»   » ಅರ್ಜುನ್ ರ ಹನುಮ ಕೊಹಿರಾದಿಂದ ಚೆನ್ನೈಗೆ

ಅರ್ಜುನ್ ರ ಹನುಮ ಕೊಹಿರಾದಿಂದ ಚೆನ್ನೈಗೆ

Posted By:
Subscribe to Filmibeat Kannada
Arjun Sarja
ದೇವನಹಳ್ಳಿ ಸಮೀಪದ ಇತಿಹಾಸ ಪ್ರಸಿದ್ಧ ಕೊಹಿರಾ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಅಂಜನೇಯ ಸ್ವಾಮಿಯ ಏಕಶಿಲಾ ವಿಗ್ರಹಕ್ಕೆ ನಟ ಅರ್ಜುನ್ ಸರ್ಜಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಈ ಬೃಹತ್ ವಿಗ್ರಹವನ್ನು ಚೆನ್ನೈನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಸುಮಾರು 140 ಟನ್ ತೂಕವಿರುವ ಈ ವಿಗ್ರಹವನ್ನು ಶಿಲ್ಪಿ ಅಶೋಕ್ ಗುಡಿಕಾರ್ ಅವರ ನೇತೃತ್ವದ ಸ್ಥಳೀಯ ಕೆತ್ತನೆಗಾರರು ನಿರ್ಮಿಸಲು ಒಂದು ವರ್ಷ ತೆಗೆದುಕೊಂಡಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಚೆನ್ನೈ ಈ ವಿಗ್ರಹ ರವಾನೆಯಾಗಲಿದೆ. ವಿಗ್ರಹವನ್ನು ಚೆನ್ನೈಗೆ ಸಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ಕ್ರೇನ್ ಬಳಸಿ,160 ಚಕ್ರಗಳ ವಾಹನದಲ್ಲಿ ಇದನ್ನು ಕೊಂಡೊಯ್ಯಲಾಗುತ್ತದೆ ಎಂದು ಅರ್ಜುನ್ ಸರ್ಜಾ ತಿಳಿಸಿದರು.

ತಪೋಭಂಗಿಯಲ್ಲಿರುವ ಈ ವಿಗ್ರಹಕ್ಕೆ ವಿಧಾನಸೌಧ ಸೇರಿದಂತೆ ಹತ್ತು ಹಲವು ದೇವಸ್ಥಾನಗಳಿಗೆ ಬಳಸಲಾದ ವಿಶೇಷವಾದ ಕೊಹಿರಾ ಬಂಡೆಗಳನ್ನು ಉಪಯೋಗಿಸಲಾಗಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಅರ್ಜುನ್ ಸರ್ಜಾ, ಸಾಹಸಮಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಹಿರಿಯ ಕನ್ನಡನಟ ರಾಜೇಶ್ ಅವರ ಮಗಳು ಆಶಾರಾಣಿ ಅವರನ್ನು ವರಿಸಿದ ನಟ ಶಕ್ತಿ ಪ್ರಸಾದ್ ಅವರ ಪುತ್ರ ಅರ್ಜುನ್ ಅವರಿಗೆ ಐಶ್ವರ್ಯಾ, ಅಂಜನಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಸೋದರ ಕಿಶೋರ್ ಸರ್ಜಾ ಅವರ ಅಕಾಲಿಕ ಮರಣದ ನೋವಿನ ನಡುವೆಯೂ ಸೋದರಳಿಯ ಚಿರಂಜೀವಿ ಸರ್ಜಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ತಮ್ಮ ಆರಾಧ್ಯದೈವ ಆಂಜನೇಯ ಸ್ವಾಮಿ ವಿಗ್ರಹವನ್ನು ಸ್ಥಾಪಿಸಿ, ಸಾರ್ವಜನಿಕರಿಗೆ ಅರ್ಪಿಸುವುದು ಅವರ ಬಹುದಿನಗಳ ಕನಸಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada