»   » ಚಾಮಯ್ಯ ಮೇಷ್ಟ್ರು ಗುಂಡು ಹಾಕುತ್ತಿರಲಿಲ್ಲವೇ?

ಚಾಮಯ್ಯ ಮೇಷ್ಟ್ರು ಗುಂಡು ಹಾಕುತ್ತಿರಲಿಲ್ಲವೇ?

By: *ಗಣೇಶ್ ಕಾಸರಗೋಡು
Subscribe to Filmibeat Kannada
ಕನ್ನಡ ಚಿತ್ರರಂಗದ ಸಾಧು, ಸಜ್ಜನರೆಂದೇ ಹೆಸರು ಮಾಡಿರುವ ಹಿರಿಯ ನಟ ಕೆ.ಎಸ್. ಅಶ್ವತ್ಥ್ ಅವರಿಗೆ ಯಾವ ದುರಾಭ್ಯಾಸವೂ ಇರಲಿಲ್ಲವೇ? ಅವರು ಗುಂಡು ಹಾಕುತ್ತಿರಲಿಲ್ಲವೇ? ಸಿಗರೇಟು ಸೇದುತ್ತಿರಲಿಲ್ಲವೇ? 'ಸತ್ತ ಮೇಲೆ ಬೇಕಿದ್ದರೆ ಬರೆ..." ಎಂದಿದ್ದರು ಅಶ್ವತ್ಥ್...'ಇದನ್ನು ನೀವು ಈಗ ಬರೆಯಬಾರದು. ಇದು ನನ್ನ ಇಮೇಜ್ ಪ್ರಶ್ನೆ. ನಾನು ಸತ್ತ ಮೇಲೆ ಬೇಕಿದ್ದರೆ ಬರೆಯಿರಿ. ಅಲ್ಲಿಯವರೆಗೆ, ಅದೇನೋ ಮೊಬೈಲ್‌ನಲ್ಲಿ ಹೇಳ್ತಾರಲ್ಲ... ವ್ಯಾಪ್ತಿ ಪ್ರದೇಶದಿಂದ ಹೊರಗೆ..." ಹೀಗೆಂದು ಹೇಳಿ ನಕ್ಕಿದ್ದರು ಕೆ.ಎಸ್.ಅಶ್ವತ್ಥ್.

ಈಗ ನೋಡಿದರೆ ಅದೇ ಅಶ್ವತ್ಥ್ ವ್ಯಾಪ್ತಿ ಪ್ರದೇಶದಿಂದ ದೂರವಾಗಿ ಬಿಟ್ಟಿದ್ದಾರೆ. ಅವರೇ ಹೇಳಿರುವ ಪ್ರಕಾರ ಈಗ ಬರೆಯಲಡ್ಡಿಯಿಲ್ಲ...ಈಗ ವಿಷಯಕ್ಕೆ ಬರುವುದಿದ್ದರೆ... ಕನ್ನಡ ಚಿತ್ರರಂಗದ ಸಾಧು ಸಜ್ಜನರೆಂದೇ ಹೆಸರು ಮಾಡಿರುವ ಹಿರಿಯ ನಟ ಅಶ್ವತ್ಥ್ ಅವರು ಎಂದಾದರೂ ಕುಡಿದದ್ದಿದೆಯೇ? ಹೌದೆಂದಿದ್ದರು ಅಶ್ವತ್ಥ್! ಇದು ಎರಡು ವರ್ಷಗಳ ಹಿಂದಿನ ಮಾತು. ಅದೇನೋ ಕಾರ್ಯಕ್ಕೆ ಫೋನ್ ಮಾಡಿದ್ದ ಅಶ್ವತ್ಥ್ ಅವರನ್ನು ಕಿಚಾಯಿಸಲೆಂದೇ ಪ್ರಶ್ನಿಸಿದ್ದೆ. 'ಅಪ್ಪಾಜೀ, ನೀವು ಎಂದಾದರೂ ಸಾರಾಯಿಯನ್ನಾಗಲೀ, ವ್ಹಿಸ್ಕಿಯನ್ನಾಗಲೀ ಕುಡಿದಿದ್ದೀರಾ?"

ಈ ಪ್ರಶ್ನೆ ಕೇಳಿ ಬೆಚ್ಚಿ ಬಿದ್ದಿದ್ದರು ಅಶ್ವತ್ಥ್. ಹೇಳಲಾಗದೇ, ಹೇಳದಿರಲಾಗದೇ ಚಡಪಡಿಸಿದ್ದರು ಅವರು. ಕೊನೆಗೆ ಹೇಳುವುದೆಂದೇ ನಿರ್ಧರಿಸಿ ಅಶ್ವತ್ಥ್ ಮಹಾಗುಟ್ಟು ಎನ್ನುವಂತೆ ಹೇಳಿದ್ದಿಷ್ಟು : 'ನೋಡು ಮಗಾ, ನಾನು ಈಗ ಹೇಳುವುದೆಲ್ಲ ನಿಜ. ಆದರೆ ಈ ನಿಜವನ್ನು ಈಗ ಬರೆಯಬಾರದು. ನಾನು ಸತ್ತ ಮೇಲೆ ಬರೆಯಲಡ್ಡಿಯಿಲ್ಲ.

ನೀನು ಕೇಳಿದ ಪ್ರಶ್ನೆ : 'ನೀವೆಂದಾದರೂ ಕುಡಿದಿದ್ದೀರಾ?" ಅಂತ. ನಾನು ಈ ಪ್ರಶ್ನೆಗೆ ಉತ್ತರಿಸುತ್ತೇನೆ. 'ಹೌದು, ಕುಡಿದಿದ್ದೇನೆ. ಅದೇನೋ ಅಂತಾರಲ್ಲಾ... ಜಿನ್ ಅಂತ. ಹಿಂದೇ ಒಂದು ಸಾರಿ ಕುಡಿದಿದ್ದೆ ಎಂದರೆ ನೀನು ನಂಬುವುದಿಲ್ಲ. ಲೆಕ್ಕ ಹಾಕಿದರೆ ಎರಡು ಸಾರಿ ಕುಡಿದಿದ್ದೇನೆ. ಅದೂ ಸಿನಿಮಾಕ್ಕಾಗಿ, ದೃಶ್ಯವೊಂದರ ನೈಜತೆಗಾಗಿ...ನನ್ನನ್ನು ನಂಬು ಮಗೂ, ಇದು ನಡೆದದ್ದು 'ಕಲಿತರೂ ಹೆಣ್ಣೇ" ಚಿತ್ರದ ಸೆಟ್‌ನಲ್ಲಿ. ಸನ್ನಿವೇಶವೊಂದರ ಪ್ರಕಾರ ನಾನು ಕುಡಿದು ನಟಿಸಬೇಕಾಗಿತ್ತು.

ಆದರೆ ಕುಡಿದು ಅನುಭವವಿಲ್ಲದ ನಾನು ಎಪರಾ ತಪರಾ ನಟಿಸಿದಾಗ ನಿರ್ದೇಶಕ ಸಮೀವುಲ್ಲ ಅವರು ತರಾಟೆಗೆ ತೆಗೆದುಕೊಂಡರು. 'ನೀನೆಂಥಾ ನಟನಯ್ಯಾ? ಕುಡಿದು ಅಮಲೇರಿದವರಂತೆ ನಟಿಸಲೂ ಬಾರದ ನೀನು ನಾಲಾಯಕ್ಕು ಕಣೋ..." ಹೀಗೆಂದು ಎಲ್ಲರ ಮುಂದೆ ಹೀಯಾಳಿಸಿದಾಗ ಅವಮಾನವಾಯಿತು. ಬೇಜಾರೂ ಆಯಿತು. ಸೆಟ್ ಬಿಟ್ಟು ಹೊರಟು ಬಿಟ್ಟೆ. ಕೆಟ್ಟ ಕೋಪ ಬಂದು ಬಿಟ್ಟಿತು. ಮಾರನೇ ದಿನವಾದರೂ ಸಮೀವುಲ್ಲ ಅವರ ಕೈಲಿ ಬೈಸಿಕೊಳ್ಳಬಾರದೆಂದು ನಿರ್ಧರಿಸಿ ಅನುಭವಕ್ಕಾಗಿ ಕುಡಿಯಲು ನಿರ್ಧರಿಸಿದೆ.

ಆದರೆ ಡ್ರಿಂಕ್ಸ್ ಮನೆಗೆ ತರುವುದು ಹೇಗೆ? ಯಾವುದನ್ನು ತರಲಿ? ಅದರ ಹೆಸರೇನು? ಕನ್‌ಫ್ಯೂಷನ್‌ನಲ್ಲಿರುವಾಗಲೇ ಫಕ್ಕನೇ ಚಾಮುಂಡೇಶ್ವರಿ ಟಾಕೀಸಿನ ಹಿಂದುಗಡೆಯಿರುವ ವೈನ್ ಷಾಪೊಂದರ ನೆನಪಾಯಿತು. ಅದು ನಮ್ಮವರೇ ಆದ ಕದಂಬ ರಾಜಶೇಖರ್ ಅವರ ಷಾಪು. ತಲೆ ಮೇಲೆ ಬಟ್ಟೆ ಹೊದ್ದುಕೊಂಡು ಆ ಷಾಪಿಗೆ ಹೋದೆ. ವೈನ್ ಷಾಪಿನಲ್ಲಿ ನನ್ನನ್ನು ಕಂಡು ಕದಂಬ ರಾಜಶೇಖರ ಮೂರ್ಛೆ ಹೋಗುವುದೊಂದು ಬಾಕಿ ! ನಾನು ವಿಷಯ ತಿಳಿಸಿದಾಗ ಯಾವುದೋ ಒಂದು ಬಾಟಲನ್ನು ಕಟ್ಟಿಕೊಟ್ಟ. ಈ ವಿಚಾರವನ್ನು ಹೆಂಡತಿ ಜತೆ ಮೊದಲೇ ಹೇಳಿಕೊಂಡಿದ್ದೆ. ಆದ್ದರಿಂದ ತಂಟೆ ತಕರಾರಿಲ್ಲದೇ ಒಪ್ಪಿಕೊಂಡಿದ್ದಳು.

'ಬಾಟಲನ್ನು ತಂದು ಒಳಕೋಣೆಯ ಕಪಾಟಿನಲ್ಲಿ ಅಡಗಿಸಿಟ್ಟಿದ್ದೆ. ಮಕ್ಕಳು ನೋಡಿದರೆ ಗತಿಯೇನಪ್ಪಾ ಎನ್ನುವ ಆತಂಕ ನನ್ನದು. ರಾತ್ರಿ ಅವರೆಲ್ಲ ನಿದ್ದೆ ಮಾಡಿದ ಮೇಲೆ ಬಾಟಲಿ ತೆಗೆದೆ. ಕೋಣೆಯ ಚಿಲಕ ಹಾಕಲು ಭಯ. ಏನಾದರೂ ಅನಾಹುತವಾದರೆ ಎನ್ನುವ ಆತಂಕ. ಗ್ಲಾಸಿಗೆ ಬಗ್ಗಿಸಿ, ನೀರು ಬೆರೆಸಿ ಕುಡಿದೆ. ಅರ್ಧ ಬಾಟಲು ಕುಡಿದರೂ ಏನೂ ಆಗಲಿಲ್ಲ. ಗಾಬರಿಯಾಯಿತು. ಕೊನೆಗೂ 'ಕಲಿತರೂ ಹೆಣ್ಣೇ" ಚಿತ್ರದ ನನ್ನ ಅಭಿನಯ ಸಪ್ಪೆ ಸಪ್ಪೆ...

ನಂತರ ಬಂದದ್ದೇ 'ಮಧುರ ಮಿಲನ" ಚಿತ್ರ. ಇದರಲ್ಲೂ ಕುಡಿತದ ಅಭಿನಯ. ಬೇರೆ ದಾರಿಯಿಲ್ಲದೇ ಬಾಲಣ್ಣನ ಮೊರೆ ಹೋದೆ. ಆತ ವೈನ್ ತರಿಸಿದ. ಜತೆಗೂಡಿ ಕುಡಿದೆವು. ಒಂದು ಪೆಗ್‌ನಲ್ಲೇ ಅಮಲಿನ ಅನುಭವವಾಯಿತು. ನಾಲ್ಕಾರು ಪೆಗ್ ಕುಡಿದ ಮೇಲೆ ಕುಡಿತದ ಅಮಲು ಏನೆಂದು ಅರ್ಥವಾಯಿತು. ಮಾರನೇ ದಿನ 'ಮಧುರ ಮಿಲನ" ಚಿತ್ರದ ಕುಡಿತದ ಅಮಲಿನ ದೃಶ್ಯದಲ್ಲಿ ತುಂಬಾ ನೈಜವಾಗಿ ನಟಿಸಿದೆ. ನಿರ್ದೇಶಕ ಎನ್.ಕೆ.ಎ ಚಾರಿಯವರು ಬೆನ್ನು ತಟ್ಟಿದರು. ಅದೇ ಕೊನೆ.ಮತ್ತೆಂದೂ ಕುಡಿದಿಲ್ಲ... ಸಿಗರೇಟು ಸೇದುವ ಅಭ್ಯಾಸವಿತ್ತು. ಆದರೆ ನಾನುಮಾಡುತ್ತಿರುವ ಕಸರತ್ತಿಗೆ ಅರ್ಥವಿಲ್ಲವೆಂದು ತೀರ್ಮಾನಿಸಿ ಸಿಗರೇಟು ಸೇದುವುದನ್ನುಬಿಟ್ಟೆ...

ದಯವಿಟ್ಟು ಈ ಎರಡೂ ವಿಷಯವನ್ನು ನೀನು ಈಗ ಬರೆಯಬಾರದು. ಜನ ನನ್ನನ್ನು ಸಜ್ಜನ ಅಂತ ತಿಳ್ಕೊಂಡಿದ್ದಾರೆ. ಕುಡೀತಿದ್ದ, ಸಿಗರೇಟು ಸೇದುತ್ತಿದ್ದ ಅಂತ ಗೊತ್ತಾದರೆ ಉಗೀತಾರೆ. ದಯವಿಟ್ಟು ಬೇಡಿ, ಬೇಕಿದ್ದರೆ ನಾನು ಸತ್ತ ಮೇಲೆ ಬೇಕಿದ್ದರೆ ಬರೆ..." ಎಂದು ಹೇಳುತ್ತಾ ಜೋರಾಗಿ ನಕ್ಕ ನಗುವಿನ್ನೂ ಕಿವಿಯಲ್ಲಿದೆ.ಅಶ್ವತ್ಥ್ ಮಾತ್ರ ವ್ಯಾಪ್ತಿ ಪ್ರದೇಶದಿಂದ ಹೊರಗೆ... (ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada