»   »  ಐಂದ್ರಿತಾ ರೇ ಅಣ್ಣನಾಗಿ ಧೂಳ್ ಚಿತ್ರದಲ್ಲಿ ಪ್ರಕಾಶ್ ರೈ

ಐಂದ್ರಿತಾ ರೇ ಅಣ್ಣನಾಗಿ ಧೂಳ್ ಚಿತ್ರದಲ್ಲಿ ಪ್ರಕಾಶ್ ರೈ

Subscribe to Filmibeat Kannada

ಸರಿಸುಮಾರು ನಾಲ್ಕು ಸುದೀರ್ಘ ವರ್ಷಗಳ ಬಳಿಕ ಪ್ರಕಾಶ್ ರೈ (ಪ್ರಕಾಶ್ ರಾಜ್) ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ 'ಅಜಯ್' ಚಿತ್ರ ರೈ ಅಭಿನಯದ ಕೊನೆಯ ಕನ್ನಡ ಚಿತ್ರವಾಗಿತ್ತು. ತೆಲುಗಿನ ಸೂಪರ್ ಹಿಟ್ ಚಲನಚಿತ್ರ 'ಒಕ್ಕಡು' ಕನ್ನಡಕ್ಕೆ ಅಜಯ್ ಆಗಿ ರೀಮೇಕ್ ಆಗಿತ್ತು.

ಬೆಳಗ್ಗೆ ಚೆನ್ನ್ನೈ, ಮಧ್ಯಾಹ್ನ ಹೈದರಾಬಾದ್ ಸಂಜೆ ಮತ್ತೊಂದು ಕಡೆ...ಹೀಗೆ ಬಿಡುವಿಲ್ಲದೆ ಊರೂರು ಸುತ್ತಾಡುವಷ್ಟು ಬಿಜಿ ನಟ ಪ್ರಕಾಶ್ ರೈ. ಈ ಹಿಂದೆ ಅವರನ್ನು ಕನ್ನಡಕ್ಕೆ ಕರೆತರುವ ಹಲವಾರು ವಿಫಲ ಪ್ರಯತ್ನಗಳು ನಡೆದವು. ಅದ್ಯಾವುದೂ ಸಫಲವಾಗಲಿಲ್ಲ. ಕಡೆಗೆ ಪ್ರಕಾಶ್ ರೈ ಅವರನ್ನು ಕನ್ನಡಕ್ಕೆ ಕರೆತರುವಲ್ಲಿ ನಿರ್ದೇಶಕ ಧರಣಿ ಯಶಸ್ವಿಯಾಗಿದ್ದಾರೆ.

ಲೂಸ್ ಮಾದ ಖ್ಯಾತಿಯ ಯೋಗೀಶ್ ಮುಖ್ಯ ಪಾತ್ರದ 'ಧೂಳ್'ನಲ್ಲಿ ಪ್ರಕಾಶ್ ರೈ ಅಭಿನಯಿಸಲಿದ್ದಾರೆ. ತಮಿಳಿನ 'ತಿರುವಿಳೆಯಾಡಲ್ ಆರಂಭಮ್' ಚಿತ್ರದ ರೀಮೇಕ್ ಇದಾಗಿದೆ. ಮೂಲ ಚಿತ್ರದಲ್ಲೂ ಪ್ರಕಾಶ್ ರೈ ಅಭಿನಯಿಸಿದ್ದರು. ಚಿತ್ರದ ನಾಯಕಿ ಐಂದ್ರಿತಾ ರೇ ಅವರಿಗೆ ಅಣ್ಣನಾಗಿ ಪ್ರಕಾಶ್ ರೈ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಈ ಮೂಲಕ ಚಿಗರೆ ಕಂಗಳ ನಟಿ ಐಂದ್ರಿತಾ ರೇಗೆ ಹೊಸ ಅಣ್ಣ ಸಿಕ್ಕಂತಾಗಲಿದೆ.

ಧೂಳ್ ಚಿತ್ರದ ಮೂಲಕ ನಿರ್ದೇಶಕ ಧರಣಿ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ ವರನಟ ಡಾ.ರಾಜ್ ಕುಮಾರ್ ಅವರ ಜನಪ್ರಿಯ ಚಿತ್ರಗಳಲ್ಲಿ ಒಂದಾದ 'ನನ್ನ ನೀನು ಗೆಲ್ಲಲಾರೆ' ಚಿತ್ರದ 'ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೇ...' ಹಾಡನ್ನು ಬಳಸಿಕೊಳ್ಳಲಿದ್ದಾರೆ. ಆ ಚಿತ್ರದಲ್ಲಿ ಚಿ.ಉದಯ ಶಂಕರ್ ಸಾಹಿತ್ಯಕ್ಕೆ ಇಳಯರಾಜ್ ಸಂಗೀತ ಜುಗಲ್ ಬಂದಿಯಾಗಿತ್ತು. ರಾಜ್ ಮತ್ತು ಎಸ್.ಜಾನಕಿ ಅವರ ಕಂಠದಿಂದ ಹೊರಹೊಮ್ಮಿದ ಸುಮಧುರ ಗೀತೆಗಳಲ್ಲಿ ಅದೂ ಒಂದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada