»   » ಡಿಸೆಂಬರ್ ನಲ್ಲಿ ಯೋಗರಾಜಭಟ್ ಹೊಸ ಚಿತ್ರ

ಡಿಸೆಂಬರ್ ನಲ್ಲಿ ಯೋಗರಾಜಭಟ್ ಹೊಸ ಚಿತ್ರ

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ ಭಟ್ ತಮ್ಮ ಗೆಳೆಯ ಸೂರಿಯ ಹಾದಿಯನ್ನು ತುಳಿಯುತ್ತಿದ್ದಾರೆ. ಅಂದರೆ ಕುಡುಕನ ಕಥೆಯನ್ನೋ, ಜಂಗ್ಲಿಯಂಥ ಮಸಾಲೆ ಸಿನಿಮಾವನ್ನೋ ನಿರ್ಮಿಸುತ್ತಿದ್ದಾರೆ ಎಂದರ್ಥವಲ್ಲ. ಪತ್ರಕರ್ತರನ್ನು ದೂರವಿಟ್ಟಿದ್ದಾರೆ ಎಂದೂ ಅರ್ಥವಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರಕ್ಕೆ ಸೂರಿ ಬಂಡವಾಳ ಹೂಡಿದ್ದರಲ್ಲ; ಅದು ಯೋಗರಾಜ ಭಟ್ ಅನುಸರಿಸುತ್ತಿರುವ ಮಾರ್ಗ. ಹಾಂ, ಭಟ್ ನಿರ್ಮಾಪಕರಾಗುತ್ತಿದ್ದಾರೆ!

ಹಾಗೆ ನೋಡಿದರೆ ಭಟ್ಟರಿಗೆ ಸಿನಿಮಾ ನಿರ್ಮಾಣ ಹೊಸತೇನೂ ಅಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರಕ್ಕೆ ಸೂರಿ ಜೊತೆ ಭಟ್ಟರೂ ಬಂಡವಾಳ ಹೂಡಿದ್ದರು. ಅದು ವಾಪಸ್ಸಾಗಿರಲಿಲ್ಲ ಅಷ್ಟೇ! ಪ್ರೀತಿಯಲ್ಲಿ ಪಾಲುದಾರನಾಗಿ ಗಳಿಸಿಲಾಗದ್ದನ್ನು ಈಗ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ಗಳಿಸುವ ಆಸೆ ಅವರದ್ದು.

ಡಿಸೆಂಬರ್‌ನಲ್ಲಿ ಸೆಟ್ಟೇರಲಿರುವ ಭಟ್ಟರ ನಿರ್ಮಾಣ-ನಿರ್ದೇಶನದ ಹೊಸ ಚಿತ್ರದ ನಾಯಕ ದಿಗಂತ್. ಮನಸಾರೆ ಚಿತ್ರದಲ್ಲಿನ ದಿಗಂತ್ ನಟನೆ ಭಟ್ಟರಿಗೆ ಖುಷಿಕೊಟ್ಟಿದೆ. ಸ್ಟಾರ್‌ಗಳಿಗೆ ಕೋಟಿ ಎಣಿಸುವ ಬದಲು ದಿಗಂತ್ ಮೇಲೆ ಬೆಟ್ ಕಟ್ಟುವುದೇ ವಾಸಿ ಎನ್ನೋದು ಭಟ್ಟರ ಲೆಕ್ಕಾಚಾರ. ಹೇಗೂ ನಿರ್ದೇಶಕರಾಗಿ ಭಟ್ಟರ ಸ್ಟಾರ್‌ಗಿರಿ ಶ್ರೀರಕ್ಷೆ ಚಿತ್ರಕ್ಕಿದ್ದೇ ಇರುತ್ತದೆ.

ದಿಗಂತ್‌ಗೆ ನಾಯಕಿಯಾಗಿ ಹರಿಪ್ರಿಯಾಳನ್ನು ಭಟ್ಟರು ಆಯ್ದುಕೊಂಡಿದ್ದಾರೆ. ರಾಜು ತಾಳಿಕೋಟೆ ತಾರಾಗಣದಲ್ಲಿ ಎದ್ದುಕಾಣುವ ಮತ್ತೊಂದು ಮುಖ್ಯ ಹೆಸರು. ಒಂದರ್ಥದಲ್ಲಿ ಭಟ್ಟರು ತಾಳಿಕೋಟೆಯವರ ಅಭಿಮಾನಿಯಂತೆ. ಆರನೇ ವಯಸ್ಸಿನಿಂದಲೇ ತಾಳಿಕೋಟೆಯವರ ಧ್ವನಿ ಕೇಳುತ್ತಾ ಬೆಳೆದವನು ನಾನು. ಅವರ ಧ್ವನಿ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ ಎನ್ನುವುದು ಅವರ ಅಭಿಮಾನದ ಮಾತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada