»   » ನಿರ್ದೇಶಕಿ ಆರತಿ : ‘ಮಿಠಾಯಿ ಮನೆ’ಯಲ್ಲಿ ಲೈಟ್ಸ್‌ ಆನ್‌, ಕ್ಯಾಮರಾ...

ನಿರ್ದೇಶಕಿ ಆರತಿ : ‘ಮಿಠಾಯಿ ಮನೆ’ಯಲ್ಲಿ ಲೈಟ್ಸ್‌ ಆನ್‌, ಕ್ಯಾಮರಾ...

By Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ವರ್ಷದ ಹಿಂದಿನ ಮಾತು. ಬೆಳಗ್ಗೆ 10.30ರ ಸಮಯ; ಫೋನ್‌ ಬಂತು. 'ನಾನು ಆರತಿ ದೇಸಾಯಿ ಮಾತಾಡ್ತಿರೋದು. ನಿಮಗೆ ಪರಿಚಯವಿರಲಿಕ್ಕಿಲ್ಲ. 17ವರ್ಷದ ಹಿಂದೆ ನಾನು ಬೆಂಗಳೂರಿನಲ್ಲಿದ್ದಾಗ ದೂರದರ್ಶನಕ್ಕೆ ಧಾರಾವಾಹಿಯಾಂದನ್ನು ನಿರ್ದೇಶಿಸಿದ್ದೆ. ಈಗ ಸಿನಿಮಾವೊಂದನ್ನು ಮಾಡಬೇಕೆಂದಿದ್ದೇನೆ. ಕನ್ವೆನ್ಯನಲ್‌ ಕನ್ನಡ ಸಿನಿಮಾವಲ್ಲ. ಅವಧಿ ಒಂದೂವರೆ ಗಂಟೆ. ಡ್ಯುಯೆಟ್‌ ಹಾಡಿಲ್ಲ. ಹೊಡೆದಾಟವಿಲ್ಲ. ಕೆಲಸ ಮಾಡುವ ಆಸಕ್ತಿಯಿದ್ದರೆ ನಿಮ್ಮ ವಿಳಾಸ ಹೇಳಿ. ಬಂದು ಭೇಟಿಯಾಗುತ್ತೇನೆ" ಎಂದರು. 'ನಿಮ್ಮ ವಿಳಾಸ ಹೇಳಿ. ನಾಳೆ ನಾನೇ ಬಂದು ಭೇಟಿಯಾಗುತ್ತೇನೆ" ಎಂದೆ.

  ವಿಂಡ್ಸರ್‌ ಮ್ಯಾನರ್‌ ಬಳಿ ಇರುವ ಅಪಾರ್ಟ್‌ಮೆಂಟ್‌ ಒಂದರ ವಿಳಾಸ ಹಿಡಿದು ಮರುದಿನ ಅವರ ಮನೆಗೆ ಹೋದೆ.

  ತಾಯಿ ಮತ್ತು ಮಗಳು ಯಶಸ್ವಿನಿ ತಮ್ಮ ಮೊದಲ ಸಿನಿಮಾ 'ಮಿಠಾಯಿ ಮನೆ"ಯ ತಾಂತ್ರಿಕ ವಿಷಯಗಳ ಬಗ್ಗೆ ಚರ್ಚಿಸಿದರು. ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಎಲ್ಲದಕ್ಕೂಉತ್ತರಿಸಿದೆ. ಹೀಗೆ ಎರಡು ಬಾರಿ ಭೇಟಿಯಾದಾಗಲೂ ನನಗೆ ಆರತಿ ದೇಸಾಯಿಯವರು ನಟಿ ಆರತಿಯೆಂದು ಗೊತ್ತಾಗಲೇ ಇಲ್ಲ. ಬಾಬ್‌ ಮಾಡಿದ ಕೂದಲು, ಮೂಗಿನ ಮೇಲೇರಿದ ಕನ್ನಡಕ, ಸರಳ ಉಡುಗೆ, ಮೇಕಪ್‌ ಇಲ್ಲದ ಮುಖ- ಜನಪ್ರಿಯ ನಟಿಯಾಬ್ಬರು ಮನೆಯಲ್ಲಿ ಹೀಗಿರುತ್ತಾರೆಂಬ ಕಲ್ಪನೆಯೂ ನನಗಿರಲಿಲ್ಲ.

  ಮೂರನೇ ಬಾರಿ ಭೇಟಿಯಾದಾಗ ಮಾತಿನ ನಡುವೆ ಯಶಸ್ವಿನಿ, ತನ್ನ ತಾಯಿ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ತುಂಬಾ ಜನರಿಗೆ ಗೊತ್ತು ಎಂದರು. ನನಗೋ ಶಾಕ್‌! ರಂಗನಾಯಕಿ ಆರತಿಯವರಾ ಎಂದು ಕೇಳಿದೆ. ಹೌದು ಎಂದಾಗ ನನ್ನ ಅಜ್ಞಾನಕ್ಕೆ, ಗುರುತು ಹಿಡಿಯದ ಸಂಕಟಕ್ಕೆ ನನಗೇ ಮುಜಗರವಾಯಿತು. ಆದರೆ ಆರತಿಯವರೇ,'ಪರಿಚಯ ಸಿಗದೇ ಇದ್ದುದು ಒಳ್ಳೇದಾಯಿತು. ಮುಕ್ತವಾಗಿ ಮಾತಾಡುವುದಕ್ಕೆ ನೆರವಾಯಿತು" ಎಂದು ಸಮಾಧಾನಪಡಿಸಿದರು. ನಡುವೆ ತಿಳಿದುಬಂದ ವಿಷಯವೆಂದರೆ, ಆರತಿ ತಮ್ಮ ಜೀವಮಾನದಲ್ಲೇ ಶೂಟಿಂಗ್‌ ಹೊರತಾಗಿ ಮತ್ತೆಲ್ಲೂ ಮೇಕಪ್‌ ಹಾಕಿಕೊಂಡಿದ್ದಿಲ್ಲವಂತೆ !

  ಅದಾದ ಮೂರ್ನಾಲ್ಕು ತಿಂಗಳು ನಾನವರನ್ನು ಪದೇಪದೇ ಭೇಟಿಯಾಗುತ್ತಿದ್ದೆ. ಬಹಳಷ್ಟು ಜನರಿಗೆ ಆರತಿಯವರು ಬೆಂಗಳೂರಿನಲ್ಲಿದ್ದಾರೆ; ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದಾರೆಂದು ಗೊತ್ತೇ ಇರಲಿಲ್ಲ. ಬಳಿಕ ಆರತಿಯವರು ಎರಡು ತಿಂಗಳು ಅಮೆರಿಕಾಕ್ಕೆ ಹೋದರು. ಅಲ್ಲಿಂದ ವಾಪಸ್ಸಾದ ನಂತರ ನಟನಟಿಯರ ಮತ್ತು ಉಳಿದ ತಂತ್ರಜ್ಞರ ಆಯ್ಕೆ ಮಾಡಿದರು. ಒಂದೊಂದು ಪಾತ್ರಕ್ಕೆ ಮೂರ್ನಾಲ್ಕು ಜನ ಕಲಾವಿದರನ್ನು ಆಯ್ಕೆ ಮಾಡಿ ಸ್ಕಿೃೕನ್‌ಟೆಸ್ಟ್‌ ಮಾಡುವುದಕ್ಕೆ ಫಿಲ್ಮ್‌ ಕ್ಯಾಮೆರಾವನ್ನೇ ತರಿಸಲಾಯಿತು. ಬಹುಶಃ ಸ್ಕಿೃೕನ್‌ ಟೆಸ್ಟ್‌ಗೆ ಫಿಲ್ಮ್‌ ಕ್ಯಾಮೆರಾ ಬಳಸಿದ ನಿದರ್ಶನಗಳು ನಮ್ಮಲ್ಲಿ ತೀರಾ ಕಡಿಮೆ. ಇದಾದ ಬಳಿಕ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರನ್ನು ಕರೆದು ಪಾರ್ಟಿ ಮಾಡಿದರು. ಚಿತ್ರೀಕರಣ ಆರಂಭವಾಗುವ ಹೊತ್ತಿಗೆ ಯಾರೂ ಯಾರಿಗೆ ಅಪರಿಚಿತರಾಗಿರಬಾರದೆಂದು ನಿರ್ಮಾಪಕ, ಆರತಿ ಪತಿ ಚಂದ್ರಶೇಖರ್‌ ದೇಸಾಯಿ ಈ ಉಪಾಯ ಮಾಡಿದ್ದರು!

  ನವೆಂಬರ್‌ ನಾಲ್ಕರಿಂದ ಚಿತ್ರೀಕರಣ. ಸಿನಿಮಾದಲ್ಲಿ ಬರುವ ದೃಶ್ಯಗಳ ಕ್ರಮ ಪ್ರಕಾರದಲ್ಲೇ ಚಿತ್ರೀಕರಣ ಮಾಡೋಣವೆಂದಿದ್ದರು. ಅದರಂತೆ ಮೊದಲು ಹಳ್ಳಿಯಲ್ಲಿ. ಅಲ್ಲಿ ಶೂಟಿಂಗ್‌ ಮಾಡಬೇಕಾದರೆ ಬಿಸಿಲು ಚೆನ್ನಾಗಿರಬೇಕು. ಆದರೆ ಹವಾಮಾನ ನಾವಂದುಕೊಂಡಿದುದಕ್ಕಿಂತ ವಿರುದ್ಧವಾಗಿತ್ತು. ಮಳೆ ಮತ್ತು ದಿನವಿಡೀ ಮೋಡ ಕವಿದ ವಾತಾವರಣವಿದ್ದುದರಿಂದ ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಯಿತು.

  ಚಿತ್ರೀಕರಣದ ಮೊದಲ ದಿನ, ಮೊದಲ ದೃಶ್ಯ. ಕೃತಕ ಬೆಳಕು ಬಳಿಸಿ ಗಿಡವೊಂದರ ನೆರಳನ್ನು ಭತ್ತದ ಚೀಲದ ಮೇಲೆ ಹಾಕಿಸಿದ್ದೆ. ಅದನ್ನು ನೋಡಿದ ಆರತಿ ಮತ್ತು ಯಶಸ್ವಿನಿ ಬಂದು, ಸಂತೋಷ್‌, ಇದು ಬೆಳಗ್ಗೆ 10ಗಂಟೆಗೆ ನಡೆಯುವ ದೃಶ್ಯ. ಸೂರ್ಯನ ಬೆಳಕಿನ ಪ್ರಖರತೆ ಮತ್ತು ನೀವು ಹಾಕಿರುವ ನೆರಳು ಹೊಂದಿಕೆಯಾಗುತ್ತದೆಯಲ್ವ ಎಂದು ಕೇಳಿದರು. ಇದಾದ ಮೇಲೆ ಪ್ರತಿ ದೃಶ್ಯಕ್ಕೆ ಲೈಟಿಂಗ್‌ ಮಾಡುವ ಮುಂಚೆ ಸಮಯ ಕೇಳಿಕೊಳ್ಳುತ್ತಿದ್ದೆ. ಕೆಲವೊಮ್ಮೆ ನಾ ಕೇಳುವ ಮುಂಚೆ ಅವರೇ ಹೇಳುತ್ತಿದ್ದರು. ಎಲ್ಲಾ ಕೆಲಸದಲ್ಲೂ ಅಷ್ಟೊಂದು ನಿಖರತೆ ಬಯಸುತ್ತಿದ್ದರು!

  ಆರತಿಯವರಿಗೆ ಸಿನಿಮಾ ದೃಶ್ಯಮಾಧ್ಯಮ ಎನ್ನುವುದು ಚೆನ್ನಾಗಿ ಗೊತ್ತು. ಇಡೀ ಚಿತ್ರದಲ್ಲಿ ಮಾತು ಕಡಿಮೆ. ಮಾತು ಆಡುಮಾತಿನಂತಿತ್ತು. ಕೆಲವೆಡೆ ಒಂದೆರಡು ನಿಮಿಷದ ಶಾಟ್‌ಗಳಲ್ಲಿ ಮಾತೇ ಇಲ್ಲ. ಹಾಗಂತ ಇದು ಕಲಾತ್ಮಕ ಸಿನಿಮಾದಂತೆ ನಿಧಾನ ಗತಿಯದಲ್ಲ. ದೃಶ್ಯಗಳು ಚಕಚಕನೆ ಬಂದು ಹೋಗುತ್ತವೆ. ಇಡೀ ಸಿನಿಮಾದಲ್ಲಿ ಪಾತ್ರಧಾರಿಗಳ ಸಂಖ್ಯೆತುಂಬಾ ಕಡಿಮೆ. ಮೇಲ್ಮಧ್ಯಮ ವರ್ಗದ ಗಂಡ-ಹೆಂಡತಿ, ಕೆಲಸದ ಹುಡುಗಿ ಸುತ್ತ ಕತೆ ಸುತ್ತುತ್ತದೆ. ಈ ಲೇಖನ ಬರೆಯಲು ಒಪ್ಪುವ ಮೊದಲು ಕತೆಯ ವಿವರಗಳನ್ನು ನೀಡಬೇಡಿ ಎಂದಿದ್ದರು ಆರತಿ.

  ಸಿನಿಮಾದಲ್ಲಿ ಬದಲಾಗಿರುವ ಮತ್ತು ಬದಲಾಗುತ್ತಿರುವ ತಂತ್ರಜ್ಞಾನ ಆರತಿ ದಂಪತಿಗೆ ಚೆನ್ನಾಗಿ ಗೊತ್ತು. ಕಳೆದ 17ವರ್ಷಗಳಲ್ಲಿ ಇವರು ವಿದೇಶದಲ್ಲಿ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ನೋಡಿದ್ದಾರೆ. ಬೇರೆ ಬೇರೆ ದೇಶಗಳ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಆರತಿ ನಿರ್ದೇಶನಕ್ಕೆ ಸಂಬಂಧಪಟ್ಟಂತೆ, ಅವರ ಪತಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಧ್ಯಯನ ಮಾಡಿದ್ದಾರಂತೆ. ಯಶಸ್ವಿನಿ ಕ್ರಿಯಾತ್ಮಕ ಬರವಣಿಗೆಯಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ.

  ನಿರ್ದೇಶಕಿ ಆರತಿ ಕಲಾವಿದರ ಮೇಲೆ ಹೀಗೆ ನಟಿಸಿ ಎಂದು ಒತ್ತಾಯ ಹೇರಲಿಲ್ಲ. ಸಂಭಾಷಣೆ ಕೊಟ್ಟು ರಿಹರ್ಸಲ್‌ ಮಾಡಿಸುತ್ತಿದ್ದರು. ತಿದ್ದುಪಡಿ ತೀರಾ ಅವಶ್ಯಕ ಎಂದಾಗ ಮಾತ್ರ ಕ್ಯಾಮೆರಾದ ಮುಂದೆ ನಟಿಸಿ ತೋರಿಸುತ್ತಿದ್ದರು. ಅನವಶ್ಯಕ ಟೇಕ್‌ಗಳಿಗೆ ಆಸ್ಪದವೇ ಇರಲಿಲ್ಲ. ದಿನದ ಚಿತ್ರೀಕರಣ ಮುಗಿದ ಮೇಲೆ ಇಂದು ಮಾಡಿದ ಮತ್ತು ನಾಳೆ ಮಾಡಲಿರುವ ಕೆಲಸದ ಬಗ್ಗೆ ಅರ್ಧಗಂಟೆ ಚರ್ಚಿಸುತ್ತಿದ್ದರು.

  ಇಡೀ ಚಿತ್ರತಂಡವನ್ನು ಸಮಾನ ರೀತಿಯಲ್ಲಿ ನೋಡಿಕೊಳ್ಳಲಾಯಿತು. ನಿರ್ಮಾಪಕರಾದ ಚಂದ್ರಶೇಖರ ದೇಸಾಯಿಯವರಂತೂ ತೀರಾ ಶಿಸ್ತಿನ ಮನುಷ್ಯ. ಆರಂಭದಲ್ಲಿ ಹುಡುಗರಿಗೆ ಇವರೊಂದಿಗೆ ಒಗ್ಗಿಕೊಳ್ಳುವುದು ಕಷ್ಟವಾಯಿತು. ಬರಬರುತ್ತಾ ಹೊಂದಿಕೊಂಡಿರು. ಸಿನಿಮಾ ಚೆನ್ನಾಗಿಬರಬೇಕು, ಖರ್ಚಿನ ಬಗ್ಗೆ ಚಿಂತಿಸಬೇಡಿ ಎಂದು ನಿರ್ಮಾಪಕರು ಪದೇಪದೇ ಹೇಳುತ್ತಿದ್ದರು. ಅಷ್ಟೊಂದು ಯೋಜನಾಬದ್ಧವಾಗಿ ಮಾಡಿದ್ದರಿಂದಲೇ ಚಿತ್ರೀಕರಣದಲ್ಲಿ ಸಮಯವಾಗಲಿ, ಪರಿಕರಗಳಾಗಲಿ ಯಾವುದೂ ಅನಗತ್ಯವೇಸ್ಟ್‌ ಆಗಲಿಲ್ಲ.

  ಸಿನಿಮಾದ ಚಿತ್ರೀಕರಣ ಮುಗಿದದ್ದೇ ಗೊತ್ತಾಗಲಿಲ್ಲ. ಕೊನೆಯ ದಿನ ಹೊರಡುವಾಗ ಕೆಲವು ಹುಡುಗರು ಕೇಳಿದರು-ಮುಂದಿನ ಸಿನಿಮಾ ಯಾವಾಗ? ಎಂದು. ತಾಳಿ, ಮಿಠಾಯಿ ಮನೆಯಲ್ಲೇ ಇನ್ನೂ ಸಾಕಷ್ಟು ಕೆಲಸವಿದೆ; ಮತ್ತೆ ಯೋಚಿಸೋಣ ಎಂದರು ಆರತಿ. ಅಂದಹಾಗೆ 'ಮಿಠಾಯಿ ಮನೆ" ಗೆ ಮೊದಲು ಹಣ ನೀಡಿದವಳು ಕಿರಿ ಮಗಳು ಪ್ರೀತಿ. ಹಾಗಂತ ಆರತಿ ಪದೇ ಪದೇ ಒತ್ತಿ ಹೇಳುತ್ತಿದ್ದರು.

  (ಸ್ನೇಹಸೇತು : ವಿಜಯ ಕರ್ನಾಟಕ)

  Read more about: ಆರತಿ kannada movies

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more