»   »  ದೇವರುಗಳ ನಾಡಲ್ಲಿ ನಿರ್ದೇಶಕ ಸುರೇಶ್

ದೇವರುಗಳ ನಾಡಲ್ಲಿ ನಿರ್ದೇಶಕ ಸುರೇಶ್

Subscribe to Filmibeat Kannada
Actor, Director B Suresh
ಏನೇ ಮಾಡಿದರೂ ಭಿನ್ನವಾಗಿರಬೇಕು. ಮಾಡುವ ಕೆಲಸ ಖುಷಿ ಕೊಡುವಂತಿರಬೇಕು ಅನ್ನೋದು ಬಿ.ಸುರೇಶ್ ನಂಬಿಕೆ. ಆ ಕಾರಣದಿಂದಲೇ 'ಸ್ಲಂ ಬಾಲ' ಚಿತ್ರದ ನಂತರ ಅನೇಕ ಪಾತ್ರಗಳು ಸಾಲುಗಟ್ಟಿದರೂ ಸುರೇಶ್ ಹುಡುಕಿಕೊಂಡು ಬಂದ ಅವಕಾಶಗಳನ್ನು ಒಲ್ಲೆ ಎಂದರು.

ಮಾಡುವ ಪಾತ್ರ ನನ್ನೊಳಗಿನ ನಟನಿಗೆ ಸವಾಲೆಸೆಯುವಂತಿರಬೇಕು. ಲೆಕ್ಕಕ್ಕೆ ಅವಕಾಶಗಳನ್ನು ಒಪ್ಪಿಕೊಂಡರೇನು ಫಲ? ಸಾಧಾರಣ ಪಾತ್ರ ಮಾಡುವ ಬದಲು ನಾನು ಮಾಡಬಹುದಾದ ಒಳ್ಳೆಯ ಕೆಲಸಗಳು ಸಾಕಷ್ಟಿವೆ ಎನ್ನೋದು ಸುರೇಶ್ ಅನಿಸಿಕೆ.

ಸುರೇಶ್ ಮಾತಿಗೆ ಸಿಕ್ಕಿದ್ದು 'ಪೆರೋಲ್' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ. ರಾಮೋಹಳ್ಳಿ ಸಮೀಪದಲ್ಲಿ ಎಲ್.ಎನ್.ಆರ್. ಕಲ್ಯಾಣಮಂಟಪದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಮದುವೆಯ ಶೂಟಿಂಗ್. ಪೊದೆ ಹುಬ್ಬು, ಕೆದರಿದ ಕೂದಲು, ಮಾಸಲು ಗಡ್ಡ, ಬಿಳಿಬಟ್ಟೆ-ಹಾಫ್ ಕೋಟ್‌ನಲ್ಲಿ ವಿಚಿತ್ರವಾಗಿ ಕಾಣುತ್ತಿದ್ದ, ನೋಡುಗರಲ್ಲಿ ಭಯ ಹುಟ್ಟಿಸುತ್ತಿದ್ದ ಸುರೇಶ್ ಮಾತಿಗೆ ನಿಧಾನವಾಗಿ ತೆರೆದುಕೊಂಡರು.

ಪೆರೋಲ್‌ನಲ್ಲಿ ಸುರೇಶ್ ಅವರದ್ದು ಮೇಷ್ಟ್ರು ಪಾತ್ರವಂತೆ. ದುಷ್ಟರಿಂದ ಅನ್ಯಾಯಕ್ಕೊಳಗಾಗಿ, ಆನಂತರ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಮೇಷ್ಟ್ರ ಪಾತ್ರ. ಕಥೆ ಹೆಚ್ಚು ಕೆದಕಬೇಡಿ ಎಂದರು ಸುರೇಶ್. ನಿರ್ದೇಶಕ ಶೇಖರ್ ಅಲ್ಲೇ ಠಳಾಯಿಸುತ್ತಿದ್ದರು.

ಪೆರೋಲ್ ಕಥೆ ಹೇಳದೆ ಹೋದರೆ ಬೇಡ; ನಿಮ್ಮ ಸ್ವಂತ ನಿರ್ಮಾಣದ ಚಿತ್ರದ ಕಥೆ ಏನಾಯಿತು? ಎನ್ನುವ ಪ್ರಶ್ನೆಗೆ ಸುರೇಶ್ ಗಡ್ಡದ ಮರೆಯಲ್ಲೇ ನಕ್ಕರು. ನಗುತ್ತಲೇ ಗುಟ್ಟು ಬಿಟ್ಟುಕೊಟ್ಟರು.

ಸುರೇಶ್ ನಿರ್ದೇಶನದ ಚಿತ್ರಕ್ಕೆ ಭೂಮಿಕೆ ರೆಡಿಯಾಗಿದೆಯಂತೆ. 'ದೇವರುಗಳ ನಾಡಲ್ಲಿ' ಎನ್ನೋದು ಚಿತ್ರದ ಹೆಸರು. 'ಚಿತ್ರಕಥೆ ಸಿದ್ಧಪಡಿಸಿಕೊಂಡಿದ್ದೇನೆ. ಕಾರವಾರದ ಶಾಲೆಯೊಂದರಲ್ಲಿ ನಡೆದ ಸತ್ಯಘಟನೆಯನ್ನು ಆಧರಿಸಿದ ಚಿತ್ರವಿದು' ಎಂದರು ಸುರೇಶ್. ಉಳಿದುದು ಸದ್ಯಕ್ಕೆ ಸಸ್ಪೆನ್ಸ್.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada