿಗೆ ನೂರಾರು ಸಂಭ್ರಮ

ವೆಂಕಟ ಇನ್ ಸಂಕಟನಿಗೆ ನೂರಾರು ಸಂಭ್ರಮ

Subscribe to Filmibeat Kannada
Ramesh Aravind delivers projects on schedule
ಸಿನಿಮಾ ಪತ್ರಿಕಾಗೋಷ್ಠಿಗಳೆಂದರೆ ಆ ಚಿತ್ರದ ನಟ ನಟಿಯರು,ತಂತ್ರಜ್ಞರ ಮಾತುಗಳು ಮತ್ತು ಇಡೀ ದಂಡು ಕೊನೆಯಲ್ಲಿ ಒಂದಷ್ಟು ಗುಂಡು. ಆದರೆ 'ವೆಂಕಟ ಇನ್ ಸಂಕಟ' ನೂರು ದಿನಗಳ ಚಿತ್ರೀಕರಣ ಪೂರೈಸಿದ್ದಕ್ಕಾಗಿ ನಟ ರಮೇಶ್ ಅರವಿಂದ್ ಕರೆದಿದ್ದ ಪತ್ರಿಕಾಗೋಷ್ಠಿ (ಜ.12)ಕೊಂಚ ಭಿನ್ನವಾಗಿತ್ತು.

ಪತ್ರಿಕಾಗೋಷ್ಠಿಗಳಿಗೆ ಹಾಜರಾಗಿ ಸಿನಿಮಾ ಸುದ್ದಿಗಳನ್ನು ಬರೆದೂ ಬರೆದು ಕೈ ಸೋತು ಹೋಗಿದ್ದ ಪತ್ರಕರ್ತರು ಅಂದು ಒಂಚೂರು ರಿಲ್ಯಾಕ್ಸ್ ಆದರು. ಕಾರಣ ಅಂದು ಪತ್ರಿಕಾಗೋಷ್ಠಿಗೆ ಹಾಜರಿದ್ದ ಡ್ರಮ್ ಸರ್ಕಲ್ ಯುವಕರು ಪತ್ರಕರ್ತರ ಕೈಯಲ್ಲಿ ಡ್ರಮ್ ಬಡಿಸಿ, ಕುಣಿಸಿದರು! ಈ ಅಪರೂಪದ ಕ್ಷಣಗಳು ಎಲ್ಲಿ ಕಳೆದು ಹೋಗುತ್ತವೋ ಎಂದು ಪತ್ರಿಕಾ ಛಾಯಾಗ್ರಾಹಕರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುತ್ತಿದ್ದರು.ತಮ್ಮ ವಿಭಿನ್ನ ಪತ್ರಿಕಾಗೋಷ್ಠಿಯಿಂದ 'ವೆಂಕಟ ಇನ್ ಸಂಕಟ' ನಿರ್ದೆಶಕ ರಮೇಶ್ ಪತ್ರಕರ್ತರ ಸಂಕಟವನ್ನು ಮರೆಸಿದ್ದಾರೆ. ಇದಕ್ಕಾದರೂ ಅವರಿಗೆ ಥ್ಯಾಂಕ್ಸ್ ಹೇಳಲೇ ಬೇಕು!

'ಗುಲಾಬಿ ಟಾಕೀಸ್ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಉಮಾಶ್ರೀ ಮೇಡಂ 'ವೆಂಕಟ ಇನ್ ಸಂಕಟ" ಚಿತ್ರದ ಪತ್ರಿಕಾಗೋಷ್ಠಿಗೆ ಕೊಂಚ ತಡವಾಗಿ ಆಗಮಿಸಿದರು. ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾದ ನಂತರ ಉಮಾಶ್ರೀ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಈ ಕಾರ್ಯಕ್ರಮದಲ್ಲೆ. ಉಮಾಶ್ರೀಯವರನ್ನು ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ನೇರವಾಗಿ ವೇದಿಕೆಗೆ ಕರೆದು ಶುಭಾಷಯ ಕೋರಿದ್ದು ವಿಶೇಷವಾಗಿ ಕಾಣಿಸಿತು.

ಅಂದಹಾಗೆ ವೆಂಕಟ ಇನ್ ಸಂಕಟ ಚಿತ್ರದಲ್ಲಿ ಮೂವರು ಬೆಡಗಿಯರಿದ್ದಾರೆ. ಶರ್ಮಿಳಾ ಮಾಂಡ್ರೆ, ಮೇಘನಾ ಮತ್ತು ಆಶಾ. ನೂರುದಿನಗಳ ಚಿತ್ರೀಕರಣ ಮುಗಿಸಿರುವ 'ವೆಂಕಟ...' ಶೀಘ್ರದಲ್ಲೇ ಪ್ರೇಕ್ಷಕರ ಸಂಕಟ ಮರೆಸಲು ಚಿತ್ರಮಂದಿರಗಳಿಗೆ ಆಗಮಿಸಲಿದ್ದಾನೆ. ಬರಿ ಹಾಸ್ಯರಸವನ್ನಷ್ಟೇ ರಮೇಶ್ ನಂಬಿಕೊಳ್ಳದೆ ಒಂದಷ್ಟು ಸಾಹಸಕ್ಕೂ ಕೈಹಾಕಿದ್ದಾರೆ. ಇದೊಂದು ಶುದ್ಧ ಮನರಂಜನಾತ್ಮಕ ಚಿತ್ರ. ನೂರು ದಿನಗಳ ನಿಗದಿತ ಸಮಯದಲ್ಲಿ ಚಿತ್ರೀಕರಣ ಮುಗಿಸಿದ್ದೇವೆ. ಇದು ಹಾಸ್ಯ ಚಿತ್ರವಷ್ಟೆ ಅಲ್ಲ ಇದೊಂದು ಮನರಂಜನಾತ್ಮಕ ಚಿತ್ರ. ಶೀಘ್ರದಲ್ಲೆ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದ್ದ್ದು ಫೆಬ್ರವರಿಯಲ್ಲಿ 'ವೆಂಕಟ...' ತೆರೆಗೆ ಬರಲಿದ್ದಾನೆ ಎಂದು ರಮೇಶ್ ತಿಳಿಸಿದರು.

ಚಿತ್ರದ ಮಳೆ ಹಾಡಿನಲ್ಲಿ ಕುಣಿದಿರುವ ಶರ್ಮಿಳಾ ಮಾಂಡ್ರೆ ಇನ್ನೂ ಗುಂಗಿನಿಂದ ಹೊರಬಂದಂತಿರಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಆ ಹಾಡಿನದ್ದೇ ಧ್ಯಾನ! ಈ ಚಿತ್ರ ತನ್ನ ಕನ್ನಡ ಉಚ್ಛಾರಣೆಯನ್ನು ಸಾಕಷ್ಟು ಸುಧಾರಿಸಿತು ಎಂದು ಮತ್ತೊಬ್ಬ ನಾಯಕಿ ಮೇಘನಾ ತಿಳಿಸಿದರು. ನನ್ನ ನಟನೆ ಚೆನ್ನಾಗಿದೆ ಎಂದರೆ ಅದಕ್ಕೆ ಕಾರಣ ರಮೇಶ್. ಇದಕ್ಕೆಲ್ಲಾ ಚಿತ್ರೀಕರಣದಲ್ಲಿನ ಅವರ ಸಹಕಾರವೇ ಕಾರಣ ಎಂದರು ನೀಳ ಕಾಲ್ಗಳ ನಟಿ ಆಶಾ. ವೆಂಕಟ ಇನ್ ಸಂಕಟ ನಿರ್ಮಾಪಕ ನರೇಶ್ ಮಗಲಾನಿ ನಟರಾದ ಮುಖ್ಯಮಂತ್ರಿ ಚಂದ್ರು, ದತ್ತಣ್ಣ, ಉಮೇಶ್, ಭಾಸ್ಕರ್, ಅವರೆಲ್ಲ ತುಂಬ ಖುಷಿಖುಷಿಯಾಗಿ ಮಾತಾಡಿದರು. ಅಲ್ಲಿಗೆ ವೆಂಕಟ ಇನ್ ಸಂಕಟ ಪತ್ರಿಕಾಗೋಷ್ಠಿಯೂ ಮುಗಿದಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)
ವೆಂಕಟ ಇನ್ ಸಂಕಟನಾಗಿ ರಮೇಶ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada