»   »  ಹೂ ಚಿತ್ರಕ್ಕಾಗಿ ರು.50ಲಕ್ಷಕ್ಕೂ ಅಧಿಕ ವೆಚ್ಚದ ಸೆಟ್

ಹೂ ಚಿತ್ರಕ್ಕಾಗಿ ರು.50ಲಕ್ಷಕ್ಕೂ ಅಧಿಕ ವೆಚ್ಚದ ಸೆಟ್

Subscribe to Filmibeat Kannada

ಬೆಂಗಳೂರು ಉದ್ಯಾನನಗರಿ ಎಂದೇ ಪ್ರಸಿದ್ದವಾಗಿರುವ ನಗರ. ಉದ್ಯಾನ ಅಂದ ಮೇಲೆ 'ಹೂ' ಇರಲೇಬೇಕಲ್ಲವೇ? ಆದರೆ ಈ 'ಹೂ' ಮಲ್ಲಿಗೆ, ಜಾಜಿ, ಸೇವಂತಿಗೆಯಂತೂ ಅಲ್ಲವೇ ಅಲ್ಲ. 'ಪ್ರೇಮಲೋಕ ಚಿತ್ರದಿಂದ ಪ್ರೇಮಿಗಳ ಹೃದಯಕ್ಕೆ ಲಗ್ಗೆಯಿಟ್ಟು 'ರಣಧೀರ'ನಾಗಿ ಅಭಿಮಾನಿಗಳ ಪಾಲಿಗೆ 'ರಸಿಕ'ನೆಂದೇ ಖ್ಯಾತರಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿರುವ ಚಿತ್ರದ ಶೀರ್ಷಿಕೆ. ನಾಯಕನಾಗಿ ನಟಿಸುತ್ತಿರುವ ಅವರು ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ.

ರವಿಚಂದ್ರನ್ ಅವರು ಅಭಿನಯಿಸುತ್ತಿರುವ ಈ ಚಿತ್ರವನ್ನು ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ದಿನೇಶ್ ಗಾಂಧಿ ನಿರ್ಮಿಸುತ್ತಿದ್ದಾರೆ. ಹಿಂದೆ ನಿರ್ಮಾಪಕರು 'ವೀರ ಮದಕರಿ' ಚಿತ್ರವನ್ನು ನಿರ್ಮಿಸಿ ಖ್ಯಾತರಾದವರು. ರವಿಚಂದ್ರನ್ ಅವರಿಗೆ ಜೋಡಿಯಾಗಿ ಮೀರಾಜಾಸ್ಮಿನ್ ಹಾಗೂ ನಮಿತಾ ನಟಿಸುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್ ಹಾಗೂ ಶರಣ್ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲಿದ್ದಾರೆ.

ಜಿ.ಎಸ್.ವಿ.ಸೀತಾರಾಂ ಅವರ ಛಾಯಾಗ್ರಹಣವಿರುವ 'ಹೂ'ಚಿತ್ರದಲ್ಲಿ ಆರು ಹಾಡುಗಳು ಅಡಕವಾಗಿದೆ. ಈ ಸುಮಧುರ ಗೀತೆಗಳಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರಕ್ಕೆ 75ದಿನಗಳ ಚಿತ್ರೀಕರಣ ನಡೆಯಲಿದೆ. ಪ್ರಸ್ತುತ ನಗರದ ಅಬ್ಬಾಯಿನಾಯ್ಡು ಸ್ಟೂಡಿಯೋದಲ್ಲಿ ಕಲಾ ನಿರ್ದೇಶಕ ಇಸ್ಮಾಯಿಲ್ ಅವರಿಂದ ನಿರ್ಮಾಣವಾಗಿರುವ ಅದ್ದೂರಿ ಸೆಟ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ನಾಯಕಿಯ ವಾಸಸ್ಥಾನವಾಗಿರುವ ಈ ಗೃಹ ನಿರ್ಮಾಣಕ್ಕೆ ತಗಲಿರುವ ವೆಚ್ಚ ರು.50ಲಕ್ಷಕ್ಕೂ ಅಧಿಕ ಅಂತಾರೆ ನಿರ್ಮಾಪಕರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada