»   » ಈ ವನಮಾಲಿಗೆ ಶಿವಣ್ಣನೂ ಒಂದೇ ಪ್ರಧಾನಿನೂ ಒಂದೇ

ಈ ವನಮಾಲಿಗೆ ಶಿವಣ್ಣನೂ ಒಂದೇ ಪ್ರಧಾನಿನೂ ಒಂದೇ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿ ಆಗಾಗ ಈ ರೀತಿಯ ವಿಚಿತ್ರ ಘಟನೆಗಳು ಗಮನ ಸೆಳೆಯುತ್ತಿರುತ್ತವೆ. ಮೊನ್ನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೂ ಇದೇ ರೀತಿಯ ಒಂದು ವಿಚಿತ್ರ ಅನುಭವ ಬೆಂಗಳೂರು ಅರಮನೆ ಮೈದಾನದಲ್ಲಿ ಎದುರಾಯಿತು. ಮೈಲಾರಿ ಚಿತ್ರೀಕರಣದ ವೇಳೆ ನಡೆದ ಘಟನೆಯಿದು.

ಒಂದು ಕಡೆ ಅರಮನೆ ಮೈದಾನದಲ್ಲಿ ಮೈಲಾರಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಕಲಾವಿದರು, ತಂತ್ರಜ್ಞರು ಎಲ್ಲ ಸೇರಿ 500ಕ್ಕೂ ಹೆಚ್ಚು ಮಂದಿ ಅಲ್ಲಿ ಜಮಾಯಿಸಿದ್ದರು. ಇದ್ಯಾವುದರ ಪರಿವೇ ಇಲ್ಲದೆ ಅಲ್ಲೊಬ್ಬ ವೃದ್ಧ ತಾನಾಯಿತು ತನ್ನ ಕೆಲಸವಾಯಿತು ಎಂದು ಮೈಮರೆತಿದ್ದ. ಅರಮನೆ ಮೈದಾನದ ಹುಲ್ಲು ಹಾಸಿಗೆ ನೀರುಣಿಸುವುದು ಅದನ್ನು ಒಪ್ಪ ಓರಣವಾಗಿ ನೋಡಿಕೊಳ್ಳುವುದು ಆತನ ಕೆಲಸ.

ಚಿತ್ರೀಕರಣ ಮುಗಿದಿದ್ದೇ ತಡ ಶಿವರಾಜ್ ಕುಮಾರ್ ಹುಲ್ಲು ಹಾಸನ್ನು ಹಾದು ಆ ಕಡೆಗೆ ಇದ್ದ ಮರದ ಕೆಳಗೆ ವಿರಮಿಸಲು ತೆರಳಿದರು. ಆಗಲೆ ನೋಡಿ ಶಿವಣ್ಣನಿಗೆ ಈ ವೃದ್ಧ ಎದುರಾಗಿದ್ದು. ಬಿಲ್ ಕುಲ್ ಅಂದ್ರೆ ಅವರನ್ನು ಹುಲ್ಲು ಹಾಸು ತುಳಿಯಲು ಬಿಡಲಿಲ್ಲ. ಅಲ್ಲಿ ಪಾದಚಾರಿಗಳಿಗೆ ಅಂಥ ದಾರಿ ಮಾಡಿದ್ದಾರೆ. ಅಲ್ಲಿಂದ ಹೋಗಿ ಎಂದು ಗದರಿಸಿ ಹೇಳಿದ.

ಅರೆ ಇರಣ್ಣ ಒಂದ್ನಿಮಿಷ ಒಸಿ ಹೊರಟೋಗ್ತೀನಿ ಎಂದು ಶಿವಣ್ಣ ಹೇಳಿದರು ಪ್ರಯೋಜನವಾಗಲಿಲ್ಲ. "ತುಳೀ ಬ್ಯಾಡಿ ತುಳಿ ಬ್ಯಾಡಿ ಅಂತ ನಿಮಗೆಲ್ಲಾ ಹೇಳಿ ಸಾಕಾಗಿದೆ. ಅಲ್ಲಿ ದಾರಿ ಕಾಣಾಕಿಲ್ವಾ. ಹಂಗಾಸಿ ಹೋಗಿ " ಎಂದು ಆ ವನಪಾಲಕ ಆಜ್ಞಾಪಿಸಿದ್ದ. ಅವಾಕ್ಕಾದ ಶಿವಣ್ಣ ತನ್ನ ತಪ್ಪಿನ ಅರಿವಾಗಿ ಪಾದಚಾರಿ ಮಾರ್ಗದಲ್ಲಿ ಹೋಗಲು ನಿರ್ಧರಿಸಿದರು.

ಅಷ್ಟರಲ್ಲಿ ಚಿತ್ರತಂಡವರು ಬಂದು ವನಪಾಲಕನೊಂದಿಗೆ ಜಗಳಕ್ಕೆ ನಿಂತರು. ಶಿವಣ್ಣ ಅವರೆಲ್ಲರನ್ನೂ ತಡೆದು ಅವರ ಕೆಲಸ ಅವರು ಮಾಡುತ್ತಿದ್ದಾರೆ. ಅವರನ್ನು ಗೌರವಿಸೋಣ ಎಂದು ಬುದ್ಧಿ ಹೇಳಿ ಅಲ್ಲಿಂದ ಸಾಗಹಾಕಿದರು. ವನಮಾಲಿ ತನ್ನ ಪಾಡಿಗೆ ತಾನು ಕೆಲಸದಲ್ಲಿ ಮಗ್ನನಾಗಿದ್ದ.

"ರಾಮನಗರದ ಈ ವೃದ್ಧ ಸುಮಾರು ದಿನಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ತುಂಬ ಮುಗ್ಧ ಸ್ವಭಾವ ಅವರದು. ಯಾರೇ ಬರಲಿ ಹುಲ್ಲು ಹಾಸು ತುಳಿಯಲು ಬಿಡುವುದಿಲ್ಲ. ಶಿವರಾಜ್ ಕುಮಾರ್ ಯಾರು ಎಂಬುದು ಈತನಿಗೆ ಗೊತ್ತಿಲ್ಲ" ಎಂದು ಚಿತ್ರತಂಡದ ಹಿರಿಕರೊಬ್ಬರು ಬೆಂಗಳೂರು ಮಿರರ್ ಜೊತೆ ಪ್ರತಿಕ್ರಿಯಿಸಿದ್ದಾರೆ.

ಮೈಲಾರಿ ಚಿತ್ರಕ್ಕಾಗಿ ಶಿವಣ್ಣ ಖೈದಿಯ ಗೆಟಪ್ ನಲ್ಲಿದ್ದರು. ಬಳಿಕ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್ ಕುಮಾರ್, ಒಂದು ವೇಳೆ ಪ್ರಧಾನಿ ಬಂದರು ಇವರು ಹುಲ್ಲು ಹಾಸನ್ನು ತುಳಿಯಲು ಬಿಡುವುದಿಲ್ಲ ಎಂದಿದ್ದಾರೆ. ಒಮ್ಮೆ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಅಮಿತಾಬ್ ಗೂ ಈ ರೀತಿಯ ಒಂದು ಅನುಭವ ಎದುರಾಯಿತು. ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬ ಇಲ್ಲಿ ಅಮಿತಾಬ್ ಬಚ್ಚನ್ ಅಂದ್ರೆ ಯಾರು? ಎಂದು ಕೇಳಿದ್ದ. ಕಾರಣ ಅಮಿತಾಬ್ ಗೆ ದೂರವಾಣಿ ಕರೆಬಂದಿತ್ತು. ಅದನ್ನು ತಿಳಿಸಲು ಆತ ಅಲ್ಲಿಗೆ ಬಂದು ಹೀಗೆ ಪ್ರಶ್ನಿಸಿದ್ದ. ಅಮಿತಾಬ್ ಕಕ್ಕಾಬಿಕ್ಕಿಯಾಗಿದ್ದ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada