»   » ಚಿಗರೆ ಕಂಗಳ ಚೆಲುವೆ ಅಂದ್ರಿತಾ ರೇ

ಚಿಗರೆ ಕಂಗಳ ಚೆಲುವೆ ಅಂದ್ರಿತಾ ರೇ

Subscribe to Filmibeat Kannada
Aindrita Ray
ಕನ್ನಡ ಚಿತ್ರರಂಗದಲ್ಲಿ ಹೊಸನಟಿಯರ ಮೆರವಣಿಗೆ ಪ್ರಾರಂಭವಾಗಿದೆ. ಕೆಲವರು ಇಂಪೋರ್ಟ್ ಆಗಿ ಎರಡನೇ ಚಿತ್ರಕ್ಕೆ ನಾಪತ್ತೆಯಾಗಿಬಿಡುತ್ತಾರೆ. ಇನ್ನು ಕೆಲವರು ಐಟಂ ಸಾಂಗಿಗಾಗಿಯೇ ಇಂಪೋರ್ಟ್ ಆಗಿ ಜೇಬು ತುಂಬಿಸಿಕೊಂಡು ನಿಕಾಲಿಯಾಗುತ್ತಾರೆ. ಕೆಲವರು ಇಂಪೋರ್ಟ್ ಆಗಿ ಇಲ್ಲೇ ಸೆಟಲ್ ಆಗಿಬುಡುತ್ತಾರೆ. ಇನ್ನಿತರರು ಮೆರವಣಿಗೆಯಲ್ಲಿ ಬಂದು ಹಾಗೆ ಮಂಗಮಾಯವಾಗುತ್ತಾರೆ. ಹಾಗೆ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಆಮದಾಗಿರುವ ಹೊಸನಟಿ ಅಂದ್ರಿತಾ ರೇ.

ಫಳಫಳಿಸುವ ಜಿಂಕೆ ಕಂಗಳಲ್ಲಿ ಅಪೂರ್ವ ಹೊಳಪು. ಅದೇ ಇವಳ ಆಸ್ತಿ. ಪಕ್ಕದಿಂದ ನೋಡಿದರೆ ಅರೆರೆ ಇವಳು ಮಾನ್ಯಳ ತಂಗಿಯಾ ಅನ್ನುವಹಾಗಿದ್ದಾಳೆ. ಕಣ್ಣಲ್ಲಿ ಕಣ್ಣಟ್ಟು ನೋಡಿದರೆ ರೇಖಾಗಿಂತಲೂ ಚೆಲುವೆ. ಟೂತ್ ಪೇಸ್ಟ್ ಜಾಹಿರಾತಿಗೆ ಹೇಳಿ ಮಾಡಿಸಿದಂಥ ದಾಳಿಂಬೆ ಸಾಲುಗಳು. ನಟಿಯರ ಮೆರವಣಿಗೆಯಲ್ಲಿ ಎದ್ದುಕಾಣುವ ಈ ನವನಟಿ ಸದ್ಯಕ್ಕೆ 'ಮೆರವಣಿಗೆ' ಚಿತ್ರದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣ ಮಾಡುತ್ತಿದ್ದಾರೆ. ಈಕೆ ಮುಖವೇ ಮೆರವಣಿಗೆ ಚಿತ್ರಕಥೆಗೆ ಸ್ಪೂರ್ತಿ ಎನ್ನುವ ಜನಾರ್ಧನ ಮಹರ್ಷಿಯ ಸ್ಟೇಟ್ಮೆಂಟೇ ಅಂದ್ರಿತಾ ಚೆಲುವಿಗೆ ಸಿಕ್ಕ ಕಾಂಪ್ಲಿಮಂಟು.

ಡೈನಮಿಕ್ ಹೀರೋ ದೇವರಾಜ್ ಅವರ ಪುತ್ರ ಪ್ರಜ್ವಲ್  'ಮೆರವಣಿಗೆ'ಯ ನಾಯಕ. ಈ ಚಿತ್ರದ ವಿಶೇಷವೆಂದರೆ ನಾಯಕ, ನಾಯಕಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ 50 ಕಲಾವಿದರೂ ನೇತ್ರದಾನವನ್ನು  ಮಹಾದಾನ ಎಂದು ತಿಳಿದು ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿರುವುದು.

ಅಂದ್ರಿತಾ ರೇ ಎಂಬ ಹೆಸರಿನಲ್ಲೇ ಏನೋ ಒಂದು ರೀತಿ ಆಕರ್ಷಣೆ ಇದೆ. ಇನ್ನು ಈಕೆಯ ಮುದ್ದು ಮುಖದ ಬಗ್ಗೆ  ಹೇಳಬೇಕೆಂದರೆ, ಟಿವಿಎಸ್ ಸ್ಕೂಟಿ, ಕ್ಯಾಡ್‌ಬರಿ ಚಾಕೋಲೇಟ್, ಪ್ಯಾರಾಚೂಟ್ ಹೇರ್ ಆಯಿಲ್ ಜಾಹಿರಾತಿಗಳಲ್ಲಿ  ನೋಡೇ ಇರುತ್ತೀರ. ಈಕೆ ಮೂಲತಃ ಬಂಗಾಳಿ. ಸದ್ಯ ಈಕೆ  ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ.

ಪ್ರಜ್ವಲ್‌ರ  ಪ್ರಥಮ ಚಿತ್ರ  'ಸಿಕ್ಸರ್' ಬಾಕ್ಸಾಫೀಸಿನಲ್ಲಿ ಗೆಲ್ಲಲಿಲ್ಲ. ಪ್ರಸ್ತುತ  'ಗಂಗೇ ಬಾರೆ ತುಂಗೆ ಬಾರೆ' ಚಿತ್ರದಲ್ಲಿ ನಟಿಸುತ್ತಿರುವ ಪ್ರಜ್ವಲ್ ಸಣ್ಣ ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಅದರ ಚಿತ್ರೀಕರಣ ಮುಗಿದ ನಂತರ ಪ್ರಜ್ವಲ್‌ರ 'ಮೆರವಣಿಗೆ' ಹೊರಡಲಿದೆ. ಆಕಾಶ್, ಅರಸುನಂತಹ ಹಿಟ್ ಚಿತ್ರಗಳನ್ನು ಕೊಟ್ಟ ಮಹೇಶ್ ಬಾಬು 'ಮೆರವಣಿಗೆ'ಯ ನಿರ್ದೇಶಕ. 

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada