For Quick Alerts
  ALLOW NOTIFICATIONS  
  For Daily Alerts

  ದಟ್ಸ್ ಕನ್ನಡ ಕಟ್ಟೆ ಮೇಲೆ ಮಾತಿಗೆ ಕುಳಿತ ಕಿಟ್ಟಿ

  By Staff
  |

  ಯಾವುದೇ ಇಮೇಜಿನ ಹಂಗಿಲ್ಲದೇ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಗೆ ತಾವೇ ಒಡ್ಡಿಕೊಳ್ಳುತ್ತಿರುವ ಕೃಷ್ಣಮೂರ್ತಿ ಅಲಿಯಾಸ್ ಶ್ರೀನಗರ ಕಿಟ್ಟಿ ಅವರು ಈಗಾಗಲೇ ಕನ್ನಡ ಚಿತ್ರರಸಿಕರ ಹೃದಯವನ್ನು ತಟ್ಟಿದ್ದಾರೆ. ಅವರು ನಟಿಸಿರುವ ಚಿತ್ರಗಳು ಬಾಕ್ಸಾಫೀಸಿನಲ್ಲಿ ಅಂತಹ ಭಾರೀ ಯಶಸ್ಸು ಕಂಡಿರದಿದ್ದರೂ ನಮ್ಮ ಹುಡುಗ ಪರವಾಗಿಲ್ಲ ನಟಿಸ್ತಾನೆ ಅಂತ ಪ್ರೇಕ್ಷಕರು ಬೆನ್ನು ತಟ್ಟಿದ್ದಾರೆ. ನಾಯಕನಾಗಿ ಕನ್ನಡ ಮತ್ತು ತಮಿಳಿನಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿದ್ದರೂ ಚಿತ್ರರಂಗದಲ್ಲಿ ಕಿಟ್ಟಿ ಸಾಕಷ್ಟು ವರ್ಷಗಳಿಂದ ಸೈಕಲ್ ತುಳಿಯುತ್ತಿದ್ದಾರೆ. ಸೈಕಲ್ ಸವಾರಿ ಗಿರಿಯಂತೆಯೇ ಸಾಕಷ್ಟು ಏರಿಳಿತಗಳನ್ನು ಕಂಡಿದೆ, ಹಣವೂ ಬರಲಿ ಯಶಸ್ಸೂ ಬರಲಿ ಅಂತ ಇಂತಿ ನಿಮ್ಮ ಪ್ರೀತಿಯ ಕಿಟ್ಟಿ ಚಿತ್ರರಂಗದಲ್ಲಿ ಸಾಕಷ್ಟು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

  ಸಂದರ್ಶನಕ್ಕಾಗಿ ದಟ್ಸ್ ಕನ್ನಡ ಕಚೇರಿ ಒಳಗೆ ಬರುತ್ತಿದ್ದಂತೆ ಅವರಲ್ಲಿ ಏನೋ ತಹತಹ. ಕುಳಿತಲ್ಲಿ ಕುಳಿತುಕೊಳ್ಳಲಾಗದಂತಹ ಚಟಪಡಿಕೆ. ಎಸಿ ರೂಮಿನಲ್ಲಿ ಕುಳಿತ ಕಿಟ್ಟಿಯ ತುಟಿಗಳಲಿ ಮಾತೂ ಹೊರಬರಲಾರದಂತಹ ಕನವರಿಕೆ. ಕೊನೆಗೆ ತಡೆಯಲಾಗದೆ, ಕೇಳಿಯೇಬಿಟ್ಟರು. ಇಲ್ಲಿ ಸಿಗರೇಟ್ ಸೇದಬಹುದಾ? ನೋ ವೇ. ಕಚೇರಿ ಮಾತ್ರವಲ್ಲ, ಇಡೀ ಬಿಲ್ಡಿಂಗಿನ ಆವರಣದಲ್ಲಿ ಸಿಗರೇಟ್ ಸೇದುವಂತಿಲ್ಲ ಎಂಬ ಉತ್ತರಕ್ಕೆ, ನೋ ಪ್ರಾಬ್ಲಮ್ ಅನ್ನುತ್ತಲೇ ಮಾತಿಗೆ ಎದುರಾದರು. ಮಾತು ಮುಗಿಸಿ ಎದ್ದಾಗ ಟೇಬಲ್ ಮೇಲಿಟ್ಟಿದ್ದ ಕಾಫಿ ಕೂಡ ನಮ್ಮ ಮಾತು ಕೇಳಿಸಿಕೊಳ್ಳುತ್ತಲೇ ಹಾಗೆಯೇ ಕೆನೆಗಟ್ಟಿತ್ತು.

  * ರಾಜೇಂದ್ರ ಚಿಂತಾಮಣಿ, ಪ್ರಸಾದ ನಾಯಿಕ

  1. ಗಿರಿ ಚಿತ್ರದೊಂದಿಗೆ ನಾಯಕನಾಗಿ ಅಡಿಯಿಟ್ಟ ನಿಮಗೆ ಚಿತ್ರರಂಗದಲ್ಲಿ ಯಶಸ್ಸಿನ ಗಿರಿ ಮುಟ್ಟಿದ್ದೀರಾ?
  ಖಂಡಿತ ಯಶಸ್ಸು ದೊರೆತಿದೆ. ಇಲ್ಲದಿದ್ದರೆ ಇಷ್ಟೊಂದು ವಿಭಿನ್ನವಾದ ಪಾತ್ರಗಳು ಸಿಗುತ್ತಿರಲಿಲ್ಲ. ನಟನೆ ಕುರಿತಂತೆ ಪ್ರೇಕ್ಷಕರು ಕೂಡ ತೃಪ್ತಿ ವ್ಯಕ್ತಪಡಿಸಿದ್ದಾರೆ.

  2. ಬೆಳ್ಳಿತೆರೆಗೆ ಅಡಿಯಿಟ್ಟುದ್ದು ಯಾವಾಗ?
  ನಾನು ಒಂಭತ್ತನೇ ತರಗತಿಯಲ್ಲಿರುವಾಗಲೇ ಸಿನಿಮಾದಲ್ಲಿ ನಟಿಸಿದ್ದೆ. ಚಿತ್ರರಂಗಕ್ಕೆ ಅಡಿಯಿಟ್ಟ ನಂತರ ಮೊದಲ ಚಿತ್ರ "ಚುಕ್ಕಿ ಚಂದ್ರಮ". ನಾಯಕನಾಗಿ ನನ್ನ ಮೊದಲ ಚಿತ್ರ "ಗಿರಿ". ನಂತರ ಖಳನಾಯಕನಾಗಿ, ಪೋಷಕ ನಟನಾಗಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನನ್ನನ್ನು ಚಿತ್ರರಂಗಕ್ಕೆ ಎಳೆದು ತಂದವರೇ ಎಸ್ ನಾರಾಯಣ್ ಅವರು.

  3. ಚಿತ್ರರಂಗ ನಿಮಗೆ ತೃಪ್ತಿ ತಂದಿದೆಯೇ?
  ಸಿನಿಮಾಗಳಿಂದ ನನಗೆ ಇದುವರೆಗೂ ಬೇಜಾರಾಗಿಲ್ಲ. ಆಕ್ಟ್ ಮಾಡಬೇಕು ಅಂತಲೇ ಈ ಕ್ಷೇತ್ರಕ್ಕೆ ಬಂದಿದ್ದು.

  4. ಕಿರುತೆರೆ ಮತ್ತು ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ?
  ಸುದೀಪ್, ದರ್ಶನ್ ಮತ್ತು ಗಣೇಶ್ ಇವರೆಲ್ಲಾ ನನ್ನ ಹಾಗೆಯೇ ಕಿರುತೆರೆಯಿಂದ ಬಂದ ಕಲಾವಿದರು. ಇವರೆಲ್ಲಾ ಧಾರಾವಾಹಿಗಳ ಮೂಲಕವೇ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು. ಕಿರುತೆರೆ ಕಲಾವಿದ ಎಂದರೆ ಮೊದಲಿಗೆ ದೃಷ್ಟಿಕೋನ ಬೇರೆಯೇ ಇತ್ತು. ಸಿನಿಮಾ ಕಲಾವಿದರಿಗೆ ಇವರನ್ನು ಹೋಲಿಸುತ್ತಿರಲಿಲ್ಲ. ಆದರೆ ಕಿರುತೆರೆ ಕಲಾವಿದನಿಗೆ ಸಿನಿಮಾಗಳಲ್ಲಿ ಅಭಿನಯಿಸುವುದು ಕಷ್ಟವೇನು ಅಲ್ಲ. ಕಿರುತೆರೆಯಲ್ಲಿ ಕಲಾವಿದನಿಗೆ ಒಳ್ಳೆಯ ಅಡಿಪಾಯ ಸಿಗುತ್ತದೆ.

  5. ಇದುವರೆಗೂ ಅಭಿನಯಿಸಿದ ಪಾತ್ರಗಳಲ್ಲಿ ಇಷ್ಟವಾದ ಪಾತ್ರ?
  ನಾನು ಇದುವರೆಗೆ ನಟಿಸಿದ ಪಾತ್ರಗಳೆಲ್ಲಾ ವಿಭಿನ್ನವಾಗಿವೆ. 'ಜನುಮದ ಗೆಳತಿ' ಹೊರತುಪಡಿಸಿದರೆ ಎಲ್ಲ ಪಾತ್ರಗಳು ಇಷ್ಟವಾಗಿವೆ. ಮೊದಲು ಜನುಮದ ಗೆಳತಿ ಸಿಡಿ ತೋರಿಸಿದಾಗ ಇಂಪ್ರೆಸ್ ಆದೆ. ಆದರೆ ಆ ಚಿತ್ರವನ್ನು ಅಷ್ಟು ಕೆಟ್ಟದಾಗಿ ತೆಗೆಯುತ್ತಾರೆ ಅಂದುಕೊಂಡಿರಲಿಲ್ಲ. ನಟನೆ ಮಾಡೋದಷ್ಟೇ ನಮ್ಮ ಕೆಲಸ, ನಂತರ ಏನಾಗುತ್ತೋ ನಮಗೆ ಗೊತ್ತೇ ಆಗುವುದಿಲ್ಲ. 'ಸವಾರಿ' ನನ್ನ ಪಾತ್ರವೇ ಅಲ್ಲ. ಅದೊಂದು ವಿಭಿನ್ನವಾದ ಪಾತ್ರ. ನನ್ನ ವ್ಯಕ್ತಿತ್ವಕ್ಕೆ ಹೊರತಾಗಿತ್ತು.

  6. 'ಇಂತಿ ನಿನ್ನ ಪ್ರೀತಿಯ' (ಕುಡುಕನ ಪಾತ್ರ) ಋಣಾತ್ಮಕ ಅನ್ನಿಸುವುದಿಲ್ಲವೆ?
  ನಟ ಎಂದರೆ ಯಾವುದೇ ಪಾತ್ರ ಕೊಟ್ಟರೂ ಮಾಡುವಂತಿರಬೇಕು. ಅದು ನೆಗಟೀವ್, ಪಾಸಿಟೀವ್ ಅಂತ ಅಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರದ ಪ್ರೀಮಿಯರ್ ಶೋ ನೋಡಿದ ಗೆಳೆಯರು ಸೂಪರ್ ಅಂದ್ರು. ಆ ಚಿತ್ರ ಅಷ್ಟೊಂದು ಚೆನ್ನಾಗಿತ್ತು.

  7. ಆದರೆ ಇಂತಿ...ಚಿತ್ರದ ಸೋತಿದ್ದೇಕೆ?
  ಇಂತಿ...ಚಿತ್ರ ನೋಡಿದ ಗೆಳೆಯರು ಏನೋ ಆಗುತ್ತದೆ ಎಂದು ಕೊಂಡಿದ್ದರು. ಡೋಸೇಜ್ ಸ್ವಲ್ಪ ಜಾಸ್ತಿಯಾಯ್ತು. ಪ್ರೇಮ್ ಕಹಾನಿ ಸೆಕೆಂಡ್ ಆಪ್ 'ಇಂತಿ ನಿನ್ನ ಪ್ರೀತಿಯ'ದ ಒಂದು ಸಣ್ಣ ಎಳೆ. ಪ್ರೇಕ್ಷಕರ ನಾಡಿ ಮಿಡಿತವನ್ನು ಅರಿಯುದು ಕಷ್ಟ. ಹೊಟೇಲಿಗೆ ಹೋದ ಹತ್ತು ಜನರಲ್ಲಿ ಮೂರು ಜನ ಮಾತ್ರ ತಿಂಡಿ ಚೆನ್ನಾಗಿಲ್ಲ ಅಂತಾರೆ. ಆದರೆ, ತಿಂಡಿ ಕೆಟ್ಟದಾಗಿದ್ದರೆ ಹತ್ತರಲ್ಲಿ ಒಂಭತ್ತು ಮಂದಿ ಬೈದುಕೊಳ್ಳುತ್ತ ಹೊರಬರುತ್ತಾರೆ. ಇದೇ, ಯಾವುದೇ ಚಿತ್ರಕ್ಕೂ ಅನ್ವಯವಾಗುತ್ತದೆ.

  8. ಚಿತ್ರದ ಸೋಲು ಗೆಲುವಿಗೆ ವಿಮರ್ಶೆಗಳು ಎಷ್ಟರ ಮಟ್ಟಿಗೆ ಕಾರಣವಾಗುತ್ತದೆ?
  ಯಾವುದೇ ಚಿತ್ರ ಎರಡು ವಾರ ಚಿತ್ರಮಂದಿರದಲ್ಲಿ ನಿಂತುಕೊಳ್ಳಬೇಕು. ಸಿನಿಮಾಗೆ ಎರಡು ವಾರ ನಿಂತುಕೊಳ್ಳುವ ತಾಕತ್ತು ಇದ್ದರೆ ಸಾಕು. ಮೊದಲ ದಿನ ಬಂದು ವಿಷಲ್ ಹೊಡೆದುಕೊಂಡು ಹೋಗುವವನಿಗೆ ಖುಷಿ ಕೊಡಬೇಕು. ನಂತರ ನೀವು ಬರೆದ ವಿಮರ್ಶೆ, ಟಿವಿಗಳಲ್ಲಿ ಬರುವ ಚರ್ಚೆಗಳಿಗೆ ಅರ್ಥವಿರುತ್ತದೆ. ಮಾಧ್ಯಮಗಳಿಗೆ ಅವರದೇ ಆದ ರೀಚ್ ಇದೆ. ನಿಮಗೆ ನಿಮ್ಮದೇ ಆದ ರೀಚ್ ಇದೆ. ಟಿವಿಗಳಲ್ಲಿ ಜನರಾಡುವ ಮಾತು ಇದೆಲ್ಲಾ ಬೋನಸ್ ಇದ್ದಂತೆ.

  9. ಒಲವೇ ಜೀವನ ಲೆಕ್ಕಾಚಾರದಲ್ಲಿ ರಂಗಾಯಣ ರಘು ಪಾತ್ರ ನಿಮ್ಮ ಪಾತ್ರವನ್ನು 'ಓವರ್ ಶ್ಯಾಡೋ' ಮಾಡಿದೆ ಅಂತ ಅನ್ನಿಸೋದಿಲ್ವಾ?
  ಈ ಚಿತ್ರದಲ್ಲಿ ನಾಗತಿಹಳ್ಳಿ ಅವರು ಏನು ಮಾಡಬೇಕು ಎಂದುಕೊಂಡರೋ ಅದನ್ನೇ ಮಾಡಿದ್ದಾರೆ. ಇಲ್ಲಿ ಮೇಷ್ಟ್ರ ಪಾತ್ರ ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ದ್ವಿತೀಯಾರ್ಧದಲ್ಲಿ ನಾನೇ ರಘುವಾಗುತ್ತೇನೆ. ನಂತರ ಅವನ ಜೀವನವೇ ಬದಲಾಗುತ್ತದೆ. ತಪ್ಪು ಮಾಡುತ್ತಲೇ ಹಿಂದಿರುಗಿ ಬರಲಾಗದಷ್ಟು ದೂರ ಹೋಗಿರುತ್ತಾನೆ.

  10. ಕನ್ನಡ ಚಿತ್ರರಂಗ ನೆಲೆ ನಿಲ್ಲಬೇಕಾದರೆ ರಿಮೇಕಿಗೆ ಮನ್ನಣೆ ನೀಡಬೇಕಾ?
  ಏರಿಳಿತಗಳಿಲ್ಲ ಯಾವ ಉದ್ಯಮವೂ ಇಲ್ಲ. ಒಂದು ಏರಿಳಿತ ಯಾವ ಮಟ್ಟದ ಕೆಟ್ಟದನ್ನು ತರುತ್ತದೆ ಅಂದರೆ ದುನಿಯಾ, ಮುಂಗಾರು ಮಳೆ ಬಂದ ಹೊಡೆತಕ್ಕೆ ಒಂದು ನೂರೈವತ್ತು ಅದೇ ರೀತಿಯ ಸಿನಿಮಾಗಳು ಶುರುವಾದವು. ಅದರಲ್ಲಿ ನೂರನಲವತ್ತು ತಗಡು ಸಿನಿಮಾಗಳು. ಮಳೆಯದನ್ನೇ ಇಟ್ಟುಕೊಂಡು ಮಾಡಿದರೋ ಅಥವಾ ದುನಿಯಾ ಷೇಡನ್ನು ಇಟ್ಟುಕೊಂಡು ಮಾಡಿದರೋ ಅದು ಮುಖ್ಯವಲ್ಲ. ರೀಮೇಕ್ ಸ್ವಮೇಕ್ ಬಗ್ಗೆ ಚರ್ಚೆ ಮಾಡುವುದೇ ವೇಷ್ಟು ಅನ್ನಿಸುತ್ತದೆ. ರಿಮೇಕ್ ಇಷ್ಟವಿರುವವರು ರೀಮೇಕ್ ಮಾಡ್ತಾರೆ, ಸ್ವಮೇಕ್ ಇಷ್ಟವಿರುವವರು ಅದನ್ನೇ ಮಾಡುತ್ತಾನೆ.

  11.ರೀಮೇಕ್ ಚಿತ್ರಗಳನ್ನು ತಡೆಯಲು ಸಾಧ್ಯವಿಲ್ಲವೇ?
  ನಾನು ಅದನ್ನು ಕಂಟ್ರೊಲ್ ಮಾಡಕ್ಕಾಗಲ್ಲ. ನಿಲ್ಲಿಸಕ್ಕೂ ಆಗಲ್ಲ. ನಿರ್ಮಾಪಕರು ತೆಗೆದುಕೊಳ್ಳಬೇಕಾದ ತೀರ್ಮಾನ ಇದು. ಹೊಸ ಕತೆಗೆ ಟೀಂ ಬೇಕು, ಮೂರು ನಾಲ್ಕು ತಿಂಗಳ ಟೈಮೂ ಬೇಕು. ರೀಮೇಕ್ ಚಿತ್ರ ಅಂದರೆ ರೆಡಿಮೇಡ್ ಇದೆಯಲ್ಲಾ ಸ್ವಾಮಿ. ಚಿತ್ರ ಕಣ್ಮುಂದೆ ಗೆದ್ದಿದೆಯಲ್ಲಾ..ಇದಕ್ಕಿಂತಲೂ ಇನ್ನೇನು ಬೇಕು. ಸ್ವಮೇಕ್ ಚಿತ್ರಗಳ ನಿರ್ದೇಶಕರೆಲ್ಲಾ ಹೊಸಬರೆ. ಏನಾಯ್ತು? ಅವರವರ ತೆವಲಿಗೆ ನಿರ್ದೇಶಕರಾಬೇಕು. ತೆವಲಿದ್ದವರು ನಿರ್ದೇಶಕರಾಗಬಹುದು..ಇದಕ್ಕೆ ಯಾರ್ದೊ ದುಡ್ಡು, ಒಂದಷ್ಟು ಕಲಾವಿದರು ಬಲಿಯಾಗುತ್ತಾರೆ.. ಎಡ್ಯುಕೇಷನ್, ಕ್ವಾಲಿಫಿಕೇಷನ್ ಏನೂ ಬೇಕಾಗಿಲ್ಲದ ಕೆಲಸಗಳು ಇವು.

  12. ರಂಗಭೂಮಿಯೊಂದಿಗೆ ಒಡನಾಟ ಇದೆಯೇ?
  ಈಗಲೂ ಕೆಲವೊಂದು ನಾಟಕಗಳಲ್ಲಿ ತೊಡಗಿಕೊಳ್ಳುತ್ತಿದ್ದೇನೆ. ನಾಗರಾಜ ಮೂರ್ತಿ ಅವರ ರಂಗ ನಿರಂತರ ನಾಟಕ ತಂಡದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಇತ್ತೀಚಿಗೆ 'ನಮ್ಮ ನಿಮ್ಮೊಳಗೊಬ್ಬ' ನಾಟಕದಲ್ಲಿ ಅಭಿನಯಿಸಿದೆ. ಆದರೆ ಹೊಸ ನಾಟಕಗಳು ಯಾವುದೂ ಇಲ್ಲ. ಅದಕ್ಕೆಲ್ಲಾ ತಯಾರಾಗಲು ಎರಡು ಮೂರು ತಿಂಗಳ ಸಮಯ ಬೇಕು. ಹಾಗಾಗಿ ಹೊಸ ನಾಟಕಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  13. ನಿಮ್ಮ ಕನಸಿನ ಪಾತ್ರ ಅಂತ ಯಾವುದಾದರೂ ಇದೆಯಾ?
  ಆ ರೀತಿಯ ಪಾತ್ರ ಅಂತ ಯಾವುದೂ ಇಲ್ಲ. ಎಲ್ಲ ರೀತಿಯ ಪಾತ್ರಗಳನ್ನೂ ಮಾಡಬೇಕೆಂದಿದ್ದೇನೆ. ಅಣ್ಣಾವ್ರ ಸಾಕ್ಷಾತ್ಕಾರ, ಕಸ್ತೂರಿ ನಿವಾಸದಂತಹ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಆದರೆ ಆ ರೀತಿಯ ಪಾತ್ರಗಳಿಗೆ ಎಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತೇವೆ ಎಂಬ ಅನುಮಾನವೂ ಇದೆ. ಅದು ಬರೀ ಕನಸಷ್ಟೇ.

  14. ನಟ ಅಲ್ಲದಿದ್ದರೆ ಮತ್ತಿನ್ನೇನಾಗಲು ಬಯಸುತ್ತಿದ್ದಿರಿ?
  ಪೊಲೀಸ್ ಆಫೀಸರ್ ಆಗಬೇಕು ಎಂದು ಬಹಳ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗೇನಿದ್ದರೂ ಸಿನಿಮಾ, ಸಿನಿಮಾ ಮತ್ತು ಸಿನಿಮಾ.

  15. ಯಾವ ರೀತಿಯ ಪಾತ್ರಗಳಲ್ಲಿ ನಟಿಸಬೇಕೆಂದಿದ್ದೀರಾ?
  ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್ ಪಾತ್ರಗಳನ್ನು ಮಾಡಬೇಕೆಂದಿದ್ದೇನೆ. ನೋಡೋಣ ಕಾಲ ಕೂಡಿಬಂದರೆ ಆ ರೀತಿಯ ಪಾತ್ರಗಳಲ್ಲಿ ನಟಿಸುತ್ತೇನೆ.

  16. ಗುಲಾಬಿ ಟಾಕೀಸ್ ಬಗ್ಗೆ ಬಗ್ಗೆ ಏನು ಹೇಳ್ತೀರಾ?
  ಅದೊಂದು ಅದ್ಭುತ ಸಿನಿಮಾ ಅಲ್ಲ ಅನ್ನಿಸಿತು.... ಆರ್ಟ್ ಫಿಲಂಗಳ ಬಗ್ಗೆ ಮಾತಾಡಕ್ಕೆ ನನಗೇನು ಇಷ್ಟ ಆಗಲಪ್ಪ. ಕಂಟಿನ್ಯುಯಿಟಿನೇ ಇರಲ್ಲ... ಜನರು ಗುರ್ತಿಸುವುದಕ್ಕಿಂತ ದೊಡ್ಡ ಅವಾರ್ಡ್ ಯಾವುದೂ ಇಲ್ಲ. ಇದರಿಂದ ಉಮಾಶ್ರೀ ಅವರಿಗೆ ದೊಡ್ಡ ಖುಷಿಯೇನು ಆಗಿಲ್ಲ...ಇದಕ್ಕಿಂತಲೂ ದೊಡ್ಡ ಖುಷಿಗಳು ಅವರಿಗೆ ಈಗಾಗಲೇ ಆಗಿವೆ. ರಾಷ್ಟ್ರ ಪ್ರಶಸ್ತಿ ಅಂತ ಕೊಡ್ತಾರಲ್ಲಾ ಆ ಸೆಗ್ಮೆಂಟೇ ಸರಿ ಇಲ್ಲ ಅನ್ನಿಸುತ್ತದೆ. 'ಕಾಂಚೀವರಂ' ಜನ ನೋಡಿದ ಚಿತ್ರ...ಆ ರೀತಿಯ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಇದ್ದವಲ್ಲ ಅವನ್ನು ಯಾಕೆ ಪ್ರಶಸ್ತಿಗೆ ಕಳುಹಿಲಿಲ್ಲ. ಗಾಳಿಪಟ ಅದ್ಭುತವಾಗಿತ್ತು ಮಿಲನ ಚಿತ್ರ ಕಳುಹಿಸಬಹುದಾಗಿತ್ತು. ಇಲ್ಲಿರುವವರಿಗೆ ಬುದ್ಧಿ ಕಡಿಮೆ ಅಲ್ಲಿರುವವರಿಗೆ ಬುದ್ಧಿ ಹೆಚ್ಚು ಎಂಬಂತಾಗುತ್ತದೆ ಅಷ್ಟೇ.

  17. ಉಮಾಶ್ರೀಗೆ ರಾಷ್ಟ್ರ ಪ್ರಶಸ್ತಿ ಬಂದಿರುವ ಬಗ್ಗೆ ನಿಮ್ಮ ಅಭಿಪ್ರಾಯ?
  ಉಮಾಶ್ರೀ ಅತ್ಯುತ್ತಮ ನಟಿ ಎಂಬುದು ಎಲ್ಲರಿಗೂ ಗೊತ್ತು. ಇದು ಯಾವಾಗಲೋ ಸಾಬೀತಾಗಿದೆ. 'ಗುಲಾಬಿ ಟಾಕೀಸ್' ಗೆ ಪ್ರಶಸ್ತಿ ಕೊಟ್ಟು ಹೊಸದಾಗಿ ಹೇಳುವುದು ಏನು ಇಲ್ಲ. ಕಲಾತ್ಮಕ ಚಿತ್ರಗಳೆಲ್ಲಾ ಶ್ರೇಷ್ಠ ಎಂದೂ ಹೇಳಲಿಕ್ಕಾಗಲ್ಲ. ಗುಲಾಬಿ ಟಾಕೀಸ್ ಚಿತ್ರವನ್ನೇ ತೆಗೆದುಕೊಳ್ಳಿ. ಒಂದು ದೃಶ್ಯದಲ್ಲಿ ಚಪ್ಪಲಿ ಇರುತ್ತೆ ಮತ್ತೊಂದು ದೃಶ್ಯದಲ್ಲಿ ಚಪ್ಪಲಿ ಇರಲ್ಲ. ಈ ರೀತಿಯ ಎಷ್ಟೋ ತಾಂತ್ರಿಕ ದೋಷಗಳು ಅಲ್ಲೂ ಇರುತ್ತವೆ. ಹಸೀನಾ ಚಿತ್ರವೂ ಅಷ್ಟೇ. ಅರ್ಧಗಂಟೆ ಕುಳಿತು ನೋಡುವುದು ಕಷ್ಟ. ನನಗಂತೂ ಕಾಸರವಳ್ಳಿ ಚಿತ್ರ ಇಷ್ಟವಾಗಲ್ಲಪ್ಪ.

  18. ಹಾಗಾದ್ರೆ ನಿಮ್ಮ ಅನಿಸಿಕೆಯ ಪ್ರಕಾರ ಯಾವ ಕನ್ನಡ ಚಿತ್ರ ಉತ್ತಮವಾಗಿದೆ?
  ಅನೇಕ ಚಿತ್ರಗಳಿವೆ. ಆದರೆ, ನಮ್ಮವರಿಗೇ ರಾಷ್ಟ್ರ ಪ್ರಶಸ್ತಿಗೆ ಕಳಿಸುವುದಕ್ಕೆ ತಾತ್ಸಾರ. ಮಿಲನ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು. ಅದನ್ನು ರಾಷ್ಟ್ರ ಪ್ರಶಸ್ತಿಗಾಗಿ ಯಾಕೆ ಕಳುಹಿಸಲಿಲ್ಲ. ಉದಾಹರಣೆಗೆ ಹೇಳುವುದಾದರೆ ತಮಿಳಿನ ಕಾಂಚೀಪುರಂ ಚಿತ್ರ ಅದ್ಭುತವಾಗಿದೆ. ಅದನ್ನು ಕಲಾತ್ಮಕ ಚಿತ್ರ ಎಂದು ಹೇಳಲು ಆಗುವುದಿಲ್ಲ. ಆದ್ರೆ, ರಾಷ್ಟ್ರಪ್ರಶಸ್ತಿ ನೀಡುವ ಮಂಡಳಿಯ ಫಾರ್ಮ್ಯಾಟೇ ಸರಿಯಾಗಿಲ್ಲ.

  19. ನಿಮ್ಮ ಮುಂದಿನ ಚಿತ್ರಗಳು ಯಾವುವು?
  ಸದ್ಯಕ್ಕೆ ಈಗ 'ಸ್ವಯಂವರ'ದಲ್ಲಿ ಬಿಜಿಯಾಗಿದ್ದೇನೆ. ಸ್ವಯಂವರದಲ್ಲಿ ಎರಡು ವಿಭಿನ್ನ ಗೆಟಪ್ ಗಳಿವೆ... ಅದಾದ ನಂತರ 'ಸಂಜು ವೆಡ್ಸ್ ಗೀತಾ' ಶುರುವಾಗುತ್ತದೆ. ಅಕ್ಟೋಬರ್ 10ಕ್ಕೆ ಸಂಜು ವೆಡ್ಸ್ ಗೀತಾ ಸೆಟ್ಟೇರಲಿದೆ. ಮರಳಿ ಮರೆಯಾಗಿ ಚಿತ್ರ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಬೇಕಿತ್ತು. ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ನಡೆಯಬೇಕಾಗಿತ್ತು. ಹಂದಿಜ್ವರದ ಕಾರಣ ಅಲ್ಲಿಗೆ ಹೋಗಲು ಆಗಲಿಲ್ಲ.

  20. ಮಳೆ ಬರಲಿ ಮಂಜು ಇರಲಿ ಸೋಲಿಗೆ ಕಾರಣ ಏನು?
  ಅಗತ್ಯಕ್ಕಿಂತಲೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆಲುಗಿನ ಮಗಧೀರ ಚಿತ್ರ ಬಿಡುಗಡೆಯಾಗಿದ್ದೇ ನಮ್ಮ ಚಿತ್ರಕ್ಕೆ ದೊಡ್ಡ ಹೊಡೆತ ಬಿತ್ತು.

  21. ಫೇಸ್ ಬುಕ್, ಟ್ವಿಟ್ಟರ್ ನಂತಹ ಸೋಸಿಯಲ್ ನೆಟ್ವರ್ಕಿಂಗ್ ತಾಣಗಳ ಬಗ್ಗೆ ನಿಮ್ಮ ಅಭಿಪ್ರಾಯ?
  ಫೇಸ್ ಬುಕ್ ಅದೇನು ನನಗೆ ಅಷ್ಟೇನು ಒಳ್ಳೆದಲ್ಲಾ ಅನ್ನಿಸುತ್ತದೆ...ದಿನಾ ಅರ್ಧಗಂಟೆ ಕಳೆಯುತ್ತೇನೆ...ಗೆಳೆಯರಿಗೆ ಚೆನ್ನಾಗಿರುತ್ತದೆ...ಗೊತ್ತಿಲ್ಲದವರ ಹತ್ತಿರ ಮಾತನಾಡುವುದು ಕಷ್ಟ...ನನ್ನ ಮೊಬೈಲ್ ತೆಗೆದು ನನ್ನ ಹೆಂಡತಿಗೂ ಒಂದೇ ಒಂದು ಎಸ್ ಎಂಎಸ್ ಮಾಡುವವನಲ್ಲ ನಾನು. ಎದುರು ಬದುರಿಗೆ ಕುಳಿತು ಮಾತನಾಡುವುದೇ ಸೇಫ್. ಆ ಕಡೆ ಇರುವವನು ಯಾರೋ ನಮಗೆ ಗೊತ್ತಿರಲ್ಲ. ಇಂಟರ್ನೆಟ್ ಸೆಂಟರಲ್ಲಿ ಕೂತು ಚಾಟಿಂಗ್ ಮಾಡುತ್ತಿರುತ್ತಾನೆ...ಒಬ್ಬ ಕೆಟ್ಟದಾಗಿ ಇಂಟರ್ಯಾಕ್ಟ್ ಮಾಡಿದರೆ...ಉಳಿದವರಿಗೆಲ್ಲಾ ಅದು ತಟ್ಟುತ್ತದೆ.

  Thursday, September 17, 2009, 14:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X