»   »  ಬಣ್ಣ ಹಚ್ಚಿಕೊಳ್ಳಬೇಕೆಂಬ ಮಂಜಣ್ಣನ ಆಸೆ ನಿರಾಸೆ

ಬಣ್ಣ ಹಚ್ಚಿಕೊಳ್ಳಬೇಕೆಂಬ ಮಂಜಣ್ಣನ ಆಸೆ ನಿರಾಸೆ

Subscribe to Filmibeat Kannada
K Manjus dream of acting letdown
ಬಣ್ಣ ಹಚ್ಚಿಕೊಳ್ಳಬೇಕು ಎಂಬ ನಿರ್ಮಾಪಕ ಕೆ ಮಂಜು ಅವರ ಕನಸು ಕೈಗೂಡಿಲ್ಲ. ಮತ್ತೆ ಬಣ್ಣ ಹಚ್ಚಲು ಅವರು ಸ್ವಲ್ಪ ಸಮಯ ಕಾಯಬೇಕಾಗಿದೆ. ಸುದೀಪ್ ಮತ್ತು ರಮ್ಯಾ ನಟಿಸುತ್ತಿರುವ ಹೊಸ ಚಿತ್ರ 'ಕಿಚ್ಚ ಹುಚ್ಚ'ದಲ್ಲಿ ಕೊಬ್ಬರಿ ಮಂಜು ಖಳನಟನ ಪಾತ್ರದಲ್ಲಿ ನಟಿಸಬೇಕಾಗಿತ್ತು. ಅವರು ಖಳ ನಟನಾಗಿ ನಟಿಸುವುದು ಅವರ ಹೆಂಡತಿಗೆ ಇಷ್ಟವಿಲ್ಲವಂತೆ. ಹಾಗಾಗಿ ಮಂಜು ಅವರ ಆಸೆ ಮಂಜಿನ ಹನಿಯಂತೆ ಕರಗಿ ಹೋಗಿದೆ.

ಕಿಚ್ಚ ಹುಚ್ಚ ಚಿತ್ರವನ್ನು ಸ್ವತಃ ಮಂಜು ಅವರೇ ನಿರ್ಮಿಸುತ್ತಿದ್ದಾರೆ. ''ನಕಾರಾತ್ಮಕ ಪಾತ್ರಗಳಲ್ಲಿ ನಟಿಸಲು ನನ್ನ ಹೆಂಡತಿಗೆ ಇಷ್ಟವಿಲ್ಲ. ಖಾಸಗಿ ಜೀವನದಲ್ಲೂ ಆ ಪಾತ್ರದ ಪ್ರಭಾವ ಇರುತ್ತ್ತದೆ. ಒಂದೇ ಒಂದು ದಿನದ ಮಟ್ಟಿಗೆ ಚಿತ್ರೀಕರಣದಲ್ಲೂ ಭಾಗವಹಿಸಿದ್ದೆ. ನನ್ನ ಹೆಂಡತಿ ಸೇರಿದಂತೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರಿಂದ ನಟನೆಯನ್ನು ಕೈಬಿಟ್ಟಿದ್ದೇನೆ'' ಎನ್ನುತ್ತಾರೆ ಮಂಜು. ಮಂಜು ಅವರ ಖಳ ನಾಯಕನ ಪಾತ್ರದ ಜಾಗಕ್ಕೆ ರಮೇಶ್ ಚಂದ್ರ ಆಗಮಿಸಿದ್ದಾರೆ. ಈ ಚಿತ್ರವನ್ನು ಚಿ.ಗುರುದತ್ ನಿರ್ದೇಶಿಸುತ್ತಿದ್ದು ಈಗಾಗಲೇ ಚಿತ್ರೋದ್ಯಮದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಮಂಜು ತಮ್ಮ ಚಿತ್ರದಲ್ಲಿ ನಟಿಸಲೇ ಬೇಕು ಎಂದು ನಿರ್ದೇಶಕ ಗುರುದತ್ ಪಟ್ಟು ಹಿಡಿದಿದ್ದರಿಂದ ವಿಧಿಯಿಲ್ಲದೆ ಅವರು ಓಕೆ ಎಂದಿದ್ದರು. ಒಂದು ವೇಳೆ ಚಿತ್ರದಲ್ಲಿ ನೀವು ನಟಿಸಲಿಲ್ಲ ಎಂದರೆ ಚಿತ್ರವನ್ನು ನಿರ್ದೇಶಿಸುವುದಿಲ್ಲ ಎಂಬ ಬೆದರಿಕೆಯನ್ನು ಗುರುದತ್ ಒಡ್ಡಿದ್ದರು! ''ನಾವಿಬ್ಬರೂ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದೇವೆ. ನಕಾರಾತ್ಮಕ ಅಂಶಗಳಿಲ್ಲದ ಪಾತ್ರವೊಂದರಲ್ಲಿ ನಟಿಸಲಿದ್ದೇನೆ'' ಎನ್ನುತ್ತಾರೆ ಮಂಜು.

ತಮಿಳಿನ ಯಶಸ್ವಿ 'ಚಿತ್ರಂ ಪೆಸುತಾಡಿ' ಚಿತ್ರದ ರೀಮೇಕ್ ಕಿಚ್ಚಹುಚ್ಚ. ಈಗಾಗಲೇ ಸುದೀಪ್ ನಟಿಸಿರುವ 'ಹುಚ್ಚ ' ಚಿತ್ರ ಮತ್ತು ಸುದೀಪ್ ಅಭಿಮಾನಿಗಳು ನೀಡಿರುವ 'ಕಿಚ್ಚ'ಎರಡೂ ಪದಗಳನ್ನು ಸೇರಿಸಿ 'ಕಿಚ್ಚ ಹುಚ್ಚ' ಎಂದು ನಾಮಕರಣ ಮಾಡಲಾಗಿದೆ. ತಮಿಳಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ್ದ 'ಸೇತು' ಚಿತ್ರ ಕನ್ನಡಕ್ಕೆ 'ಹುಚ್ಚ' ಎಂಬ ಹೆಸರಿನಲ್ಲಿ ರೀಮೇಕ್ ಆಗಿತ್ತು. ಸುದೀಪ್ ಗೆ ಉತ್ತಮ ಬ್ರೇಕ್ ನೀಡಿದ ಚಿತ್ರ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada