»   » ಕನ್ನಡ ಚಿತ್ರಮಂದಿರಗಳಲ್ಲಿ ಇಂದು ಹರಿಯಲಿದೆ ರಕ್ತದ ಕೋಡಿ

ಕನ್ನಡ ಚಿತ್ರಮಂದಿರಗಳಲ್ಲಿ ಇಂದು ಹರಿಯಲಿದೆ ರಕ್ತದ ಕೋಡಿ

Subscribe to Filmibeat Kannada
Amulya
ಸೆಪ್ಟೆಂಬರ್ 28ರ ಶುಭ ಶುಕ್ರವಾರ ಕನ್ನಡ ಚಿತ್ರಮಂದಿರಗಳಲ್ಲಿ ರಕ್ತದ ಕೋಡಿ ಹರಿಯಲಿದೆ. ಅಂದರೆ ಭೂಗತ ಲೋಕಕ್ಕೆ ಸಂಬಂಧಿಸಿದ ಎರಡು ಮತ್ತು ಪಕ್ಕಾ ಠಪೋರಿ ವಸ್ತುವಿನ ಒಂದು ಒಟ್ಟು ಮೂರು ಚಿತ್ರಗಳು ಇಂದು ಚಿತ್ರಮಂದಿರಗಳನ್ನು ಅಲಂಕರಿಸಲಿದೆ. ಸುಮಾರು ನಾಲ್ಕು ವರುಷಗಳಿಂದ ಡಬ್ಬಾದಲ್ಲಿಯೇ ಕುಳಿತಿದ್ದ 'ರೋಡ್ ರೋಮಿಯೋ' ಇಂದು ತೆರೆಕಾಣುತ್ತಿದೆ. ದಿಲೀಪ್ ಪೈ ನಾಯಕ ನಟರಾಗಿ ಅಭಿನಯಿಸುತ್ತಿರುವ ಪ್ರಥಮ ಚಿತ್ರ ಇದು. ಮರೆತೇಹೋಗಿರುವ ಆಶಿತಾ ಈ ಚಿತ್ರದ ನಾಯಕಿ. ಹಿಂದಿನ ಚಿತ್ರಗಳಲ್ಲಿ ಬರೀ ಕಣ್ಣೀರು ಹರಿಸುತ್ತಿದ್ದ ಸಾಯಿ ಪ್ರಕಾಶ್ ಈ ಚಿತ್ರದಲ್ಲಿ ಏನು ರಕ್ತ ಹರಿಸಲಿದ್ದಾರೆ.

ಗಜೇಂದ್ರ ನಿರ್ಮಿಸುತ್ತಿರುವ 'ಅಗ್ರಹಾರ' ಮತ್ತು ಎರ್ರಾಸ್ವಾಮಿ ನಿರ್ಮಿಸುತ್ತಿರುವ 'ಗುಣ' ಅಪ್ಪಟ ರೌಡಿಸಂ ಚಿತ್ರಗಳು. ಅಗ್ರಹಾರ ಚಿತ್ರದ ನಾಯಕ ಆರ್ಯ ಮತ್ತು ಗುಣ ಚಿತ್ರದಲ್ಲಿ ವೆಂಕಟೇಶ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಒತ್ತಲು ಕಾತರರಾಗಿದ್ದಾರೆ. ವಿಶೇಷವೆಂದರೆ ಈ ಮೂವರೂ ನಾಯಕರಾಗಿ ಪ್ರಥಮ ಬಾರಿಗೆ ನಟಿಸುತ್ತಿರುವುದು. ಗುಣ ಚಿತ್ರದಲ್ಲಿ ವಿಶೇಷ ಭೂಮಿಕೆಯಲ್ಲಿ ದುನಿಯಾ ಖ್ಯಾತಿಯ ವಿಜಯ್ ಬಂದುಹೋಗಲಿದ್ದಾರೆ.

ಮನಸಿಗೆ ತಟ್ಟುವ ನವಿರಾದ ಕಥೆಯಿರುವ ಹೊಸ ನಾಯಕರಿರುವ ಹೊಸ ಚಿತ್ರಗಳನ್ನು ಚಿತ್ರಪ್ರೇಮಿಗಳು ಬರಸೆಳೆದು ಅಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ಮೂರೂ ಚಿತ್ರಗಳು ಹೃದಯ ಬಗೆಯುವ ಚಿತ್ರಗಳು. ಇವುಗಳನ್ನೂ ಕನ್ನಡಿಗರು ಕೈಬಿಡುವುದಿಲ್ಲ ಎಂಬ ನಂಬಿಕೆಯಿದೆ ಈ ನಟರಿಗೆ. ಆಲ್ ದಿ ಬೆಸ್ಟ್.

ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ!

***

ಸವಿಸವಿ ನೆನಪು, ನಿನ್ನದೆ ನೆನಪುಗಳಂಥ ಸ್ವಮೇಕ್ ಚಿತ್ರಗಳು ಹೇಳಹೆಸರಿಲ್ಲದಂತೆ ನೆಲಕಚ್ಚುತ್ತಿರುವಾಗ ತಮಿಳು ಕಾದಲ್ ಚಿತ್ರದ ಪಡಿಯಚ್ಚಾಗಿರುವ 'ಚೆಲುವಿನ ಚಿತ್ತಾರ' ಬಿಡುಗಡೆಯಾಗ ಎಲ್ಲಾ ಚಿತ್ರಮಂದಿರಗಳಲ್ಲೂ ಸೆಂಚುರಿ ಬಾರಿಸಿ ಸ್ವಮೇಕು ಸ್ವಮೇಕು ಎಂದು ಕೂಗುವವರ ಬಾಯಿಯನ್ನು ಮುಚ್ಚಿಸಿಬಿಟ್ಟಿದೆ. ಸದ್ಯಕ್ಕೆ ಕಲಾಸಾಮ್ರಾಟ್ ಎಸ್.ನಾರಾಯಣ್ ಚಾಲ್ತಿಯಲ್ಲಿರುವ ಅತ್ಯಂತ ಬೇಡಿಕೆಯ ನಿರ್ದೇಶಕ. ಹೊಗಳಿಕೆ ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸಿರುವ ಚಿತ್ತಾರದ ಶತದಿನೋತ್ಸವ ಸಮಾರಂಭ ಅಕ್ಟೋಬರ್ 8ರಂದು ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ. ಪಾಸ್ ಬೇಕೆಂದರೆ ಕ್ಯಾಸೆಟ್ ಅಥವ ಆಡಿಯೋ ಸಿಡಿ ಕೊಳ್ಳುವುದು ಕಡ್ಡಾಯ.

***

ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಪ್ರಥಮ ಚಿತ್ರ ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ ಮತ್ತು ಚೆಲುವಿನ ಚಿತ್ತಾರ ಎಲ್ಲವೂ ಶತದಿನೋತ್ಸವ ಆಚರಿಸಿಕೊಂಡಿವೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಬಿಟ್ಟರೆ ಯಾವ ನಾಯಕನ ಚಿತ್ರಗಳೂ ಹ್ಯಾಟ್ರಿಕ್ ಆಚರಿಸಿರಲಿಲ್ಲ. ಪುನೀತ್‌ರ ಅಭಿನಯದ ಮೂರನೇ ಚಿತ್ರ 'ವೀರ ಕನ್ನಡಿಗ' ಚಿತ್ರ ತೊಂಬತ್ತೊಂಬತ್ತಕ್ಕೆ ಔಟಾಗಿ ಅವರು ಹ್ಯಾಟ್ರಿಕ್ ಹೀರೊ ಆಗುವುದನ್ನು ತಪ್ಪಿಸಿತ್ತು. ಪ್ರೇಮ್‌ಕುಮಾರ್ ಕೂಡ 'ಪಲ್ಲಕ್ಕಿ' ಸೋಲಿನಿಂದ ಹ್ಯಾಟ್ರಿಕ್ ಹೀರೊ ಆಗಲಿಲ್ಲ ನೆನಪಿರಲಿ.

***

ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಚಿತ್ರಮಂದಿರ ಸಿಕ್ಕಿಲ್ಲವೆಂದು ಗೋಳಿಡುತ್ತಿದ್ದ ಪ್ರಿಯಾ ಹಾಸನ್ ಅಭಿನಯಿಸಿ ನಿರ್ದೇಶಿಸಿರುವ ಜಂಬದ ಹುಡುಗಿ ಚಿತ್ರ ಕೈಬಿಟ್ಟ ಚಿತ್ರಗಳ ಡಾರ್ಲಿಂಗ್ ಸಪ್ನ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿದೆ. ಅದೇ ಚಿತ್ರಮಂದಿರದಲ್ಲಿ ಮತ್ತೆರಡು ಚಿತ್ರಗಳಾದ ಜಗ್ಗೇಶ್ ಅವರ 'ಮನ್ಮಥ' ಮತ್ತು ಮಯೂರ್ ಅಭಿನಯದ 'ನಿನ್ನದೇ ನೆನಪು' ಎರಡೆರಡು ಆಟಗಳನ್ನು ಆಡುತ್ತಿವೆ. ಅವೂ ಶತದಿನೋತ್ಸವ ಆಚರಿಸಬಹುದು. ಸ್ವಲ್ಪ ದಿನ ಕಾಯಿರಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada