For Quick Alerts
  ALLOW NOTIFICATIONS  
  For Daily Alerts

  ಎಂಟು ಕೋಟಿ ಬಜೆಟ್ ನ ಮೂರು ಚಿತ್ರಗಳು

  By Staff
  |

  ಗಣೇಶ್ ಚತುರ್ಥಿಗೆ ಒಂದೇ ಒಂದು ಕನ್ನಡ ಚಿತ್ರವೂ ಬಿಡುಗಡೆಯಾಗಲಿಲ್ಲ. ಅದರೆ ಈ ವಾರ(ಆ.28) ಮೂರು ಚಿತ್ರಗಳು ತೆರೆಕಾಣಲಿವೆ. ಚೆಲುವಿನ ಚಿಲಿಪಿಲಿ, ಇನಿಯ ಮತ್ತು ವಾಯುಪುತ್ರ ಚಿತ್ರಗಳು ಅದೃಷ್ಟ ಪರೀಕ್ಷೆಗೆ ಹೊರಟಿವೆ. ಈ ಮೂರು ಚಿತ್ರಗಳು ಒಟ್ಟ್ಟು ರು.8 ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಂಡಿರುವುದು ವಿಶೇಷ.

  ಚೆಲುವಿನ ಚಿಲಿಪಿಲಿ

  ಶ್ರೀ ಚೆಲುವಾಂಬಿಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ನಾರಾಯಣ್ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ'ಚೆಲುವಿನ ಚಿಲಿಪಿಲಿ". ನಾರಾಯಣ್ ಅವರ ಮಗ ಪಂಕಜ್ ಈ ಚಿತ್ರದ ನಾಯಕರಾಗಿದ್ದು, ಬೆಡಗಿ ರೂಪಿಕಾ, ಪಂಕಜ್‌ನ ನಾಯಕಿಯಾಗಿ 'ಚೆಲುವಿನ ಚಿಲಿಪಿಲಿ"ಯಲ್ಲಿ ನಟಿಸಿದ್ದಾರೆ.

  ದಕ್ಷಿಣ ಭಾರತದ ಪುಣ್ಯನದಿಗಳಲ್ಲಿ ಒಂದಾದ ಗೋದಾವರಿಯ ತಟದಲ್ಲಿರುವ ಸುಂದರ ನಗರ ರಾಜಮಂಡ್ರಿ. ಈ ನಗರದಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಹಚ್ಚಹಸಿರನ್ನು ಹೊದ್ದು ನಿಂತಿರುವ ಈ ಊರಿನ ಸೌಂದರ್ಯ ಜಗದೀಶ್ ವಾಲಿ ಅವರ ಛಾಯಾಗ್ರಹಣದಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ಸ್ವದೇಶದಲ್ಲಲ್ಲದೆ ವಿದೇಶದಲ್ಲೂ 'ಚೆಲುವಿನ ಚಿಲಿಪಿಲಿ"ಯ ಹಾಡು ಚಿತ್ರೀಕರಣಗೊಂಡಿದೆ.

  ಈ ಭಾವ ಪ್ರಧಾನ ಪ್ರೇಮಕಥೆಯಲ್ಲಿ ಅನಂತನಾಗ್, ಸುಮಲತಾ, ದ್ವಾರಕೀಶ್, ಕೋಟೆ ಪ್ರಭಾಕರ್, ರಾಜೇಂದ್ರ ಕಾರಂತ್, ವಿಜಯ ಸಾರಥಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಆರು ಗೀತೆಗಳನ್ನು ಬರೆದು ಎಸ್.ನಾರಾಯಣ್ ಅವರೇ ರಾಗ ಸಂಯೋಜನೆ ಮಾಡಿದ್ದಾರೆ. ಸೌಂದರ್‌ರಾಜ್ ಸಂಕಲನ ಕಾರ್ಯ ನಿರ್ವಹಿಸಿದರೆ ಮಳವಳ್ಳಿ ಸಾಯಿಕೃಷ್ಣ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

  ಇನಿಯ

  ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರ ಬಾಬು ಅವರು ನಿರ್ಮಿಸಿರುವ 'ಇನಿಯ" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಟ ಬಾಲಾಜಿ ಅವರೊಂದಿಗೆ ಪೂಜಾಗಾಂಧಿ ನಾಯಕಿಯಾಗಿ ನಟಿಸಿರುವ ಈ ಚಿತ್ರ ವಿಭಿನ್ನ ಪ್ರೇಮಕಥೆಯನ್ನೊಳಗೊಂಡಿದೆ.

  ಚೊಚ್ಚಲ ಯತ್ನದಲ್ಲಿ 'ಮುಸ್ಸಂಜೆ ಮಾತು" ಎಂಬ ಉತ್ತಮ ಚಿತ್ರವನ್ನು ನಿರ್ದೇಶಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ಮಹೇಶ್ ಈ ಚಿತ್ರದ ನಿರ್ದೇಶಕರು. 'ಇನಿಯ" ಕೂಡ ನನಗೆ ಯಶಸ್ಸು ತಂದುಕೊಡುವುದರಲ್ಲಿ ಸಂದೇಹವಿಲ್ಲ ಎಂಬ ಅಭಿಪ್ರಾಯ ನಿರ್ದೇಶಕರದು. 'ಮುಸ್ಸಂಜೆ ಮಾತು" ಚಿತ್ರಕ್ಕೆ ಉತ್ತಮ ಸಂಗೀತ ನೀಡಿ ಜನರ ಮನಸೂರೆಗೊಂಡಿದ್ದ ವಿ.ಶ್ರೀಧರ್ ಪ್ರಸ್ತುತ ಚಿತ್ರಕ್ಕೂ ಸಂಗೀತ ನೀಡಿದ್ದು, ಚಿತ್ರದ ಧ್ವನಿಸುರುಳಿಗಳಿಗೆ ಉತ್ತಮ ಪ್ರಿತಿಕ್ರಿಯೆ ದೊರಕಿದೆ ಎಂದು ಆಡಿಯೋ ಕಂಪನಿ ಮಾಲೀಕರು ತಿಳಿಸಿದ್ದಾರೆ.

  ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುಂದರನಾಥ ಸುವರ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮದುಸೂಧನ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿ.ಶ್ರೀಧರ್ ಸಂಗೀತ, ಕವಿರಾಜ್, ಶ್ರೀಧರ್ ಗೀತರಚನೆ, ಮೋಹನ್ ಸಂಕಲನ, ರವಿವರ್ಮರ ಸಾಹಸವಿರುವ ಚಿತ್ರದ ತಾರಾಬಳಗದಲ್ಲಿ ಜೈಜಗದೀಶ್, ಊರ್ವಶಿ, ರೇಖಾ, ಜ್ಯೋತಿ, ನೀನಾಸಂ ಅಶ್ವತ್, ಹರೀಶ್ ರಾಯ್, ಲೋಕನಾಥ್, ಬಿ.ವಿ.ರಾಧ ಮುಂತಾದವರಿದ್ದಾರೆ.

  ವಾಯುಪುತ್ರ

  ದಕ್ಷಿಣ ಭಾರತದ ಪ್ರಸಿದ್ಧ ನಟ, ಕರುನಾಡ ಕುವರ ಅರ್ಜುನ್ ಸರ್ಜಾ ನಿರ್ಮಾಣದ 'ವಾಯುಪುತ್ರ" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸರ್ಜಾ ಕುಟುಂಬದ ಮತ್ತೊಂದು ಕುಡಿ ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

  ಹಿಂದೆ ಕೆಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ಕಿಶೋರ್‌ಸರ್ಜಾ ಈ ಚಿತ್ರದ ನಿರ್ದೇಶಕರು. ಪ್ರಸ್ತುತ ಚಿತ್ರದ ಚಿತ್ರೀಕರಣ ಪೂರೈಸಿದ ಅವರು ನಂತರ ಇಹಲೋಕ ತ್ಯಜಿಸಿದ್ದು ಬೇಸರದ ಸಂಗತಿ. ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ 'ವಾಯುಪುತ್ರ"ಚಿತ್ರದ ಹಾಡುಗಳು ಜನ ಮನ್ನಣೆಗೆ ಪಾತ್ರವಾಗಿದೆ ಎಂದು ಆಕಾಶ್ ಆಡಿಯೋ ಸಂಸ್ಥೆ ಮಾಲೀಕರಾದ ಮಧುಬಂಗಾರಪ್ಪ ತಿಳಿಸಿದ್ದಾರೆ. ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ವಿಶಿಷ್ಟ ಕಥಾ ಹಂದರ ಹೊಂದಿದ್ದು, ನೋಡುಗರಿಗೆ ಮುದ ನೀಡಲಿದೆ ಎಂಬ ಅನಿಸಿಕೆ ಅರ್ಜುನ್‌ಸರ್ಜಾ ಅವರದು.

  ಶ್ರೀ ರಾಮ ಫಿಲಂಸ್ ಪ್ರೈ(ಲಿ) ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಲಿಂಗುಸ್ವಾಮಿ ಕಥೆ ಬರೆದಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಕೆ.ಕೆ ಸಂಕಲನ, ಎಂ.ಎಸ್.ರಮೇಶ್, ಕಿಶೋರ್ ಸರ್ಜಾ ಸಂಭಾಷಣೆ, ತಾರಾ-ಪ್ರಸಾದ್, ಶೀಭಿ ಪೌಲ್‌ರಾಜ್, ಇಮ್ರಾನ್ ಸರ್ದಾರಿಯಾ, ದೇವ್‌ಸಂಪತ್ ನೃತ್ಯ, ಶಿವಾರ್ಜುನ್, ಸಿ.ಎಚ್.ರಾಮಕೃಷ್ಣ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಅಂಬರೀಶ್, ಅಂದ್ರಿತಾ ರೇ, ಅಜಯ್, ಸಾಧುಕೋಕಿಲಾ, ರಮೇಶ್‌ಭಟ್, ಮೈಕೋ ನಾಗರಾಜ್, ಕೃಷ್ಣೇಗೌಡ, ಪದ್ಮಜಾರಾವ್, ಶ್ರೀಶೈಲನ್, ಸರೋಜ ಶ್ರೀಶೈಲನ್, ರಮೇಶ್ ಪಂಡಿತ್, ನಾಗರಾಜ ಮೂರ್ತಿ, ಗಣೇಶ್, ಸಾಗರ್ ಮುಂತಾದವರಿದ್ದಾರೆ.

  (ಕೊನೆ ಕ್ಷಣದಲ್ಲಿ ವಾಯುಪುತ್ರ ಚಿತ್ರದ ನಿರ್ಮಾಪಕರು ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ.)

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X