»   »  ಗುರು ಪ್ರಸಾದ್ ಸಂಭಾವನೆ ರು.63 ಲಕ್ಷಗಳು!

ಗುರು ಪ್ರಸಾದ್ ಸಂಭಾವನೆ ರು.63 ಲಕ್ಷಗಳು!

Subscribe to Filmibeat Kannada

ಗುರುಪ್ರಸಾದ್ ನಿರ್ದೇಶನದ 'ಎದ್ದೇಳು ಮಂಜುನಾಥ' ಚಿತ್ರವನ್ನು ಪ್ರೇಕ್ಷಕರು ಎದ್ದುಬಿದ್ದು ನೋಡುತ್ತಿರುವುದು ಗೊತ್ತೇ ಇದೆ. ಬಾಕ್ಸಾಫೀಸ್ ನಲ್ಲೂ ಮಂಜುನಾಥನಿಗೆ ಕಲೆಕ್ಷನ್ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಗುರು ಪ್ರಸಾದ್ ಬೇಡಿಕೆ ಹೆಚ್ಚಾಗಿದೆ. ತಮಗೊಂದು ಚಿತ್ರ ಮಾಡಿಕೊಡಿ ಎಂದು ಗುರು ಪ್ರಸಾದ್ ಹಿಂದೆ ನಿರ್ಮಾಪಕರು ದುಂಬಾಲು ಬಿದ್ದಿದ್ದಾರೆ. ಅಳೆದೂ ತೂಗಿ ಗುರು ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ.

ಗುರು ನಿರ್ದೇಶಿಸಲಿರುವ ಈ ಎರಡು ಚಿತ್ರಗಳ ಬಗ್ಗೆ ವಿವರಗಳು ಸದ್ಯದಲ್ಲೇ ಬಹಿರಂಗವಾಗಲಿದೆ. ಈ ಎರಡೂ ಚಿತ್ರಗಳಿಗೆ ಗುರು ತಲಾ ರು.63 ಲಕ್ಷಗಳ ಸಂಭಾವನೆ ಪಡೆದಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಇದನ್ನು ಗುರು ಪ್ರಸಾದ್ ಇದನ್ನು ಒಪ್ಪುತ್ತಿಲ್ಲ. ''ಇದು ಕೇವಲ ವದಂತಿ ಅಷ್ಟೇ. ನಾನು ತೆಗೆದುಕೊಂಡಿರುವುದು ಕೇವಲ ರು.54 ಲಕ್ಷಗಳು ಮಾತ್ರ'' ಎಂದು ಸ್ಪಷ್ಟಪಡಿಸಿದ್ದಾರೆ. ಇದೆಲ್ಲಾ 'ಎದ್ದೇಳು ಮಂಜುನಾಥ 'ನಿರ್ಮಾಪಕ ಸನತ್ ಕುಮಾರ್ ಅವರದೇ ಕಿತಾಪತಿ ಎನ್ನುತ್ತಾರೆ.

'ಎದ್ದೇಳು ಮಂಜುನಾಥ' ಗೆದ್ದ ಸಂಭ್ರಮಕ್ಕೆ ಇತ್ತೀಚೆಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸಂತೋಷ ಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಸನತ್ ಕುಮಾರ್ ಮಾತನಾಡುತ್ತಾ,ಗುರು ಸಂಭಾವನೆಯನ್ನು ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅವರು ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದು ತಲಾ ರು.63 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದಿದ್ದರು. ಸನತ್ ಕುಮಾರ್ ಮಾತುಗಳಿಗೆ ಗುರು ಕಸಿವಿಸಿಗೊಂಡಿದ್ದರು. ಇದರಿಂದ ಇಬ್ಬರ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಬಿರುಕು ಬಿಟ್ಟಿತ್ತು.

ಸನತ್ ಕುಮಾರ್ ಬರಲಿ ಬಿಡಲಿ ಮಂಜುನಾಥನನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬುದು ಗುರು ಕನವರಿಕೆ. ಮಂಜುನಾಥ ಅರ್ಧ ಶತಕ ಬಾರಿಸಿದರೆ ಪಿವಿಆರ್ ನಲ್ಲಿ ಇಡೀ ಕನ್ನಡ ಚಿತ್ರೋದ್ಯಮಕ್ಕೆ ಚಿತ್ರ ತೋರಿಸುವ ಉತ್ಸಾಹದಲ್ಲಿ ಗುರು ಇದ್ದಾರೆ. 260 ಆಸನಗಳ ಪ್ರದರ್ಶನ ಮಂದಿರವನ್ನು ಮುಂಗಡ ಕಾದಿರಿಸಿ ಭಾನುವಾರ ಅಥವಾ ಶನಿವಾರ ಮಂಜುನಾಥನ ದರ್ಶನ ಮಾಡಿಸುವ ಎಣಿಕೆ ಗುರು ಅವರದು.

ಟಿಕೆಟ್ ಬೆಲೆಯನ್ನು ಕೊಂಚ ಕಡಿಮೆ ಮಾಡುವಂತೆ ಪಿವಿಆರ್ ನ ಆಡಳಿತ ಮಂಡಳಿಯೊಂದಿಗೆ ಗುರು ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ಪಿವಿಆರ್ ನಲ್ಲಿ ಟಿಕೆಟ್ ದರ ರು.150 ಇದೆ. ಶನಿವಾರ ಮತ್ತು ಭಾನುವಾರಗಳಂದು ರು.80 ಮಾಡಿಕೊಳ್ಳುವಂತೆ ಗುರು ಚೌಕಾಸಿ ಮಾಡುತ್ತಿದ್ದಾರೆ. ಮಂಜುನಾಥ ಶತಕ ಬಾರಿಸಿದರೆ 2.5 ಕೋಟಿ ರುಪಾಯಿ ಲಾಭ ಬರುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತವೆ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada