»   »  ಹುಲಿ ಮರಿ ವಿನೋದ್ ಪ್ರಭಾಕರ್ ಸಂದರ್ಶನ!

ಹುಲಿ ಮರಿ ವಿನೋದ್ ಪ್ರಭಾಕರ್ ಸಂದರ್ಶನ!

Subscribe to Filmibeat Kannada

ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದ ಕಟ್ಟುಮಸ್ತು ನಾಯಕರಲ್ಲೊಬ್ಬರು. ಸಾಹಸ ದೃಶ್ಯಗಳನ್ನು ಬಯಸುವ ಅಭಿಮಾನಿಗಳಿಗೆ ಪ್ರಭಾಕರ್ ಆರಾಧ್ಯ ದೈವ. ಅವರ ಪುತ್ರ ವಿನೋದ್ ಪ್ರಭಾಕರ್ ಅಪ್ಪನ ಹಾದಿಯಲ್ಲೇ ಹೊರಟಿರುವ ಹುಲಿಮರಿ. ಇತ್ತೀಚೆಗೆ ದಟ್ಸ್‌ಕನ್ನಡಕ್ಕೆ ಮುಖಾಮುಖಿಯಾದ ಹುಲಿಮರಿಯೊಂದಿಗಿನ ಮಾತುಕತೆಯ ಆಯ್ದಭಾಗ ಇಲ್ಲಿದೆ.

ಸದ್ಯಕ್ಕೆ ಯಾವ ಸಿನಿಮಾದಲ್ಲಿ ಮಾಡ್ತಿದ್ದೀರಿ?
'ಹೋರಿ' ಚಿತ್ರದಲ್ಲಿ ನಟಿಸುತ್ತಿದ್ದೇನೆ. ನಾಗೇಂದ್ರ ಮಾಸಡಿ ನಿರ್ದೇಶನದ ಚಿತ್ರವದು.

ಹೋರಿ ವಿಶೇಷಗಳೇನು?
ನನ್ನ ಸಿನಿಮಾ ಎಂದಮೇಲೆ ಸಾಹಸಕ್ಕೆ ಪ್ರಾಧಾನ್ಯ ಇದ್ದೇಇರುತ್ತೆ. ಹೋರಿ ವಿಶೇಷ ಅಂದ್ರೆ ಈ ಚಿತ್ರದಲ್ಲಿ ಕಾಮಿಡಿಗೂ ಸಾಕಷ್ಟು ಅವಕಾಶವಿದೆ. ದೊಡ್ಡಣ್ಣ, ಬುಲೆಟ್ ಪ್ರಕಾಶ್, ಕರಿಬಸವಯ್ಯ, ಟೆನ್ನಿಸ್ ಕೃಷ್ಣರಂಥ ಹಾಸ್ಯಕಲಾವಿದರ ತಂಡವೇ ಚಿತ್ರದಲ್ಲಿದೆ. ಹಾಸ್ಯ ಹಾಗೂ ಸಾಹಸವನ್ನು ಸರಿದೂಗಿಸುವ ಸವಾಲು ನನ್ನದು. ಹೋರಿ ಬಗೆಗೆ ನನಗೆ ಸಾಕಷ್ಟು ನಿರೀಕ್ಷೆಗಳಿವೆ. ಈವರೆಗಿನ ಚಿತ್ರಗಳು ನಿರೀಕ್ಷಿಸಿದಷ್ಟು ಯಶಸ್ಸು ತಂದುಕೊಟ್ಟಿಲ್ಲ. ಈ ನಿರಾಶೆ ಹೋರಿ ಮೂಲಕ ಕೊನೆಯಾಗುತ್ತದೆಂದು ನಂಬಿದ್ದೇನೆ.

ಸಿನಿಮಾ ಸಾಹಸದ ಬಗ್ಗೆ ಹೇಳಿ?
ಸಾಹಸ ನನ್ನುಸಿರು. ಸಾಹಸವನ್ನು ನಾನು ಪ್ರೀತಿಸುತ್ತೇನೆ.

ನಿಮ್ಮ ಸಿನಿಮಾಗಳಲ್ಲಿ ಸಾಹಸಕ್ಕೇ ಯಾಕೆ ಪ್ರಾಧಾನ್ಯತೆ?
ಅಭಿಮಾನಿಗಳು ನನ್ನಿಂದ ಸಾಹಸ ದೃಶ್ಯಗಳನ್ನು ಬಯಸುತ್ತಾರೆ. ನನ್ನಲ್ಲಿ ನನ್ನ ತಂದೆ ಪ್ರಭಾಕರ್ ಅವರನ್ನು ಗುರ್ತಿಸುವ ಪ್ರಯತ್ನ ಮಾಡುತ್ತಾರೆ. ಕೆಲವು ಅಭಿಮಾನಿಗಳು ಅಪ್ಪನೊಂದಿಗೆ ನನ್ನನ್ನು ಹೋಲಿಸುವುದೂ ಇದೆ. ಆದರೆ ಅಪ್ಪನ ಎತ್ತರಕ್ಕೆ ಏರುವುದು ಸಾಧ್ಯವಿಲ್ಲ. ಆ ಎತ್ತರ ಮುಟ್ಟುವ ಪ್ರಯತ್ನವನ್ನು ನಿರಂತರವಾಗಿ ನಡೆಸಬಹುದಷ್ಟೇ.

ಸರ್ಕಲ್ ರೌಡಿ ಚಿತ್ರದಲ್ಲೂ ಸಾಕಷ್ಟು ಸಾಹಸ ದೃಶ್ಯಗಳಿದ್ದವು. ಆದರೆ ಸಿನಿಮಾ ಗೆಲ್ಲಲಿಲ್ಲ?
ನಿಜ. ನಾವು ನಿರೀಕ್ಷಿಸಿದಂತೆ ಸರ್ಕಲ್ ರೌಡಿ ಗೆಲ್ಲಲಿಲ್ಲ. ಆದರೆ ಆ ಚಿತ್ರದಲ್ಲಿ ನನ್ನ ಪ್ರಯತ್ನ ಪ್ರಾಮಾಣಿಕವಾಗಿತ್ತು. ಜೀವದ ಹಂಗು ತೊರೆದು ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದೆ. ನನ್ನ ಅಭಿನಯವನ್ನು, ಸಾಹಸ ದೃಶ್ಯಗಳನ್ನು ಅಭಿಮಾನಿಗಳು ಮೆಚ್ಚಿಕೊಂಡರು. ಆದರೆ, ಒಟ್ಟಾರೆಯಾಗಿ ಚಿತ್ರ ಯಶ ಕಾಣಲಿಲ್ಲ.

ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಾಗ ಗಾಯಗೊಂಡಿದ್ದುಂಟಾ?
ಸಾಕಷ್ಟು ಸಲ. ಹೋರಿ ಚಿತ್ರವನ್ನೇ ನೋಡಿ. ಮಹಡಿ ಮೇಲಿಂದ ಧುಮುಕುವ ಸನ್ನಿವೇಶದಲ್ಲಿ ಆಯತಪ್ಪಿ ಕೈಮುರಿದುಕೊಂಡಿದ್ದೆ. ಬಿದ್ದಾಗ ಕೈ ನೋವಾಗುತ್ತಿದ್ದರೂ ಮುಖದಲ್ಲಿ ನಗು ತುಂಬಿಕೊಂಡು ಸೀನ್ ಓಕೇನಾ ಸಾರ್ ಎಂದು ನಿರ್ದೇಶಕರನ್ನು ಕೇಳಿದ್ದೆ. ಆನಂತರ ಅಲ್ಲೇ ಇದ್ದ ಸ್ಟಂಟ್ ಮಾಸ್ಟರ್ ಸ್ಥಳದಲ್ಲೇ ಮೂಳೆ ಕೂರಿಸಿದರು. ನನ್ನ ಕೈ ತೊಡೆಯಂತಾಯ್ತು. ಕಡೆಪಕ್ಷ ಹದಿನೈದು ದಿನ ಕೈ ಅಲುಗಾಡಿಸುವಂತೆಯೇ ಇಲ್ಲ ಎಂದು ವೈದ್ಯರು ತಾಕೀತು ಮಾಡಿದ್ದರು. ಆದರೆ ಸುಮ್ಮನಿದ್ದಷ್ಟೂ ನೋವು ಹೆಚ್ಚಾಯಿತು. ನೋವಿನಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಇನ್ನೊಂದು ಸನ್ನಿವೇಶದಲ್ಲಿ- ಬೈಕನ್ನು ಗಾಜಿನ ಗೋಡೆಯಲ್ಲಿ ತೂರಿಸುವಾಗ ಮೈಯೆಲ್ಲ ಗಾಯವಾಗಿತ್ತು. ಇಂಥ ಘಟನೆಗಳು ಸಾಕಷ್ಟು ನಡೆದಿವೆ. ಅವೆಲ್ಲ ಜೀವನದ ಭಾಗ.

ಜೀವವನ್ನು ಪಣಕ್ಕಿಟ್ಟು ಅಭಿನಯಿಸುವುದು ವೃಥಾ ರಿಸ್ಕ್ ಅನ್ನಿಸೊಲ್ಲವೇ?
ಇಲ್ಲ. ನಮ್ಮ ಸ್ವಂತಿಕೆಯನ್ನೇನಾದರೂ ಮೆರೆಯಬೇಕೆಂದರೆ ರಿಸ್ಕ್ ತಗೊಳ್ಳೋದು ಅನಿವಾರ್ಯ. ಪ್ರೀತಿಯಿಂದಲೇ ಇಂಥ ಸವಾಲುಗಳನ್ನು ಎದುರಿಸುತ್ತೇನೆ.

ಸಹ ನಾಯಕನಟರ ಸ್ಪರ್ಧೆಯ ಭಯವೇ?
ಸ್ಪರ್ಧೆ ಇದ್ದೇಇದೆ. ಅಪ್ಪು, ವಿಜಯ್, ದರ್ಶನ್ ಎಲ್ಲರೂ ರಿಸ್ಕ್ ತಗೊಳ್ಳುವವರೇ. ಇವರ ನಡುವೆಯೂ ನನ್ನ ಸ್ವಂತಿಕೆ ಕಂಡುಕೊಳ್ಳುವ ವಿಶ್ವಾಸವಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada