»   »  ಬಾಕ್ಸಾಫೀಸ್ ಗಳಿಕೆ ಮುಖ್ಯ; ಶತದಿನೋತ್ಸವ ಅಲ್ಲ

ಬಾಕ್ಸಾಫೀಸ್ ಗಳಿಕೆ ಮುಖ್ಯ; ಶತದಿನೋತ್ಸವ ಅಲ್ಲ

Posted By:
Subscribe to Filmibeat Kannada
Balaji
ಇತ್ತೀಚೆಗಿನ 'ರಾಜ್ ಕುಮಾರಿ' ಸೇರಿದಂತೆ ಬಾಲಾಜಿ ಅಭಿನಯದ ಚಿತ್ರಗಳು ಬಾಕ್ಸಾಫೀಸಲ್ಲಿ ಮಕಾಡೆ ಮಲಗುತ್ತಿವೆ.ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಎಂಬ ಕಾರಣಕ್ಕೆ ಪ್ರೇಕ್ಷಕರಲ್ಲಿ ಬಾಲಾಜಿ ಬಗ್ಗೆ ಬಹಳಷ್ಟು ನಿರೀಕ್ಷೆಗಳಿದ್ದವು. ಆದರೆ ಇವೆಲ್ಲವೂ ಹುಸಿಯಾಗಿವೆ. ಈ ಕುರಿತು ಬಾಲಾಜಿ ಅವರನ್ನು ಕೇಳಿದರೆ, ರವಿಚಂದ್ರನ್ ಸಹೋದರನಾಗಿರುವುದಕ್ಕೆ ನನಗೂ ಹೆಮ್ಮೆ ಅನ್ನಿಸುತ್ತದೆ. ಖಂಡಿತ 100 ದಿನ ಪ್ರದರ್ಶನ ಕಾಣುವಂತಹ ಚಿತ್ರ ನೀಡುತ್ತೇನೆ ಎನ್ನುತ್ತಾರೆ.

ರವಿಚಂದ್ರನ್ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾನು ಕೇವಲ ನಾಲ್ಕು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆರಂಭದ ಐದು ವರ್ಷಗಳಲ್ಲಿ ರವಿಚಂದ್ರನ್ ಸಹ ಬಹಳಷ್ಟು ಹೆಣಗಾಡಬೇಕಾಯಿತು. 'ಪ್ರೇಮ ಲೋಕ' ಚಿತ್ರದ ನಂತರವೇ ಅವರ ಅದೃಷ್ಟ ಬದಲಾಗಿದ್ದು ಎಂಬ ಕಾರಣಗಳನ್ನು ಕೊಡುತ್ತಾರೆ ಬಾಲಾಜಿ.

ಚಿತ್ರವೊಂದು ಶತದಿನೋತ್ಸವ ಆಚರಿಸಿಕೊಂಡಿದೆ ಎಂಬುದು ಮುಖ್ಯವಲ್ಲ. ಬಾಕ್ಸಾಫೀಸ್ ನಲ್ಲಿ ಎಷ್ಟು ಲಾಭ ಮಾಡಿದೆ ಎಂಬುದು ಮುಖ್ಯ. ಅಹಂ ಪ್ರೇಮಾಸ್ಮಿ ಚಿತ್ರವನ್ನು ರವಿಚಂದ್ರನ್ ಮತ್ತೊಂದು ಪ್ರೇಮಲೋಕ ಎಂದೇ ತಿಳಿದಿದ್ದರು. ಆದರೆ ಆ ಚಿತ್ರ ಶತದಿನ ಆಚರಿಸಿಕೊಳ್ಳಲಿಲ್ಲ ಎಂಬುದು ನಿಜ, ಬಾಕ್ಸಾಫೀಸ್ ನಲ್ಲಿ ಗೆದ್ದಿದೆ ಎಂಬುದೂ ಅಷ್ಟೇ ನಿಜ. ರಾಜ್ ಕುಮಾರಿ ಚಿತ್ರ ಪರೀಕ್ಷೆಗಳ ಸಮಯದಲ್ಲಿ ಬಿಡುಗಡೆಯಾದ ಕಾರಣ ಪ್ರೇಕ್ಷಕರನ್ನ್ನು ಸೆಳೆಯಲಿಲ್ಲ ಎನ್ನುತ್ತಾರೆ ಬಾಲಾಜಿ.

'ಇನಿಯಾ' ಚಿತ್ರ ಪ್ರೇಮಿಸುವವರಿಗೆ, ಪ್ರೇಮಿಗಳಿಗೆ ಮತ್ತು ಪ್ರೇಮದಲ್ಲಿ ಬಿದ್ದವರಿಗಾಗಿ. ಪೂಜಾಗಾಂಧಿ ಅವರೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಅದ್ಭುತ ಅನುಭವ. ಕನ್ನಡ ಕಲಿಯಬೇಕೆಂಬ ಅವರ ಆಸಕ್ತಿ ನಿಜಕ್ಕೂ ಮೆಚ್ಚುವಂತಹದ್ದು. ಪ್ರಸ್ತುತ ರವಿಚಂದ್ರನ್ ಅವರು ಮಂಜಿನ ಹನಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಂತರ ಅವರ ಮುಂದಿನ ಚಿತ್ರ 'ಚಂದಮಾಮ' ದಲ್ಲಿ ನನಗೆ ಅವಕಾಶ ಕೊಡುವ ಸಾಧ್ಯತೆಗಳಿವೆ ಎನ್ನುತ್ತಾರೆ ಬಾಲಾಜಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada