twitter
    For Quick Alerts
    ALLOW NOTIFICATIONS  
    For Daily Alerts

    ಕಿನ್ನರಬಾಲೆಯ ಕರೆತಂದರು ವಿಶ್ವನಾಥ್

    By *ಜಯಂತಿ
    |

    ಅರಗಿಣಿ, ಶ್ರೀಗಂಧ, ಪಂಚಮವೇದಗಳಂಥ ಗಂಭೀರ- ಪ್ರಬುದ್ಧ ಪ್ರೇಮಕಥೆಗಳ ಚಿತ್ರಮಾಲೆಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಮತ್ತೊಂದು ಚಿತ್ರದೊಂದಿಗೆ ಗಾಂಧಿನಗರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಚಿತ್ರದ ಹೆಸರು ಕಿನ್ನರಬಾಲೆ, ಮಕ್ಕಳ ಚಿತ್ರ ಇದೆನ್ನುವುದು ವಿಶೇಷ.

    ಕಿನ್ನರಬಾಲೆ ಇಬ್ಬರು ಪುಟಾಣಿಗಳ ಕಥೆ. ನೂರಿ ಒಂದು ಸಮುದ್ರ ತೀರದ ಮೀನುಗಾರಿಕಾ ಪ್ರದೇಶದ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಹನ್ನೊಂದು ವರ್ಷ ವಯಸ್ಸಿನ ಹುಡುಗಿ. ಅವಳ ಅಮ್ಮ ಮುಮ್ತಾಜ್ ವಿಧವೆ. ಬಹಳಷ್ಟು ಸಮಯ ಮನಸ್ಸು ಬಂದಂತೆ ಮಗಳನ್ನು ಒಬ್ಬಳನ್ನೇ ಬಿಟ್ಟು ಯಾವಯಾವುದೋ ಊರುಗಳಿಗೆ ಹದಿನೈದು ದಿನ- ತಿಂಗಳು ಹೀಗೆ ಹೋಗುತ್ತಿರುತ್ತಾಳೆ.

    ಅಂಥ ಸಮಯಗಳಲ್ಲಿ ಮನೆಯಲ್ಲಿ ಏನಾದರೂ ಇದ್ದರೆ ಇತ್ತು ಇಲ್ಲದಿದ್ದರೆ ಇಲ್ಲ. ಇದ್ದಾಗ ತಿಂದುಕೊಂಡು ಕಾಲ ಹಾಕುವ ನೂರಿ ಏನೂ ಇಲ್ಲದಾಗ ಬೇಡುತ್ತಾ, ಕಪ್ಪೆ ಚಿಪ್ಪುಗಳನ್ನು ಆಯ್ದು ಮಾರುತ್ತಾ, ಮೀನಿನ ಧಕ್ಕೆಗಳಲ್ಲಿ ಸಿಕ್ಕ ಮೀನುಗಳನ್ನು ತೊಳೆದು ಮಾರಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಾ ಜೀವನ ಸಾಗಿಸುತ್ತಿರುತ್ತಾಳೆ.

    ಒಮ್ಮೆ ಮಾನಸಿಕ ಅಸ್ವಸ್ಥ ಮೂಕ ಹುಡುಗಿಯೊಬ್ಬಳು ನೂರಿಗೆ ಸಿಗುತ್ತಾಳೆ. ಆ ಹುಡುಗಿ ಮುದ್ದಾಗಿರುವುದರಿಂದ ಕೆಟ್ಟ ಕಣ್ಣುಗಳ ಮನುಷ್ಯರಿಂದ ಅವಳನ್ನು ರಕ್ಷಿಸಿ ಅವರ ಕಡೆಯವರ ಬಳಿ ಸೇರಿಸಲು ನೂರಿ ತನಗೇ ಅರಿವಿಲ್ಲದಂತೆ ಆ ಹುಡುಗಿಯನ್ನು ತಾಯಿಯಂತೆ ಕಾಪಾಡತೊಡಗುತ್ತಾಳೆ. ಈ ಮಧ್ಯದಲ್ಲಿ ಅನೇಕ ತೊಂದರೆಗೊಳಗಾಗಿ ಹೆಣ್ಣುಗಳನ್ನು ಮಾರಾಟ ಮಾಡುವ ಜಾಲದಿಂದ ಮೂಕ ಹುಡುಗಿಯನ್ನು ಬಚಾಯಿಸುತ್ತಾ ಬೇರೆ ಬೇರೆ ಕಡೆ ಕರೆದೊಯ್ಯುತ್ತಾಳೆ.

    ಊರಿಂದೂರಿಗೆ ಅಲೆಯುತ್ತಾ ಬೆಂಗಳೂರು ತಲುಪಿದ ಹುಡುಗಿಯರಿಬ್ಬರೂ ತಮಗೆ ಸಂಪೂರ್ಣವಾಗಿ ಅಪರಿಚಿತವಾದ ದೊಡ್ಡ ನಗರದಲ್ಲಿ ತಿನ್ನಲು ಇಲ್ಲದೇ, ಇರಲು ಸ್ಥಳವಿಲ್ಲದೇ ಕಷ್ಟ ಅನುಭವಿಸುತ್ತಾರೆ. ಕಡೆಗೆ ಮೂಕ ಹುಡುಗಿಯ ಮೂಲದ ಸುಳಿವು ಸಿಕ್ಕಿ ಅವಳ ಊರನ್ನು ಹುಡುಕಿಕೊಂಡು ಬಸ್ಸಿನಲ್ಲಿ ಹೋಗುತ್ತಿರುವಾಗ ಹುಡುಗಿ ಹಳೆಯ ನೆನಪಿನಿಂದ ತನ್ನ ಊರು ಮನೆಯ ಗುರುತು ಹಿಡಿದು ತನ್ನ ಮನೆಯ ಕಡೆಗೆ ಓಡುತ್ತಾಳೆ.

    ಮನೆ ಕೆಲಸದವನು ನೂರಿಯನ್ನು ಮಕ್ಕಳ ಕಳ್ಳಿಯೆಂದು ತಪ್ಪು ತಿಳಿದು ಒಂದು ಕೋಣೆಯಲ್ಲಿ ಕೂಡಿ ಹಾಕುತ್ತಾನೆ ಹಾಗು ಹುಡುಗಿಯ ಪತ್ತೆಗಾಗಿ ಹೋಗಿದ್ದ ಅವಳ ತಂದೆ ತಾಯಿಯರಿಗೆ ಪೋನ್‌ಮಾಡಿ ತಿಳಿಸುತ್ತಾನೆ. ಹುಡುಗಿಯ ಮನೆಯವರು ನೂರಿಯನ್ನು ತಪ್ಪಾಗಿ ತಿಳಿದು ಶಿಕ್ಷಿಸಲು ಸಿದ್ಧರಾಗುವರು.

    ಇತರರಿಗೆ ಸಹಾಯ ಮಾಡಲು ಹಣ, ದೈಹಿಕಬಲ, ಸಮಯ, ಜನಬಲ, ಚಿಕ್ಕವರು ದೊಡ್ಡವರು ಯಾವುದೂ ಬೇಕಾಗಿಲ್ಲ. ಸಹಾಯ ಮಾಡುವ ಮನಸ್ಸೊಂದಿದ್ದರೆ ಸಾಕು ಎಂಥ ಬಡವರಿದ್ದರೂ, ವಯಸ್ಸಿನಲ್ಲಿ ಚಿಕ್ಕವರಾದರೂ, ತನಗೇ ತಿನ್ನಲು ಇಲ್ಲದಿದ್ದರೂ ಇತರರಿಗೆ ನೆರವಾಗಬಹುದು ಎನ್ನುವುದನ್ನು ತನ್ನ ವಿಶಾಲವಾದ ಮನಸ್ಸಿನಿಂದ ನೂರಿ ಮೂಕ ಹುಡುಗಿಗೆ ಸಹಾಯ ಮಾಡುವ ಮೂಲಕ ತೋರಿಸಿಕೊಡುತ್ತಾಳೆ.

    ಚಿತ್ರದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ಕಿರುಕುಳವನ್ನು ಸಮರ್ಥವಾಗಿ ಹೇಗೆ ನಿವಾರಿಸಿಕೊಳ್ಳಬಹುದೆನ್ನುವ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ ವಿಶ್ವನಾಥ್ ತಮ್ಮ ಚಿತ್ರದ ಬಗ್ಗೆ ತಿಳಿಸಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಈಚಿನ ವರ್ಷಗಳಲ್ಲಿ ಮಕ್ಕಳ ಚಿತ್ರ ಎನ್ನುವ ಪ್ರಮಾಣಪತ್ರ ನೀಡುವ ಬಗ್ಗೆ ಜಿಗುಟಿನ ಧೋರಣೆ ಅನುಸರಿಸಿದ್ದರು. ಅವರು ತಮ್ಮ ಅಧಿಕಾರವಧಿಯ ಕೊನೆಯ ಭಾಗದಲ್ಲಿ ಕಿನ್ನರಬಾಲೆ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಯಾವುದೇ ತಕರಾರಿಲ್ಲದೆ ಮಕ್ಕಳ ಚಿತ್ರ ಎನ್ನುವ ಪ್ರಮಾಣಪತ್ರ ನೀಡಿದ್ದಾರೆ.

    ಕಿನ್ನರಬಾಲೆಯನ್ನು ಪನೋರಮಾಕ್ಕೆ ಹಾಗೂ ಹೈದರಾಬಾದ್‌ನ ಮಕ್ಕಳ ಚಿತ್ರೋತ್ಸವಕ್ಕೆ ಕಳುಹಿಸಿರುವ ವಿಶ್ವನಾಥ್ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಚಿತ್ರವನ್ನು ಪ್ರೇಕ್ಷಕರಿಗೆ ಚಿತ್ರಮಂದಿರಗಳಲ್ಲಿ ತೋರಿಸುವ ಆಸೆ ಅವರಿಗಿದೆ. ಆದರೆ ಮಕ್ಕಳ ಚಿತ್ರವೊಂದನ್ನು, ಅದೂ ಸ್ಟಾರ್‌ಗಳಿಲ್ಲದ ಚಿತ್ರವೊಂದನ್ನು ಬಿಡುಗಡೆ ಮಾಡುವುದು ತಮಾಷೆಯ ಮಾತಾ?

    Wednesday, September 23, 2009, 17:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X