»   » ಖುಷ್ಬು ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ರದ್ದು

ಖುಷ್ಬು ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ರದ್ದು

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ತಾರೆ ಖುಷ್ಬು ವಿರುದ್ಧದ 22 ಕ್ರಿಮಿನಲ್ ಕೇಸುಗಳನ್ನು ಸುಪ್ರೀಂಕೋರ್ಟ್ ಮಂಗಳವಾರ(ಏ.28) ರದ್ದುಗೊಳಿಸಿ ಮಹತ್ವದ ತೀರ್ಪನ್ನು ನೀಡಿದೆ. ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪಿನಿಂದ ನಟಿ ಖುಷ್ಬು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

"ಹೆಣ್ಣುಮಕ್ಕಳಿಗೆ ವಿವಾಹ ಪೂರ್ವ ಲೈಂಗಿಕತೆ ತಪ್ಪಲ್ಲ" ಎಂದು ಖುಷ್ಬು ತಮಿಳು ನಿಯತಕಾಲಿಕೆಯೊಂದಕ್ಕೆ ವಿವಾದಿತ ಹೇಳಿಕೆ ನೀಡಿದ ಕಾರಣ ಆಕೆಯ ವಿರುದ್ಧ ದೇಶದಾದ್ಯಂತ 22 ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು. ಇಸವಿ 2005ರಲ್ಲಿ ನಡೆದ ಈ ಘಟನೆ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಈ ಸಂಬಂಧ 2008ರಲ್ಲಿ ಖುಷ್ಬು ಮದ್ರಾಸ್ ಹೈಕೋರ್ಟ್ ನ ಮೆಟ್ಟಿಲೇರಿದ್ದರು. ಖುಷ್ಬು ಸಲ್ಲಿಸಿದ್ದ ಅರ್ಜಿ ಮದ್ರಾಸ್ ಹೈಕೋರ್ಟ್ ನಲ್ಲಿ ವಜಾಗೊಂಡ ಕಾರಣ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಸಂದರ್ಶನದಲ್ಲಿ ಖುಷ್ಬು ಮಾತನಾಡುತ್ತಾ, "ಮದುವೆ ಸಮಯದಲ್ಲಿ ವಧುವಿನ ಕನ್ವತ್ವದ ಬಗ್ಗೆ ಯಾರೊಬ್ಬ ಸುಶಿಕ್ಷಿತರೂ ತಲೆಕೆಡಿಸಿಕೊಳ್ಳುವುದಿಲ್ಲ " ಎಂದಿದ್ದರು.

ವಿವಾಹಪೂರ್ವ ಲೈಂಗಿಕತೆ ಹಾಗೂ ಲೈಂಗಿಕ ಸಂಗಾತಿಗಳೊಂದಿಗಿನ ಸಂಬಂಧ ( live-in relationship) ತಪ್ಪಲ್ಲ ಎಂದು ಖುಷ್ಬು ಹೇಳಿದ್ದರು. ಖುಷ್ಬು ಹೇಳಿಕೆಗೆ ತಮಿಳುನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿವಿಧ ಸಂಘ, ಸಂಸ್ಥೆಗಳು ಖುಷ್ಬು ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದವು.

ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ದೀಪಕ್ ವರ್ಮ ಮತ್ತು ಬಿ ಎಸ್ ಚೌಹಾಣ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ ಮದ್ರಾಸ್ ಹೈಕೋರ್ಟ್ ನ ನಿರ್ಧಾರ ಹಾಗೂ ಖುಷ್ಬು ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಇಂದು ಅನೂರ್ಜಿತಗೊಳಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada