»   » ದೇವರಕೆರೆಯಲ್ಲಿ ಅನು ಪ್ರಭಾಕರ್ ಗೆ 'ಪರೀಕ್ಷೆ'

ದೇವರಕೆರೆಯಲ್ಲಿ ಅನು ಪ್ರಭಾಕರ್ ಗೆ 'ಪರೀಕ್ಷೆ'

Posted By:
Subscribe to Filmibeat Kannada

ಹೆಣ್ಣಿನ ಶೋಷಣೆ, ಅಸ್ಪೃಶ್ಯತೆ ಅನಾದಿಕಾಲದಿಂದಲೂ ಇರುವ ಸಾಮಾಜಿಕ ಪಿಡುಗು. ಕೆಳವರ್ಗದ ಹೆಣ್ಣು ಮಗಳೊಬ್ಬಳ ಮೇಲೆ ಮೇಲ್ಜಾಜಿಯವರು ನಡೆಸುವ ದೌರ್ಜನ್ಯ, ದಬ್ಬಾಳಿಕೆಯ ಕುರಿತ ಕಥಾಹಂದರದ ಚಿತ್ರ ಸಿದ್ಧವಾಗುತ್ತಿದೆ. ದೌರ್ಜನ್ಯಕ್ಕೊಳಗಾದ ಹೆಣ್ಣಿನ ಪಾತ್ರದಲ್ಲಿ ಅನು ಪ್ರಭಾಕರ್ ಅಭಿನಯಿಸುತ್ತಿರುವ ಚಿತ್ರ 'ಪರೀಕ್ಷೆ'. ದೇವರಕೆರೆ ಎಂಬ ಹಳ್ಳಿಯಲ್ಲಿ 'ಪರೀಕ್ಷೆ' ನಡೆಯುತ್ತದೆ.

ದೇವರಕೆರೆಯ ವೈದ್ಯ ಬಸವರಾಜನ ಆಸೆಯನ್ನು ತಿರಸ್ಕರಿಸಿದ ಬಂಗಾರಿಗೆ(ಅನು ಪ್ರಭಾಕರ್) ಏಡ್ಸ್ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾನೆ. ಒಮ್ಮೆ ಮೇಲ್ಜಾತಿಯ ವೀರಭದ್ರಪ್ಪನಿಗೆ ಅಪಘಾತವಾದಾಗ ಬಂಗಾರಿಯ ರಕ್ತವೇ ಆತನ ಜೀವ ರಕ್ಷಿಸುತ್ತದೆ. ಆಗ ಆ ಊರಿನ ಜನಕ್ಕೆ ತಮ್ಮ ತಪ್ಪಿನ ಅರಿವಾಗುತ್ತದೆ.

ಸುಂದರಿ ಬಂಗಾರಿಯ ಪಾತ್ರದಲ್ಲಿ ಅನುಪ್ರಭಾಕರ್ ಅಭಿನಯಿಸಿದ್ದಾರೆ. ಬೆಳಗಾವಿಯ ಸುತ್ತ ಮುತ್ತ ಬೆಂಡಿಗೇರಿ, ಅಣ್ಣಿಗೇರಿ ಹಾಗೂ ಗಜಪತಿಯಲ್ಲಿ 14ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೆ ಡಬ್ಬಿಂಗ್ ಕಾರ್ಯಮುಗಿದಿದ್ದು ಇದೀಗ ವಿಜಯನಗರದ ಹೇಮಂತ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ.

ಗೋಮಟೇಶ್ ಫಿಲಂ ಮೇಕರ‍್ಸ್ ಲಾಂಛನದಲ್ಲಿ ಸಂಜಯ.ಬಿ.ಪಾಟೀಲ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶ ಮಾಡುತ್ತಿರುವವರು ಎ.ಆರ್.ರವೀಂದ್ರ, ಸೀತಾರಾಂ ಕಾರಂತ ಚಿತ್ರಕಥೆ, ಶಶಿಧರ್‌ಭಟ್ಟರ ಸಂಭಾಷಣೆ, ಹೇಮಂತಕುಮಾರ್ ಸಂಗೀತ, ಗೀತಪ್ರಿಯ ಸಾಹಿತ್ಯ, ಆರ್.ಮಂಜುನಾಥ ಛಾಯಾಗ್ರಹಣ, ಟಿ.ಗೋವರ್ಧನ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಅನುಪ್ರಭಾಕರ್, ವಿನಯ್‌ಕುಮಾರ್, ಮುನಿ, ಸಿದ್ದರಾಜ್ ಕಲ್ಯಾಣ್‌ಕರ್, ಶಾಂತಮ್ಮ, ಮಾ ಕಿರಣ್ ಹಾಗೂ ವಿಶೇಷ ಪಾತ್ರದಲ್ಲಿ ಏಣಗಿ ಬಾಳಪ್ಪ ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada