»   »  ಉಮಾಶ್ರೀಗೆ ಚಿನ್ನದ ಉಡುಗೊರೆ ಕೊಟ್ಟ ಅಂಬಿ!

ಉಮಾಶ್ರೀಗೆ ಚಿನ್ನದ ಉಡುಗೊರೆ ಕೊಟ್ಟ ಅಂಬಿ!

Subscribe to Filmibeat Kannada

''ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉಮಾಶ್ರೀ ಅವರಿಗೆ ಡಾ.ಜಯಮಾಲಾ ಮತ್ತು ಡಾ.ಬಿ.ಸರೋಜಾದೇವಿ ಅವರು ರೇಷ್ಮೆ ಸೀರೆಗಳನ್ನು ಕೊಟ್ಟು ಸನ್ಮಾನಿಸಿದ್ದಾರೆ. ನೀನು ಅವರ ಹಾಗೆ ಸೀರೆ ಕೊಡೋ ಬದಲು ನೆಕ್ಲೇಸ್ ಒಂದನ್ನು ಕೊಡು'' ಎಂದು ಸುಮಲತಾಗೆ ಮಂಡ್ಯದ ಗಂಡು ಅಂಬರೀಶ್ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದರು.

ಜಿಎಂ ರಿಜಾಯ್ಸ್ ಸಭಾಂಗಣದಲ್ಲಿ ಉಮಾಶ್ರೀ ಮತ್ತು ಪ್ರಕಾಶ್ ರೈ ಅವರಿಗೆ ಮಂಗಳವಾರ (ಸೆ.15) ಸಂಜೆ ಏರ್ಪಡಿಸಿದ್ದ ಸನ್ಮಾನ ಸಮಾರಂಭಕ್ಕೆ ಅಂಬರೀಷ್ ಒಂದುವರೆ ಗಂಟೆ ತಡವಾಗಿ ಆಗಮಿಸಿದರು. ತಡವಾಗಿ ಬಂದಿದ್ದಕ್ಕೋ ಏನೋ ಅವರ ಮುಖ ಕಳೆಗುಂದಿತ್ತು. ತುಂಬಾ ತಡವಾಗಿ ಆರಂಭವಾದ ಕಾರ್ಯಕ್ರಮ ಬಹಳ ಬೇಗನೆ ಮುಗಿಯಿತು. ಉಮಾಶ್ರೀ ಮತ್ತು ಪ್ರಕಾಶ್ ರೈ ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬಿ ವಿ ಕಾರಂತರ ರಂಗನಮನ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು.

ಸನ್ಮಾನ ಕಾರ್ಯಕ್ರಮಕ್ಕೆ ಬಹಳಷ್ಟು ಕಲಾವಿದರು ಗೈರುಹಾಜರಾಗಿದ್ದರು. ನಂತರ ವೇದಿಕೆಗೆ ಉಮಾಶ್ರೀ, ಪ್ರಕಾಶ್ ರೈ, ಡಾ.ಜಯಮಾಲಾ ಅವರನ್ನು ಆಹ್ವಾನಿಸಲಾಯಿತು. ಈ ಸನ್ಮಾನ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಕಲಾವಿದರು ಆಗಮಿಸಿದ್ದದ್ದು ವಿಶೇಷವಾಗಿತ್ತು.

ಡಾ.ಬಿ.ಸರೋಜಾದೇವಿ ಅವರು ರೇಷ್ಮೆ ಸೀರೆಯನ್ನು ಉಮಾಶ್ರೀ ಅವರಿಗೆ ಉಡುಗೊರೆಯಾಗಿ ನೀಡಿದರು. ಅದರೊಂದಿಗೆ ಹಣ್ಣುಹಂಪಲು ಹಾಗೂ ಹೂಗುಚ್ಛವನ್ನು ನೀಡಲಾಯಿತು. ನಂತರ ಅಂಬರೀಶ್ ಅವರು ಪ್ರಕಾಶ್ ರೈಗೆ ಶಾಲು ಹೊದಿಸಿ ಹುಗೂಚ್ಛದೊಂದಿಗೆ ನೆನಪಿನ ಕಾಣಿಕೆಯನ್ನೂ ನೀಡಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಉಮಾಶ್ರೀ ಅವರಿಗೆ ಸಾಕಷ್ಟು ಸೀರೆಗಳು ಉಡುಗೊರೆ ರೂಪದಲ್ಲಿ ಬಂದವು. ಇದನ್ನು ಕಂಡ ಅಂಬರೀಶ್ ಅವರಿಗೆ ಏನನ್ನಿಸಿತೋ ಏನೋ ತಮ್ಮ ಬಾಳಸಂಗಾತಿ ಸುಮಲತಾ ಅವರಿಗೆ ಸೀರೆಗೆ ಬದಲಾಗಿ ನೆಕ್ಲೇಸ್ ಕೊಡುವಂತೆ ಆಜ್ಞಾಪಿಸಿದರು. ನಿಜವಾದ ಕಲಾವಿದರಿಗೆ ಬೆಲೆ ಸಿಕ್ಕಿದೆ ಎಂದು ಮೆಚ್ಚಿ ಒಂದೆರಡು ಮಾತುಗಳನ್ನು ಆಡಿದರು.

ಪ್ರಕಾಶ್ ರೈ ಮಾತನಾಡುತ್ತಾ, ನನ್ನದೇ ನೆಲದಲ್ಲಿ ನನಗೆ ಸನ್ಮಾನ ಮಾಡುತ್ತಿರುವುದು ನಿಜಕ್ಕೂ ಆನಂದವಾಗುತ್ತಿದೆ. ರಾಷ್ಟ್ರ ಪ್ರಶಸ್ತಿಗಿಂತಲೂ ಇದು ಹೆಚ್ಚಿನ ಖುಷಿ ಕೊಟ್ಟಿದೆ. ಓದಿದ್ದು, ನೋಡಿದ್ದು, ಅಭಿನಯ ಕಲಿತಿದ್ದು ಎಲ್ಲಾ ಇಲ್ಲಿಯೇ ಎಂದು ಪ್ರಕಾಶ್ ರೈ ಹೇಳಿದರು.

ಉಮಾಶ್ರೀ ಮಾತನಾಡುತ್ತಾ, ಜೀವನ ಸಾರ್ಥಕವಾಯಿತು ಅನ್ನಿಸುತ್ತಿದೆ. ಶೇ.10ರಷ್ಟು ಮಂದಿಯಷ್ಟು ಮಾತ್ರ ಅದೃಷ್ಟದಿಂದ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ ಉಳಿದರೆಲ್ಲಾ ಕಷ್ಟಪಟ್ಟು ಮೇಲೆ ಬಂದವರು ಎಂದರು. ಹಿರಿಯ ನಟ ದೊಡ್ಡಣ್ಣ ಕಾರ್ಯಕ್ರಮವನ್ನು ನಿರೂಪಿಸಿದರೆ ಮತ್ತೊಬ್ಬ ಹಿರಿಯ ನಟ ಶ್ರೀನಿವಾಸ ಮೂರ್ತಿ ವಂದನಾರ್ಪಣೆ ಮಾಡಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada