»   » ರಜನಿ ಎಂಧಿರನ್ ಬುರುಡೆಗೆ ಕೆಎಫ್‌ಸಿಸಿ ಬಿಸಿನೀರು!

ರಜನಿ ಎಂಧಿರನ್ ಬುರುಡೆಗೆ ಕೆಎಫ್‌ಸಿಸಿ ಬಿಸಿನೀರು!

Posted By:
Subscribe to Filmibeat Kannada

ಅಕ್ಟೋಬರ್ 1ರಂದು ರಜನಿಕಾಂತ್ ಅಭಿನಯದ 'ಎಂಧಿರನ್' ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. 'ಎಂಧಿರನ್' ಎಂದರೆ ಕನ್ನಡದಲ್ಲಿ ಯಂತ್ರ ಮಾನವ ಎಂದರ್ಥ. ಸರಳವಾಗಿ ರೋಬೋಟ್ ಎಂದು ಹೇಳಬಹುದು. ರು.150 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ತೆರೆಕಾಣುತ್ತಿದೆ.

ಕರ್ನಾಟಕದ ವಿತರಣಾ ಹಕ್ಕುಗಳು ರು.8.50 ಕೋಟಿ ದಾಖಲೆ ಬೆಲೆಗೆ ಮಾರಾಟವಾಗಿವೆ. ಇದು ಪುನೀತ್ ರಾಜ್ ಕುಮಾರ್ ಅಭಿನಯ 'ಪೃಥ್ವಿ' ಚಿತ್ರದ ಒಟ್ಟಾರೆ ಗಳಿಕೆಗೆ ಸಮ. 'ಎಂಧಿರನ್' ಪರಭಾಷಾ ಚಿತ್ರವಾದ ಕಾರಣ ಕೇವಲ 24 ತೆರೆಗಳ ಮೇಲಷ್ಟೇ ಬಿಡುಗಡೆಯಾಗಬೇಕು ಎಂಬುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕೆಎಫ್‌ಸಿಸಿ)ಅಲಿಖಿತ ನಿಯಮ.

ಈ ನಿಯಮವನ್ನು ಕೊಂಚ ಸಡಿಲಿಸಿ 24ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಿಸುವ ಸದಾವಕಾಶವನ್ನು ಕೊಡಿ ಎಂದು ಈಗಾಗಲೆ ಕೆಎಫ್‌ಸಿಸಿಯನ್ನು ವಿತರಕರು ವಿನಂತಿಸಿಕೊಂಡಿದ್ದಾರೆ. ಈ ವಿನಂತಿಯನ್ನ್ನು ಕೆಎಫ್‌ಸಿಸಿ ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟಿದೆ ಎನ್ನಲಾಗಿದೆ.

ಹಿಂದಿ(ರೋಬೋಟ್), ತೆಲುಗು(ರೋಬೋ) ಮತ್ತು ತಮಿಳು(ಎಂಧಿರನ್) ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ರಾಜ್ಯದಲ್ಲಿ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇದೆ. ಆದರೆ ಕೆಎಫ್‌ಸಿಸಿ ನಿಯಮಗಳು 'ಎಂಧಿರನ್‌'ಗೆ ಮೂಗುದಾರ ಹಾಕಿವೆ. ಎಂಧಿರನ್ ಮೂರು ಭಾಷೆಯ ಚಿತ್ರಗಳನ್ನು ಒಂದೇ ಚಿತ್ರ ಎಂದು ಪರಿಗಣಿಸಿರುವ ಕೆಎಫ್‌ಸಿಸಿ ಕೇವಲ 24 ತೆರೆಗಳಿಗಷ್ಟೆ ಸೀಮಿತಗೊಳಿಸಿದೆ.

ಈ ಹಿಂದೆ ಬಿಗ್ ಪಿಕ್ಚರ್ಸ್ ನಿರ್ಮಿಸಿದ್ದ 'ರಾವಣ್' ಚಿತ್ರಕ್ಕೂ ಇದೇ ಗತಿಯಾಗಿತ್ತು. ಈ ಚಿತ್ರವೂ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿತ್ತು. ಒಂದೊಂದು ಭಾಷೆಯ ಚಿತ್ರವನ್ನೂ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಬಿಗ್ ಪಿಕ್ಚರ್ಸ್ ವಿನಂತಿಸಿಕೊಂಡಿತ್ತು. ಆದರೆ ಇದಕ್ಕೆ ಕೆಎಫ್‌ಸಿಸಿ ಅವಕಾಶ ಮಾಡಿಕೊಡಲಿಲ್ಲ. ಈಗ 'ಎಂಧಿರನ್' ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿದೆ.

'ಎಂಧಿರನ್' ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದಿರುವ ಮೋಹನ್ ಕುಮಾರ್ ಮತ್ತು ಮುನಿರಾಜು ಮಲ್ಲೇಶ್ ಪಾಳ್ಯ ಅವರು ಹಿಂದಿ(ರೋಬೋಟ್) ಚಿತ್ರದ ಹಕ್ಕುಗಳನ್ನು ಖರೀದಿಸಲು ಮುಂದಾಗಿದ್ದಾರೆ. ರು.8.5 ಕೋಟಿಗೆ ಎಂಧಿರನ್ ವಿತರಣೆ ಹಕ್ಕುಗಳನ್ನು ಪಡೆದಿರುವ ಇವರು ಇನ್ನು ರು.1.5 ಕೋಟಿ ಕೊಟ್ಟರೆ ಹಿಂದಿ 'ರೋಬೋಟ್' ಚಿತ್ರದಕರ್ನಾಟಕ ಹಕ್ಕ್ಕುಗಳು ಅವರದಾಗುತ್ತವೆ ಎನ್ನುತ್ತವೆ ಮೂಲಗಳು.

ಬೆಂಗಳೂರಿನಲ್ಲಿ ರು.75 ಇರುವ ಟಿಕೆಟ್ ಬೆಲೆ ರು.200ಕ್ಕೆ ಮಾರಾಟವಾಗುತ್ತಿದೆ. ಪಿವಿಆರ್ ಗೋಲ್ಡ್ ಕ್ಲಾಸ್ ಟಿಕೆಟ್ ಬೆಲೆ ರು.500 ಇರುವುದು ರು.3000 ಕೊಟ್ಟರೂ ಸಿಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗೆ ಪರಿಹಾರ ಎಂದರೆ 'ಎಂಧಿರನ್' ಚಿತ್ರ 24ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕು ಎಂಬುದು ವಿತರಕರ ಬುದ್ಧಿಮಾತು . ಕೆಎಫ್‌ಸಿಸಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada