»   » ಅಂತೂ ಇಂತೂ ಮೇ 8ಕ್ಕೆ ಕೆಎಫ್ ಸಿಸಿ ಚುನಾವಣೆ

ಅಂತೂ ಇಂತೂ ಮೇ 8ಕ್ಕೆ ಕೆಎಫ್ ಸಿಸಿ ಚುನಾವಣೆ

Posted By:
Subscribe to Filmibeat Kannada

ಸರ್ಕಾರದ ಹಂಗಿಲ್ಲದ ಸ್ವತಂತ್ರ ಸಂಸ್ಥೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಕಡೆಗೂ ಈ ಸಂಸ್ಥೆಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ತಿಂಗಳುಗಳ ಲೆಕ್ಕಾಚಾರದಲ್ಲಿ ನೋಡಿದರೆ, ಜಯಮಾಲಾ ಅಂಡ್ ಕಂಪನಿಯ ಅಧಿಕಾರವಧಿ ಈಗಾಗಲೇ ಮುಗಿದಿದೆ. ಹಣ, ಪ್ರತಿಷ್ಠೆ, ವ್ಯಾಪಾರ, ಲೆಕ್ಕಾಚಾರ ಇವಿಷ್ಟೇ ತನ್ನ ಆದ್ಯತೆ ಎಂದುಕೊಂಡಿರುವ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೇ 8ರಂದು ಚುನಾವಣೆ ನಡೆಯಲಿದೆ.

ಕಳೆದ ನವೆಂಬರ್ ತಿಂಗಳಿಗೆ ಕೆಎಫ್ ಸಿಸಿ ಪದಾಧಿಕಾರಿಗಳ ಅಧಿಕಾರದ ಅವಧಿ ಮುಗಿದಿತ್ತು. ಸಾಕಷ್ಟು ಬಾಕಿ ಕೆಲಸಗಳು ಹಾಗೇ ಉಳಿದುಕೊಂಡಿದ್ದ ಕಾರಣ ಚುನಾವಣೆ ಸಾಧ್ಯವಾಗಿರಲಿಲ್ಲ. ಸಕ್ರಿಯ ಹಾಗೂ ನಿಷ್ಕ್ರಿಯ ಸೇರಿ ಒಟ್ಟು 1,800 ಮಂದಿ ಸದಸ್ಯರು ಕೆಎಫ್ ಸಿಸಿಯಲ್ಲಿದ್ದಾರೆ. ಕೆಎಫ್ ಸಿಸಿಯ ವಿವಿಧ ಸ್ಥಾನಗಳು ಸೇರಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಹಿರಿಯ ನಿರ್ಮಾಪಕರಾದ ಬಸಂತಕುಮಾರ್ ಪಾಟೀಲ್, ಕೆ ಜಾನಕಿ ರಾಮ್, ಬಿ ಎನ್ ಗಂಗಾಧರ್ ಹಾಗೂ ವಿ ಹೆಚ್ ಸುರೇಶ್ ನಡುವೆ ಅಧ್ಯಕ್ಷ ಗಾದಿಗೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಮೂರು ಉಪಾಧ್ಯಕ್ಷ ಹಾಗೂ ಮೂರು ಕಾರ್ಯದರ್ಶಿ ಸ್ಥಾನಗಳಿಗೆ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರ ವಲಯದಿಂದ ತಲಾ ಒಬ್ಬೊಬ್ಬರು ಸ್ಪರ್ಧಿಸಲಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಮುಳ್ಳಿನ ಮೇಲೆ ಸದಾ ತಾವು ಕೂತಿರುವುದು ಎಂದು ಕೆಲವು ತಿಂಗಳಿನಿಂದ ಹೇಳುತ್ತಲೇ ಬಂದಿದ್ದಾರೆ. ಮಂಡಳಿಯ ಪದಾಧಿಕಾರಿಗಳು ಮಾಡುವ ತರಲೆಗಳ ವಿಷಯದಲ್ಲಿ ತಿಪ್ಪೆ ಸಾರಿಸಿ ಸಾರಿಸಿ ಅವರಿಗೂ ಸಾಕಾಗಿದೆ.ಹಾಗಂತ ಆಪ್ತೇಷ್ಟರಲ್ಲಿ ಅವರೇ ಹೇಳಿಕೊಂಡಿದ್ದಾರೆ.

ಇರಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಹಲವಾರು ಸಮಸ್ಯೆಗಳು ತಾಂಡವ ನೃತ್ಯ ಮಾಡುತ್ತಿವೆ.ಕನ್ನಡ ಚಿತ್ರೋದ್ಯಮದ ರಕ್ತಹೀರುತ್ತಿರುವ ನಕಲಿ ಸಿಡಿಗಳ ಹಾವಳಿ, ಗೂಂಡಾ ನಿಷೇಧ ಕಾಯಿದೆಯನ್ನು ಸರಕಾರ ಜಾರಿಗೊಳಿಸಿದ್ದರು ಇನ್ನೂ ಅವ್ಯಾಹತವಾಗಿ ಈ ಪಿಡುಗು ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆ. ಇದಕ್ಕೆ ನಿಯಂತ್ರಣ ಹೇರುವಲ್ಲಿ ಕೆಎಫ್ ಸಿಸಿ ಶಕ್ತಿಮೀರಿ ಶ್ರಮಿಸಬೇಕಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada