»   » ಸುಗ್ರೀವನ ಜೊತೆಗೆ ಜುಗಾರಿ, ವರ್ಷಧಾರೆ

ಸುಗ್ರೀವನ ಜೊತೆಗೆ ಜುಗಾರಿ, ವರ್ಷಧಾರೆ

Posted By:
Subscribe to Filmibeat Kannada

ಕೇವಲ 18 ಗಂಟೆಗಳಲ್ಲಿ ಚಿತ್ರೀಕರಣಗೊಂಡಿರುವ ಕಮರ್ಷಿಯಲ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಸುಗ್ರೀವ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಳಿಗ್ಗೆ 6 ಗಂಟೆಗೆ ಪ್ರಾರಂಭಿಸಿ ರಾತ್ರಿ 11.55ರವರೆಗೆ ನಡೆದ ಚಿತ್ರೀಕರಣದಲ್ಲಿ ಹಾಡು, ಸಾಹಸ ದೃಶ್ಯಗಳು ಹಾಗೂ ಸಾಂಸಾರಿಕ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಗುರುಕಿರಣ್‌ರ ಸಂಗೀತ ಸಂಯೋಜನೆ, ಪ್ರಮೋದ್ ಚಕ್ರವರ್ತಿ ಮತ್ತು ರಾಮ್‌ನಾರಾಯಣ ಚಿತ್ರಕಥೆ, ತಿರುಪತಿರೆಡ್ಡಿ ಸಂಕಲನ, ಪಳನಿರಾಜ್ ಸಾಹಸ ಇದೆ. ಪ್ರಶಾಂತ್ ಮಾಂಬಳ್ಳಿ ಪ್ರಧಾನ ನಿದೇಶನವಿದ್ದು, ಶೇಖರ್ ಚಂದ್ರ, ವೀನಸ್ ಮೂರ್ತಿ, ಕೃಷ್ಣ ಮೊದಲಾದವರು ಛಾಯಾಗ್ರಹಣ ಕೆಲಸ ಮಾಡಿದ್ದಾರೆ.

ನಾಗರಾಜ ನಿರ್ಮಿಸಿರುವ 'ಸುಗ್ರೀವ' ಚಿತ್ರದಲ್ಲಿ ಶಿವರಾಜ್‌ಕುಮಾರ್, ಯಜ್ಞ ಶೆಟ್ಟಿ, ವಿಜಯ ಸಾರಥಿ, ನೀನಾಸಂ ಅಶ್ವತ್ಥ್, ಗುರುರಾಜ ಹೊಸಕೋಟೆ, ಮಂಜುಭಾಷಿಣಿ, ಪಟ್ರೆ ಪವಿತ್ರ ಮುಂತಾದವರು ತಾರಾಗಣದಲ್ಲಿದ್ದಾರೆ.

ಜುಗಾರಿ
ಸಿ.ಎಂ ಅಸೋಸಿಯೆಟ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಜುಗಾರಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ನಿರ್ಮಾಪಕರು ಜಿ.ಆರ್.ರಮೇಶ್. ಅವರೇ ಚಿತ್ರದ ಕಥೆಗಾರರೂ ಕೂಡ. ಖ್ಯಾತ ನಟ ನರಸಿಂಹರಾಜು ಅವರ ಮೊಮ್ಮಕ್ಕಳು ಈ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾಗುತ್ತಿದ್ದಾರೆ. ಅವರ ಮೊಮ್ಮಗ ಎಸ್.ಡಿ.ಅರವಿಂದ್ ಈ ಚಿತ್ರದ ನಿರ್ದೇಶಕರಾದರೆ, ಇವರ ಸಹೋದರ ಅವಿನಾಶ್ ದಿವಾಕರ್ 'ಜುಗಾರಿಯಲ್ಲಿ ನಾಯಕನಾಗಿ ನಟಿಸಿದ್ದಾರೆ.

ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅರ್ಜುನ್ ಅವರ ಸಂಗೀತವಿದೆ. ಅನಂತ್ ಅರಸ್ ಛಾಯಾಗ್ರಹಣ, ಶ್ರೀ ಸಂಕಲನ, ರವಿವರ್ಮ ಸಾಹಸ, ನಾರಾಯಣಸ್ವಾಮಿ, ಕೆ.ಕಲ್ಯಾಣ್ ಹಾಗೂ ಎಸ್.ಡಿ.ಅರವಿಂದ್ ಗೀತರಚನೆಯಿರುವ 'ಜುಗಾರಿ'ಯ ತಾರಾಬಳಗದಲ್ಲಿ ಅವಿನಾಶ್ ದಿವಾಕರ್, ಹರ್ಷಿಕಾ ಪೂಣಚ್ಛ, ಅವಿನಾಶ್, ಶರತ್ ಲೋಹಿತಾಶ್ವಾ, ಬಿ.ಸುರೇಶ್, ಧರ್ಮ, ಮೋಹನ್ ಜುನೇಜಾ, ಗಿರಿಜಾ ಲೋಕೇಶ್, ಅಚ್ಯುತ್‌ಕುಮಾರ್ ಮುಂತಾದವರಿದ್ದಾರೆ.

ವರ್ಷಧಾರೆ
ಎಸ್.ಎಸ್.ಆರ್ ಪ್ರೊಡಕ್ಷನ್ಸ್ ಅರ್ಪಿಸುವ, ಆಕ್ಟಿವ್ ಫಿಲಂ ಮೇಕರ್ಸ್ ಅವರ 'ವರ್ಷಧಾರೆ' ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ವೇಮಗಲ್ ಜಗನ್ನಾಥರಾವ್ ನಿರ್ದೇಶಿಸಿರುವ ಈ ಚಿತ್ರವನ್ನು ಪಿ.ರಾಮಸ್ವಾಮಿ ಹಾಗೂ ಸಂಧ್ಯಾವೆಂಕಟೇಶ್ ನಿರ್ಮಿಸಿದ್ದಾರೆ. ರಿಪನ್ಸ್ ಸಂಸ್ಥೆ ಬಿಡುಗಡೆಯ ಉಸ್ತುವಾರಿ ಹೊತ್ತಿದೆ.

ಅಜನೀಶ್ ಲೋಕನಾಥ್ ಸಂಗೀತವಿರುವ ಈ ಚಿತ್ರಕ್ಕೆ ದೇವರಾಜ್ ಅವರ ಛಾಯಾಗ್ರಹಣವಿದೆ. ವೆಂಕಟೇಶ್ ಅವರೊಡಗೂಡಿ 'ವರ್ಷಧಾರೆ'ಗೆ ಕಥೆ ಬರೆದಿರುವ ನಿರ್ದೇಶಕರು ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ರಚಿಸಿದ್ದಾರೆ. ಮಿಥುನ್ ತೇಜಸ್ವಿ, ಪಾಯಲ್‌ಘೋಶ್, ಸೂರಜ್, ಸಂಗೀತಾಶೆಟ್ಟಿ, ರಾಂಪ್ರಸಾದ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada