»   » ಕನ್ನಡ ಚಿತ್ರರಂಗಕ್ಕೆ ಅಘೋಷಿತ ರಜೆ

ಕನ್ನಡ ಚಿತ್ರರಂಗಕ್ಕೆ ಅಘೋಷಿತ ರಜೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಅಘೋಷಿತ ರಜೆ ಘೋಷಿಸಿಕೊಂಡಿದೆ! ಕನ್ನಡ ಚಿತ್ರರಂಗದ ಬಹುತೇಕ ತಾರೆಗಳು ಬಿಬಿಎಂಪಿ ಚುನಾವಣಾ ಪ್ರಚಾರದಲ್ಲಿ ಮುಳುಗಿರುವುದೆ ಈ ರಜೆಗೆ ಕಾರಣವಾಗಿದೆ. ಇನ್ನು ಕೆಲವು ತಾರೆಗಳು ಉತ್ತರ ಕರ್ನಾಟಕದ ಕಲಘಟಗಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೋದವರು ಇನ್ನು ಹಿಂತಿರುಗಿಲ್ಲ.

ಚಿತ್ರೀಕರಣಕ್ಕೆ ಚಕ್ಕರ್ ಹಾಕಿರುವ ತಾರೆಗಳು ಸದ್ಯಕ್ಕೆ ವಿವಿಧ ಪಕ್ಷಗಳ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ರೋಡಿಗಿಳಿದು ಮತಯಾಚಿಸುತ್ತಿರುವ ದೃಶ್ಯ ಬೆಂಗಳೂರು ರಸ್ತೆಗಳಲ್ಲಿ ಸಾಮಾನ್ಯವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಬಿಜೆಪಿ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ.

ಬಿಜೆಪಿ ಪರವಾಗಿ ನಟಿ ಶ್ರುತಿ, ಮುಖ್ಯಮಂತ್ರಿ ಚಂದ್ರು ಮತ್ತು ನವರಸ ನಾಯಕ ಜಗ್ಗೇಶ್ ಸಹ ಪ್ರಚಾರ ಕಾರ್ಯದಲ್ಲಿ ಮುಳುಗಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಸಹ ಬಿಜೆಪಿ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬಿಬಿಎಂಪಿ ಚುನಾವಣೆ ಮುಗಿಯುವವರೆಗೂ ಇವರೆಲ್ಲಾ ಬಣ್ಣ ಹಚ್ಚುವ ಲಕ್ಷಣಗಳು ಕಾಣುತ್ತಿಲ್ಲ.

ಬಿಜೆಪಿಗಿಂತ ತಾನೇನು ಕಮ್ಮಿ ಎಂಬಂತೆ ಕಾಂಗ್ರೆಸ್ ಪಕ್ಷ ಸಹ ತಾರೆಗಳ ಹಿಂದೆ ಬಿದ್ದಿದೆ. ಹಿರಿಯ ನಟಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಉಮಾಶ್ರೀ ಅವರನ್ನು ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷ ರೋಡಿಗಿಳಿಸಿದೆ. ದಕ್ಷಿಣ ಬೆಂಗಳೂರಿನಲ್ಲಿ ನಟ ಅಂಬರೀಶ್ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ, ರಾಜಕಾರಣಿ ಬಿ ಸಿ ಪಾಟೀಲ್ ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada