»   » ಮಂಗಗಳಿಗೂ ಮೂರ್ಖರ ಪೆಟ್ಟಿಗೆ ಅಂದ್ರೆ ಬಲು ಇಷ್ಟ

ಮಂಗಗಳಿಗೂ ಮೂರ್ಖರ ಪೆಟ್ಟಿಗೆ ಅಂದ್ರೆ ಬಲು ಇಷ್ಟ

Posted By:
Subscribe to Filmibeat Kannada

ಮೂರ್ಖರ ಪೆಟ್ಟಿಗೆ ಎಂದೇ ಜನಪ್ರಿಯವಾಗಿರುವ ಟಿವಿಯನ್ನು ಕೇವಲ ಮನುಷ್ಯರಷ್ಟೇ ಅಲ್ಲ ಮಂಗಗಳು ಇಷ್ಟಪಡುತ್ತವೆ ಎಂಬ ಅಂಶ ಸಂಶೋಧನೆಯಲ್ಲಿ ಬೆಳಕು ಕಂಡಿದೆ. ಮಂಗಗಳನ್ನು ತನ್ನತ್ತ ಸೆಳೆಯುವ ಮಾಂತ್ರಿಕ ಶಕ್ತಿ ಟಿವಿಗಳಿಗೆ ಎಂಬುದು ಸಾಬೀತಾಗಿದೆ. ಸಂಶೋಧನೆ ನಡೆದದ್ದು ಮೂರು ವರ್ಷದ ಮಂಗಣ್ಣನ ಮೇಲೆ.

ಬುದ್ದ್ಧಿವಂತರೂ ಎಂದೇ ಜನಜನಿತರಾದ ಜಪಾನೀಯರು ಈ ಸಂಶೋಧನೆಯನ್ನು ಮಾಡಿದ್ದಾರೆ. ಹಾಗಾಗಿ ಸಂಶೋಧನೆ ಬಗ್ಗೆ ಬೆರಳು ತೋರಿಸುವಂತಿಲ್ಲ. ಮೂರ್ಖರ ಪೆಟ್ಟಿಗೆ ಕಡೆಗೆ ಮನುಷ್ಯರಷ್ಟೆ ಸಲೀಸಾಗಿ ಮಂಗಗಳು ಆಕರ್ಷಿತವಾಗುತ್ತವೆ ಎಂಬುದನ್ನು ಜಪಾನ್ ವಿಶ್ವವಿದ್ಯಾಲಯದ ಸಂಶೋಧನೆ ತೋರಿಸಿಕೊಟ್ಟಿದೆ.

ಮಂಗನನ್ನು ಕೋಣೆಯೊಂದರಲ್ಲಿ ಬಿಟ್ಟು ಅದರ ಚಲನವಲನಗಳ ಕಡೆಗೆ ಕಣ್ಣಿಡಲಾಯಿತು. ಒಂದು ತಿಂಗಳಲ್ಲಿ ತಟ್ಟೆ ಸದ್ದು ಮಾಡಿದರೆ ಆಹಾರ ಬಂದಿದೆ ಎಂದು ಅರ್ಥೈಸಿ ಅದು ಎದ್ದು ಬರುತ್ತ್ತಿತ್ತು. ಬಳಿಕ ಆ ಕೋಣೆಗೆ ಟಿವಿ ತಂದಿಡಲಾಯಿತು. ಬರುಬರುತ್ತಾ ಅದು ಕಪಿಚೇಷ್ಟೆಗಳನ್ನು ಮಾಡದೆ ಟಿವಿ ಅಂಟಿಕೊಂಡಿತು. ಅದರಲ್ಲಿನ ಕಾರ್ಯಕ್ರಮಗಳನ್ನು ಕುತೂಹಲದಿಂದ ವೀಕ್ಷಿಸುತ್ತಾ ಮುಸಿಮುಸಿ ನಗುತ್ತಿತ್ತು.

ವಿಚಿತ್ರ ಎಂದರೆ ಕಡೆಗೆ ತಟ್ಟೆ ಸದ್ದಾದರೂ ಅದು ಎದ್ದು ಬರುತ್ತಿರಲಿಲ್ಲ. ಟಿವಿಯಲ್ಲಿ ಆಗ ಆನೆಗಳ ಸರ್ಕಸ್ ಕಾರ್ಯಕ್ರಮ ಬಿತ್ತರವಾಗುತ್ತಿತ್ತು. ತಟ್ಟೆಯ ಸದ್ದಿನ ಪರಿವೇ ಇಲ್ಲದ ಮಂಗಣ್ಣ ಟಿವಿ ನೋಡುತ್ತಾ ಊಟ ಮರೆತಿದ್ದ. ಇದರಿಂದ ಮಂಗಗಳಿಗೂ ಟಿವಿ ಕಾರ್ಯಕ್ರಮಗಳೆಂದರೆ ಇಷ್ಟ ಎಂಬ ಗಮನಾರ್ಹ ಅಂಶ ಸಂಶೋಧಕರಿಗೆ ಅರ್ಥವಾಗಿದೆ. ಅಂದಹಾಗೆ ಇದು ಗಂಡು ಕೋತಿ ಎಂಬುದು ನಿಮ್ಮ ಗಮನಕ್ಕಿರಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada