»   » ಭೀಮಕಾಯ ಸೌಮ್ಯ ಸ್ವಭಾವದ ಸರ್ಕಸ್ ಬೋರಣ್ಣ

ಭೀಮಕಾಯ ಸೌಮ್ಯ ಸ್ವಭಾವದ ಸರ್ಕಸ್ ಬೋರಣ್ಣ

Subscribe to Filmibeat Kannada
Fight Master Circus Boranna
ಸಾಹಸ ಕಲಾವಿದ ಸರ್ಕಸ್ ಬೋರಣ್ಣ (74) ಗುರುವಾರ ನಿಧನರಾಗಿದ್ದಾರೆ. ಬೆಂಗಳೂರು ಶ್ರೀನಗರದಲ್ಲಿರುವ ಅವರ ಸ್ವಗೃಹದಲ್ಲಿ ದುಃಖ ಮಡುಗಟ್ಟಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಡಿ.ಜಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಸರ್ಕಸ್ ಬೋರಣ್ಣ ಅವರು ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಭೀಮಕಾಯದ ಸರ್ಕರ್ ಬೋರಣ್ಣ ಮೃದು ಸ್ವಭಾವದವರಾಗಿದ್ದರು.

ಬೋರಣ್ಣ ಫೈಟ್ ಮಾಡಲು ನಿಂತ ಎಂದರೆ ಪ್ರೇಕ್ಷಕರು ಬೆಚ್ಚಿ ಬೀಳುತ್ತಿದ್ದರು. ಗಜೇಂದ್ರ, ಶರವೇಗದ ಸರದಾರ, ಮಸಣದ ಹೂವು, ರಾಮಾಚಾರಿ ಸೇರಿದಂತೆ ಕನ್ನಡದ 80 ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬೋರಣ್ಣ ಅವರು ಟೈಗರ್ ಪ್ರಭಾಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ಪ್ರಭಾಕರ್ ನಾಯಕನಾಗಿ 'ಮೇಯರ್ ಪ್ರಭಾಕರ್' ಎಂಬ ಚಿತ್ರವನ್ನು ಬೋರಣ್ಣ ನಿರ್ಮಿಸಿದ್ದರು. ಇದು ಅವರ ನಿರ್ಮಾಣದ ಕೊನೆಯ ಚಿತ್ರವಾಗಿತ್ತು.

ಕನ್ನಡ ಚಿತ್ರರಂಗಕ್ಕೆ ಸಾಹಸ ಕಲಾವಿದನಾಗಿ ಅಡಿಯಿಟ್ಟ ಬೋರಣ್ಣ ನಂತರ ನಿರ್ಮಾಪಕನಾಗಿ, ಖಳನಟನಾಗಿ ಗುರುತಿಸಿಕೊಂಡಿದ್ದರು. ಕನ್ನಡದ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಟನಾಗಿ ಬೋರಣ್ಣ ಕಾಣಿಸಿಕೊಂಡಿದ್ದರು. ತಮಿಳಿನ 8 ಚಿತ್ರಗಳಲ್ಲಿ ನಟಿಸಿದ್ದ ಬೋರಣ್ಣ ಸೂಪರ್ ಸ್ಟಾರ್ ರಜನಿಕಾಂತ್ ಜತೆ ಸಹ ನಟಿಸಿದ್ದರು.

ವರನಟ ಡಾ.ರಾಜ್ ಕುಮಾರ್, ರವಿಚಂದ್ರನ್, ಅಂಬರೀಷ್, ವಿಷ್ಣುವರ್ಧನ್ ಸೇರಿದಂತೆ ಹಲವು ನಾಯಕ ನಟರ ಜತೆ ಬೋರಣ್ಣ ನಟಿಸಿದ್ದರು. ಲೇವಾದೇವಿ ವ್ಯವಹಾರವನ್ನು ಮಾಡುತ್ತಿದ್ದ ಬೋರಣ್ಣ ಶಾಂತ ಸ್ವಭಾವಕ್ಕೆ ಹೆಸರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಶ್ರದ್ಧೆಯಿಂದ ತೊಡಗಿಕೊಂಡು ಸಾಹಸ ಕಲಾವಿದನಾಗಿ ಉತ್ತಮ ಹೆಸರು ಪಡೆದಿದ್ದರು.

ಸರ್ಕಸ್ ಬೋರಣ್ಣ ತಮ್ಮ ಕೊನೆಯ ದಿನಗಳನ್ನು ಕಷ್ಟಕಾಲದಲ್ಲಿ ನೂಕುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಅವರಿಗೆ ಯಾವುದೇ ಚಿತ್ರಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ತೀವ್ರ ನೊಂದುಕೊಂಡಿದ್ದರು. ವಯಸ್ಸಿನ ಸಮಸ್ಯೆ ಹಾಗೂ ಮಾನಸಿಕ ಒತ್ತಡದಿಂದಾಗಿ ಬೋರಣ್ಣ ಅನಾರೋಗ್ಯದಿಂದ ಬಳಲುತ್ತಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada