»   » ರಾಜ್ಯದಲ್ಲಿ ಸೂತ್ರ ಹರಿದ ಗಾಳಿಪಟದಂತಾದ ಕೈಟ್ಸ್

ರಾಜ್ಯದಲ್ಲಿ ಸೂತ್ರ ಹರಿದ ಗಾಳಿಪಟದಂತಾದ ಕೈಟ್ಸ್

Posted By:
Subscribe to Filmibeat Kannada

ಬಾಲಿವುಡ್ ಚಿತ್ರ 'ಕೈಟ್ಸ್' ಬಿಡುಗಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಡೆಯೊಡ್ದಿದ್ದರೂ ಇಂದು ಮಂತ್ರಿ ಮಾಲ್ ನಲ್ಲಿ ಚಿತ್ರ ಬಿಡುಗಡೆ ಕಂಡಿತು. ಚಿತ್ರ ಬಿಡುಗಡೆಯಾಗಿದ್ದನ್ನು ವಿರೋಧಿಸಿ ಕನ್ನಡ ಚಲನಚಿತ್ರ ವಿತರಕರು, ನಿರ್ಮಾಪಕರು ಮಂತ್ರಿ ಮಾಲ್ ಬಳಿ ಪ್ರತಿಭಟಿಸಿದರು. ಕಡೆಗೆ ಪೊಲೀಸರು ಮಧ್ಯ ಪ್ರವೇಶಿಸಿ 'ಕೈಟ್ಸ್ ' ಪ್ರದರ್ಶನವನ್ನು ರದ್ದುಪಡಿಸಿದ ಘಟನೆ ಶುಕ್ರವಾರ(ಮೇ.21) ನಡೆದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಗ್ ಸಿನಿಮಾಸ್, ಕಾವೇರಿ ಚಿತ್ರಮಂದಿರದ ಬಳಿಯೂ 'ಕೈಟ್ಸ್' ಬಿಡುಗಡೆಯನ್ನು ವಿರೋಧಿಸಿ ನಿರ್ಮಾಪಕರು ಹಾಗೂ ವಿತರಕರು ಪ್ರತಿಭಟನೆ ನಡೆಸಿದರು. ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮಗಳನ್ನು ಮೀರಿ 'ಕೈಟ್ಸ್' ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳ ಪ್ರಕಾರ ಪರಭಾಷಾ ಚಿತ್ರಗಳು ಬೆಂಗಳೂರು ಸೇರಿದಂತೆ ರಾಜ್ಯದ 21 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಬೇಕು. ಆದರೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುವ 'ಕೈಟ್ಸ್' ಚಿತ್ರದ ವಿತರಕರಾದ ರಿಲಯನ್ಸ್ ಬಿಗ್ ಸಂಸ್ಥೆ 35 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಪ್ರತಿದಿನ 157 ಷೋಗೆ ವ್ಯವಸ್ಥೆ ಮಾಡಲಾಗಿತ್ತು.

ಫಿಲಂ ಚೇಂಬರ್ ನಿಯಮಗಳನ್ನು ಗಾಳಿಗೆ ತೂರಿದ ರಿಲಯನ್ಸ್ ಸಂಸ್ಥೆಯ ಧೋರಣೆಯನ್ನು ಖಂಡಿಸಿ ಕನ್ನಡ ಚಲನಚಿತ್ರ ನಿರ್ಮಾಪಕರು ಬೆಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದರು. ಕ್ರಮಕೈಗೊಳ್ಳುವಂತೆ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮಾತುಕತೆಗೆ ಬರುವಂತೆ ರಿಲಯನ್ಸ್ ಬಿಗ್ ಸಂಸ್ಥೆಗೆ ಆಹ್ವಾನ ನೀಡಲಾಗಿತ್ತು. ಆದರೆ ರಿಲಯನ್ಸ್ ಬಿಗ್ ಸಂಸ್ಥೆಯ ಪ್ರತಿನಿಧಿಗಳು ಸಭೆಗೆ ಗೈರು ಹಾಜರಾಗಿದ್ದರು.

ರಿಲಯನ್ಸ್ ಸಂಸ್ಥೆಯ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದ ಫಿಲಂ ಚೇಂಬರ್, 'ಕೈಟ್ಸ್ 'ಬಿಡುಗಡೆಗೆ ತಡೆಯೊಡ್ಡಿತ್ತು. ಫಿಲಂ ಚೇಂಬರ್ ನ ಆದೇಶವನ್ನು ಧಿಕ್ಕರಿಸಿ 'ಕೈಟ್ಸ್ 'ಬಿಡುಗಡೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಫಿಲಂ ಚೇಂಬರ್ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಎಚ್ಚರಿಸಿದ್ದರು. ವಿಷಯ ಹೀಗಿದ್ದರೂ ಇಂದು ಮಂತ್ರಿ ಮಾಲ್ ನಲ್ಲಿ ಚಿತ್ರ ಬಿಡುಗಡೆಯಾಗಿ ಕಡೆಗೆ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

ಕೈಟ್ಸ್ ಕತೆ ಅಷ್ಟಷ್ಟು ಮಾತ್ರವೆ!
ಈಗಾಗಲೆ ದೇಶದಾದ್ಯಂತೆ ಬಿಡುಗಡೆ ಕಂಡಿರುವ ಋತಿಕ್ ರೋಷನ್ ಹಾಗೂ ಬಾರ್ಬರಾ ಮೋರಿ ನಟನೆಯ 'ಕೈಟ್ಸ್ 'ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರಕತೆ ಅಷ್ಟಷ್ಟು ಮಾತ್ರವೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೈಟ್ಸ್ ಹಾರಾಟ ಏನಿದ್ದರೂ ಋತಿಕ್ ಅಭಿನಯದ ಮೇಲೆ ನಿಂತಿದೆ ಎನ್ನುತ್ತದೆ ಚಿತ್ರ ವಿಮರ್ಶೆ, ಮುಂದೆ ಓದಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada