»   » ಚಿಂದೋಡಿ ಲೀಲಾ ಆರೋಗ್ಯ ಸ್ಥಿತಿ ಗಂಭೀರ

ಚಿಂದೋಡಿ ಲೀಲಾ ಆರೋಗ್ಯ ಸ್ಥಿತಿ ಗಂಭೀರ

Posted By: *ಉದಯರವಿ
Subscribe to Filmibeat Kannada
Chindodi Leela
ಖ್ಯಾತ ರಂಗಭೂಮಿ ಕಲಾವಿದೆ ಹಾಗೂ ಚಿತ್ರನಟಿ ಚಿಂದೋಡಿ ಲೀಲಾ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ವೊಕಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೃದಯಾಘಾತಕ್ಕೆ ಒಳಗಾಗಿದ್ದ ಚಿಂದೋಡಿ ಲೀಲಾ ಅವರು ಕಳೆದ ಹತ್ತು ದಿನಗಳ ಹಿಂದಷ್ಟೆ ವೊಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ವೊಕಾರ್ಟ್ ಆಸ್ಪತ್ರೆಯಲ್ಲಿ ಸೋಮವಾರ(ಜ.18) ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಚಿಂದೋಡಿ ಲೀಲಾ ಅವರ ಕುಟುಂಬ ಮೂಲಗಳು ತಿಳಿಸಿವೆ.

ಚಿಂದೋಡಿ ಲೇಲಾ ಅವರು ಹವ್ಯಾಸಿ ಮತ್ತು ವೃತ್ತಿಪರ ನಾಟಕರಂಗದಲ್ಲಿ ಸುಮಾರು 40 ವರ್ಷಗಳಿಂದ ಸಕ್ರಿಯರಾಗಿದ್ದಾರೆ. 'ಪೋಲಿಸನ ಮಗಳು'ನಾಟಕ ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸತತವಾಗಿ 1,137 ಪ್ರದರ್ಶನಗಳನ್ನು ಹಾಗೂ ರಾಜ್ಯಾದ್ಯಂತ 4,500 ಪ್ರದರ್ಶನಗಳನ್ನು ಕಂಡು ಗಿನ್ನೆಸ್ ದಾಖಲೆ ನಿರ್ಮಿಸಿದೆ. 'ಹಳ್ಳಿಯ ಹುಡುಗಿ' ಚಿಂದೋಡಿ ಲೀಲಾ ಅವರ ಮತ್ತೊಂದು ಜನಪ್ರಿಯ ನಾಟಕ.

ಚಿಂದೋಡಿ ಲೀಲಾ ಅವರು ಕೇವಲ ರಂಗಭೂಮಿಗಷ್ಟೇ ಸೀಮಿತವಾಗದೆ ಹಲವಾರು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಶರಪಂಜರ, ತುಂಬಿದ ಕೊಡ, ಗಾನಯೋಗಿ ಪಂಚಾಕ್ಷರಿ ಗವಾಯಿ ಅವರು ಅಭಿನಯಿಸಿದ ಚಿತ್ರಗಳು. ಭಾರತ ಸರಕಾರದ ಪದ್ಮಶ್ರೀ ಸೇರಿದಂತೆ ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರನ್ನು ವರಿಸಿವೆ. ಚಿಂದೋಡಿ ಲೀಲಾ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸೋಣ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X