For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕಪ್; ಕಲಾವಿದರ ನಡುವೆ ಬಿರುಕು

  By * ಉದಯರವಿ
  |

  ಕನ್ನಡ ಸಿನಿಮಾ ತಾರೆಗಳ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಗೆ ದುತ್ತನೆ ಸಮಸ್ಯೆಯೊಂದು ಎದುರಾಗಿದೆ. ಜೇನು ಗೂಡು ನಾವೆಲ್ಲಾ ಬೇರೆಯಾದರೆ ಜೇನಿಲ್ಲ ಎಂದು ಹಾಡುತ್ತಿದ್ದ ಕಲಾವಿದರ ನಡುವೆ ಬಿರುಕು ಮೂಡಿದೆ. ಆಟ ಆರಂಭವಾಗುವುದಕ್ಕೂ ಮುನ್ನ ಡಾ.ರಾಜ್ ಕಪ್ ನಲ್ಲಿ ಅಪಸ್ವರಗಳು ಮಿಡಿದಿವೆ. ಬಹುತೇಕ ಕಲಾವಿದರು ಈ ಪಂದ್ಯಾವಳಿಯಲ್ಲಿ ಆಡಬೇಕೆ, ಬೇಡವೆ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

  ಚಲನಚಿತ್ರ ನೃತ್ಯ ಕಲಾವಿದರ ಸಹಾಯಾರ್ಥ ಈ ಪಂದ್ಯಾವಳಿ ದಾವಣಗೆರೆಯ ಬಾಪೂಜಿ ಮೈದಾನದಲ್ಲಿ ಜುಲೈ 23ರಿಂದ 25ರವೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಡಿ ಎಂದು ಕಲಾವಿದರ ಸಂಘ ಫರ್ಮಾನು ಹೊರಡಿಸಿರುವುದೇ ಸಮಸ್ಯೆಗೆ ಕಾರಣವಾಗಿದೆ. ಈ ಪತ್ರದ ಕಾರಣ ಕೆಲವು ಕಲಾವಿದರು ಡಾ.ರಾಜ್ ಕಪ್ ನಿಂದ ದೂರ ಸರಿದಿದ್ದಾರೆ.

  ಕಲಾವಿದರ ಸಹಾಯಾರ್ಥ ನವೆಂಬರ್ 1ರಂದು ಅಂತರ್ ರಾಜ್ಯ ಕಲಾವಿದರ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ. ಹಾಗಾಗಿ ನೃತ್ಯ ಕಲಾವಿದರ ಸಹಾಯಾರ್ಥದ ಪಂದ್ಯದಲ್ಲಿ ಆಡದಿರುವಂತೆ ಕಲಾವಿದರ ಸಂಘ ಸೂಚಿಸಿದೆ. ಡಾ.ರಾಜ್ ಕಪ್ ನ ಅಭ್ಯಾಸ ಪಂದ್ಯಕ್ಕೆ ಕೆಲವರು ಈಗಾಗಲೆ ಕೈಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

  ಮುಖ್ಯವಾಗಿ ದರ್ಶನ್, ದುನಿಯಾ ವಿಜಿ ಸೇರಿದಂತೆ ಬಹುತೇಕ ಕಲಾವಿದರು ಡಾ.ರಾಜ್ ಕಪ್ ನಿಂದ ದೂರ ಉಳಿದಿದ್ದಾರೆ. ಅದರೆ ಉಪೇಂದ್ರ, ಸುದೀಪ್, ಶಿವರಾಜ್ ಕುಮಾರ್, ರವಿಚಂದ್ರನ್ ಮಾತ್ರ ಅಭ್ಯಾಸ ಪಂದ್ಯದಲ್ಲಿ ನಿರತರಾಗಿದ್ದಾರೆ. ಇಂದು (ಜು.21) ಅವರು ಬ್ಯಾಟು ಹಿಡಿದು ಸೆಂಟ್ರಲ್ ಕಾಲೇಜಿನಲ್ಲಿ ಅಭ್ಯಾಸ ಪಂದ್ಯ ಆಡಿದರು.

  ಆರಂಭದಲ್ಲಿ ಅಭ್ಯಾಸ ಪಂದ್ಯಕ್ಕೆ ತಪ್ಪದೆ ಬರುತ್ತಿದ್ದ ದುನಿಯಾ ವಿಜಯ್ ನಂತರ ಸೆಂಟ್ರಲ್ ಕಾಲೇಜು ಮೈದಾನದ ಕಡೆ ತಿರುಗಿಯೂ ನೋಡಿಲ್ಲ ಎಂದು ಕಲಾವಿದರೊಬ್ಬರು ಹೇಳಿದರು. ಟೂರ್ನಿಯಲ್ಲಿ ಭಾಗವಹಿಸಬೇಡಿ ಎಂಬ ಕಲಾವಿದರ ಸಂಘದ ಪತ್ರಕ್ಕೆ ಬೆಲೆ ಕೊಟ್ಟ ಕೆಲವರು ನಮಗ್ಯಾಕೆ ಬೇಕು ಈ ಉಸಾಬರಿ ಎಂದು ಟೂರ್ನಿಯಿಂದ ದೂರ ಉಳಿದಿದ್ದಾರೆ.

  ಆದರೆ ಇದರ ಪರಿವೇ ಇಲ್ಲದ ಹೊಸಬರಾದ ಲೂಸ್ ಮಾದ ಯೋಗೇಶ್, ಯಶ್, ಚಿರಂಜೀವಿ ಸರ್ಜಾ, ಚೇತನ್ ಮುಂತಾದವರು ಮಾತ್ರ ಡಾ.ರಾಜ್ ಕಪ್ ನ ಅಭ್ಯಾಸ ಪಂದ್ಯದಲ್ಲಿ ನಿರತರಾಗಿದ್ದಾರೆ. ಕಲಾವಿದರೆಲ್ಲಾ ಒಂದೇ. ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ಆಗಬೇಕು ಎಂಬ ಮಾತು ಅರ್ಥ ಕಳೆದುಕೊಂಡಂತಿದೆ. ಒಟ್ಟಿನಲ್ಲಿ ಡಾ.ರಾಜ್ ಕಪ್ ಮೇಲೆ ಸಮಸ್ಯೆಯ ಕಾರ್ಮೋಡ ಕವಿದಿರುವುದು ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X