For Quick Alerts
  ALLOW NOTIFICATIONS  
  For Daily Alerts

  ಜಸ್ಟ್ ಮಾತ್ ಮಾತಲ್ಲಿ ಸುದೀಪ್ ಜತೆ ಮಾತುಕತೆ!

  By *ಜಯಂತಿ
  |

  ಸುದೀಪ್ ಭಾವಾವೇಶಕ್ಕೆ ಒಳಗಾಗಿದ್ದರು. ಪ್ರತಿ ಮಾತಿನಲ್ಲೂ ವಿಷಾದ, ಬೇಸರ. ಮಾಡುವ ಎಲ್ಲಾ ಕೆಲಸಗಳೂ ತಮ್ಮ ವಿರುದ್ಧ ದಿಕ್ಕಿಗೇ ಬೆಟ್ಟುಗಳು ತೋರಲು ಕಾರಣವಾಗುತ್ತಿವೆಯಲ್ಲ ಎಂಬ ಕೊರಗು. ಅವರ ದುಗುಡ, ದುಮ್ಮಾನವನ್ನು ಅವರ ಮಾತುಗಳಲ್ಲೇ ಕೇಳೋಣ...

  'ಒಂದೂವರೆ ವರ್ಷದಿಂದ ಸ್ಕ್ರಿಪ್ಟ್ ಮಾಡಿಟ್ಟುಕೊಂಡ ಸಿನಿಮಾ ಜಸ್ಟ್ ಮಾತ್ ಮಾತಲ್ಲಿ. ಈಗ ನಟಿಯೊಬ್ಬಳು ಬಂದು ಫ... ಅಂದರೆ ಏನರ್ಥ? ನಾನು ಜೀವನದಲ್ಲಿ ಸಾಕಷ್ಟು 'ಫಾಸ್" ಅಂಡ್ 'ಬೀಸ್"ನ ನೋಡಿದ್ದೇನೆ. ಯಾರ್‍ಯಾರು ಅವನ್ನು ಹೇಗೆಹೇಗೆ ಉಪಯೋಗಿಸುತ್ತಾರೆ ಅನ್ನೋದೂ ಗೊತ್ತು. ನಾನು ಯಾವತ್ತೂ ಯಾವ ನಟಿಯ ವಿರುದ್ಧವಾಗಲೀ, ಸಹನಟರ ವಿರುದ್ಧವಾಗಲೀ ಹಗುರವಾಗಿ ಮಾತಾಡಿಲ್ಲ. ಕೆಲಸ ಮಾಡಿಕೊಂಡು ಹೋಗೋದು ನನ್ನ ಜಾಯಮಾನ.

  ನನ್ನಿಷ್ಟದ ಸಿನಿಮಾ ಮಾಡುತ್ತಾ ಬಂದಿದ್ದೇನೆ. ಮಾಡಿಕೊಂಡು ಹೋಗುತ್ತೇನೆ, ಅಷ್ಟೆ. ಯಾರ ಮುಂದೆಯೂ ಬಂದು ಪ್ರಚಾರದ ಗಿಮಿಕ್ಕಿಗೆ ಓಲೈಸುವ ಕೆಲಸವನ್ನು ನಾ ಮಾಡಿಲ್ಲ. ನನ್ನ ಸಿನಿಮಾ ಯಾವ ಮುಖ ಬಯಸುತ್ತದೋ ಅಂಥವರಿಗೆ ಅವಕಾಶ ಕೊಟ್ಟಿದ್ದೇನೆ. ಅನು ಪ್ರಭಾಕರ್ ಬೇಕೆನಿಸಿದಾಗ ಅವರಿಗೆ ಬಣ್ಣ ಹಚ್ಚಿಸಿದ್ದೇನೆ. ದೀಪ ಬೇಕೆನಿಸಿದಾಗ ಅವರಿಂದ ಪಾತ್ರ ಮಾಡಿಸಿದ್ದೇನೆ.

  ಈಗ ರಮ್ಯಾ ಅವರನ್ನು ನಟಿಸಿ ಅಂತ ಕರೆದದ್ದೂ ನಾನೇ. ಯಾಕೆಂದರೆ, ಆ ಪಾತ್ರಕ್ಕೆ ಅವರು ಬೇಕಿತ್ತಷ್ಟೆ. ಅಂದರೆ, ನಾನು ಅವರಿಗೆ ಅವಕಾಶ ಕೊಟ್ಟಿದ್ದೇನೆ. ಅದಕ್ಕೆ ಕಲಾವಿದೆಯಾಗಿ ಅವರು ಸ್ಪಂದಿಸಬೇಕು. ನಾವು ಕಷ್ಟಪಟ್ಟು ಒದ್ದಾಡಿಕೊಂಡು ಸಿನಿಮಾ ಮಾಡುವಾಗ ಒಂದೇ ಮಾತಲ್ಲಿ; ಅದೂ ಕೆಟ್ಟಮಾತಲ್ಲಿ ಇಡೀ ಚಿತ್ರವನ್ನು ಹೊಡೆದುಹಾಕಿದರೆ ಏನರ್ಥ?..." ಸುದೀಪ್ ಮಾತಿನಲ್ಲಿ ಸಣ್ಣ ಪಾಸ್.

  ಇಷ್ಟಕ್ಕೂ ಮುಸ್ಸಂಜೆ ಮಾತು ಚಿತ್ರದಲ್ಲಿ ನೀವೇ ಅಲ್ಲವೇ ರಮ್ಯಾಗೆ ಅವಕಾಶ ಕೊಡಿಸಿದ್ದು? ಅದನ್ನು ಹೆಮ್ಮೆಯಿಂದ ಹೇಳಿಕೊಂಡು ರಮ್ಯಾ ಬೆನ್ನುತಟ್ಟಿದ್ದು ನೀವೇ ಅಲ್ಲವೇ? ಅಂತ ಕೇಳಿದರೆ, ಸುದೀಪ್ ಮತ್ತೊಂದು ಪಾಸ್ ತೆಗೆದುಕೊಂಡರು. ಆಮೇಲೆ ಮಾತು ಮುಂದುವರಿಯಿತು.

  'ನಾನು ಹೇಳಿದೆನಲ್ಲ; ಪಾತ್ರಕ್ಕೆ ಹೊಂದುತ್ತಾರೆ ಅನ್ನಿಸಿದ ಅನೇಕರಿಗೆ ನಾನು ಅವಕಾಶ ಕೊಡಿಸಿದ್ದೇನೆ. ಮಾಸ್ಟರ್ ಹಿರಣ್ಣಯ್ಯ ತರಹದ ಕಲಾವಿದರಿಂದ ಅಭಿನಯ ತೆಗೆದಿದ್ದೇನೆ. ಅವರೆಲ್ಲಾ ಖುಷಿ ಪಟ್ಟು ನನ್ನ ಬಗ್ಗೆ ಮಾತಾಡಿದ್ದರು. ಮುಸ್ಸಂಜೆ ಮಾತು ನಿರ್ದೇಶಕರು ರಮ್ಯಾ ಆ ಪಾತ್ರ ಮಾಡಿದರೆ ಚೆನ್ನ ಅಂತ ಹೇಳಿದರು. ಅದಕ್ಕೇ ಕನ್ವಿನ್ಸ್ ಮಾಡಿದೆ. ಅದು ವರ್ಕ್‌ಔಟ್ ಕೂಡ ಆಯಿತು.

  ಸಕ್ಸಸ್ ಬಂದಾಗ ಒಂದು ಮಾತು, ಬರದೇ ಇದ್ದಾಗ ಇನ್ನೊಂದು ಮಾತು ಆಡೋದು ನನಗೆ ಗೊತ್ತಿಲ್ಲ. ಕೆಲವರಿಗೆ ಅದು ಅಭ್ಯಾಸ. ಬಹುಶಃ ರಮ್ಯಾ ಕೂಡ ಆ ಕೆಟಗರಿಗೆ ಸೇರುತ್ತಾರೆ. ನನಗೆ ನನ್ನ ಮಿತಿ-ಸಾಮರ್ಥ್ಯ ಗೊತ್ತಿರುವಂತೆ ಅವರ ಮಿತಿಗಳೂ ಗೊತ್ತು. ಅವನ್ನೆಲ್ಲ ಎತ್ತಿ ಆಡೋದು ಇಷ್ಟವಿಲ್ಲ" ಸುದೀಪ್ ಮಾತು ನಿಲ್ಲಿಸಿದರು. ಹೊರಗಡೆ ದೊಡ್ಡ ಮಳೆ ಸುರಿದು ನಿಂತಿತ್ತು.

  ಇಷ್ಟಕ್ಕೂ ರಮ್ಯಾ ಕೆಲವು ಆಪ್ತರಲ್ಲಿ ಸುದೀಪ್ ವಿರುದ್ಧ ಮಾಡಿರುವ ಆರೋಪವಾದರೂ ಏನು ಎಂಬ ಪ್ರಶ್ನೆ ಇದೆ. ಕೆಲವು ಮೂಲಗಳ ಪ್ರಕಾರ ಸುದೀಪ್ ಸ್ತ್ರೀಲೋಲ ಎಂಬುದೇ ಆ ಆರೋಪ. ಅವರ ಈ ವರ್ತನೆಯಿಂದ ಬೇಸತ್ತು ಪತ್ನಿ ಕೂಡ ಅವರೊಟ್ಟಿಗೆ ಸಂಸಾರ ಮಾಡುತ್ತಿಲ್ಲ ಎಂಬ ಮಾತೂ ಗಾಂಧಿನಗರದ ಓಣಿಗಳಲ್ಲಿ ಓಡಾಡುತ್ತಿದೆ. ಆದರೆ, ಸುದೀಪ್ ಮಾತ್ರ ಖಾಸಗಿ ವಿಷಯಗಳ ಕುರಿತು ಚರ್ಚೆಗೆ ಒಡ್ಡಿಕೊಳ್ಳಲು ಸಿದ್ಧರಿಲ್ಲ. 'ಐ ಆಮ್ ಡೂಯಿಂಗ್ ಮೈ ವರ್ಕ್. ಲೆಟ್ಸ್ ಟಾಕ್ ಅಬೌಟ್ ಮೈ ವರ್ಕ್ ಅಂಡ್ ಸಿನಿಮಾ" ಎಂದು ಅವರು ಕಡ್ಡಿ ತುಂಡು ಮಾಡಿದಂತೆ ನುಡಿಯುತ್ತಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X