»   »  ಶ್ರೀಧರ್ ದಂಪತಿಗೆ ಸೀನಿಯರ್ ಡಾನ್ಸರ್ ಪ್ರಶಸ್ತಿ

ಶ್ರೀಧರ್ ದಂಪತಿಗೆ ಸೀನಿಯರ್ ಡಾನ್ಸರ್ ಪ್ರಶಸ್ತಿ

Posted By:
Subscribe to Filmibeat Kannada
Sridhar and Anuradha
'ಅಮೃತ ಘಳಿಗೆ' ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಕಾಲಿಸಿರಿದ ಮತ್ತು ಭರತನಾಟ್ಯ ಪ್ರದರ್ಶನದಿಂದ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ನಟ, ನೃತ್ಯಪಟು ಶ್ರೀಧರ್ ಮತ್ತು ಅವರ ಪತ್ನಿ ಅನುರಾಧ ಅವರನ್ನು ಚೆನ್ನೈನ ನಾರದ ಗಾನ ಸಭಾ 2009ನೇ ಸಾಲಿನ 'ಸೀನಿಯರ್ ಡಾನ್ಸರ್' ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.

ಕಳೆದ ತಿಂಗಳು 27ರಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಶ್ರೀಧರ್ ಮತ್ತು ಅನುರಾಧ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಧನಂಜಯನ್, ಡಾ. ಪದ್ಮಾ ಸುಬ್ರಹ್ಮಣ್ಯಮ್, ಚಿತ್ರಾ ವಿಶ್ವೇಶ್ವರನ್, ಸಾವಿತ್ರಿ ಜಗನ್ನಾಥರಾವ್ ಮುಂತಾದ ನೃತ್ಯ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು ಎಂದು ಶ್ರೀಧರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಕಲಾವಿದರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದು ಇದೇ ಪ್ರಥಮ ಬಾರಿಗೆ. ಈ ಸಂಸ್ಥೆ ನಡೆಸಿದ ಮಹಾಭಾರತದ ಮುಖ್ಯ ಪಾತ್ರಗಳನ್ನು ನಿರೂಪಿಸುವ 'ಭರತಮ್ ಮಹಾಭಾರತಮ್' ಎಂಬ ನೃತ್ಯೋತ್ಸವದಲ್ಲಿ 'ಮಹಾವೀರ ಕರ್ಣ' ಎಂಬ ನೃತ್ಯರೂಪಕವನ್ನು ಶ್ರೀಧರ್ ದಂಪತಿಗಳು ಪ್ರದರ್ಶಿಸಿದರು. ಚೆನ್ನೈನ ಮತ್ತೊಂದು ಖ್ಯಾತ ಸಂಸ್ಥೆ ಭಾರತ್ ಕಲಾಕಾರ್ ಕೂಡ 2001ರಲ್ಲಿ ಯುವಕಲಾಭಾರತಿ ಪ್ರಶಸ್ತಿ ನೀಡಿ ಶ್ರೀಧರ್ ದಂಪತಿಗಳನ್ನು ಗೌರವಿಸಿತ್ತು.

ಬಾಲ್ಯದಿಂದಲೇ ನೃತ್ಯದ ಗೀಳನ್ನು ಬೆಳೆಸಿಕೊಂಡಿದ್ದ ಶ್ರೀಧರ್ ಅವರಿಗೆ 1982ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 'ಶ್ರೇಷ್ಠ ನೃತ್ಯಪಟು' ಪ್ರಶಸ್ತಿ ನೀಡಿತ್ತು. ಶ್ರೀಧರ್ ಅವರ ನೃತ್ಯ ಮತ್ತು ಅಭಿನಯ ಸಾಮರ್ಥ್ಯವನ್ನು ಗಮನಿಸಿದ ಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು 'ಅಮೃತ ಘಳಿಗೆ' ಚಿತ್ರಕ್ಕಾಗಿ ಶ್ರೀಧರ್ ಅವರನ್ನು ಎಳೆತಂದಿದ್ದರು. ನಂತರ ಸುಂದರ ಸ್ವಪ್ನಗಳು, ಬಣ್ಣದ ವೇಷ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಮೌನ ಗೀತೆ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಆಸ್ಫೋಟ, ಬೊಂಬಾಟ್ ಹೆಂಡ್ತಿ, ಸಂತ ಶಿಶುನಾಳ ಷರೀಫ ಸಾಹೇಬ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಶಿಶುನಾಳ ಚಿತ್ರಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯೂ ಒಲಿದುಬಂದಿತು. ಕನ್ನಡ ಚಿತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ಶ್ರೀಧರ್ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.

ಶ್ರೀಧರ್ ಮತ್ತು ಅನುರಾಧ ದಂಪತಿಗಳು ಕರ್ನಾಟಕ, ಭಾರತದೆಲ್ಲೆಡೆ ಮತ್ತು ವಿಶ್ವದಾದ್ಯಂತ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ನೃತ್ಯ ಮತ್ತು ಅಭಿನಯ ಕ್ಷೇತ್ರದಲ್ಲಿ ಅವರ ಮೂರು ದಶಕಗಳ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ 2002ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತ್ತು. 2008ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶ್ರೀಧರ್ ಮತ್ತು ಅನುರಾಧ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada