»   » ತಿಪ್ಪಾರಹಳ್ಳಿ ತರ್ಲೆಗಳು ಬರ್ತಿದ್ದಾರೆ ಹುಷಾರು!

ತಿಪ್ಪಾರಹಳ್ಳಿ ತರ್ಲೆಗಳು ಬರ್ತಿದ್ದಾರೆ ಹುಷಾರು!

Posted By:
Subscribe to Filmibeat Kannada

ಬರೋಬ್ಬರಿ ಎರಡುವರೆ ವರ್ಷಗಳ ನಂತರ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಬೆಳಕಿಗೆ ಬರುತ್ತಿದ್ದಾರೆ. ಅರ್ಥಾತ್ ಅವರ ನಿರ್ದೇಶನದ ಚಿತ್ರ 'ತಿಪ್ಪಾರಹಳ್ಳಿ ತರ್ಲೆಗಳು' ಚಿತ್ರ ಈ ವಾರ ತೆರೆಕಾಣುತ್ತಿದೆ. ಎಸ್ ನಾರಾಯಣ್, ಓಂ ಪ್ರಕಾಶ್ ರಾವ್, ಕೋಮಲ್ ಕುಮಾರ್ ಮುಖ್ಯಪಾತ್ರದಲ್ಲಿರುವ ಚಿತ್ರ.ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ.

ತಿಪ್ಪಾರಹಳ್ಳಿ ತರ್ಲೆಗಳು ಚಿತ್ರದ ಜೊತೆಗೆ ಸಿಂಗ್ ಬಾಬು ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ರತ್ನಜ ನಿರ್ದೇಶನದ ಪ್ರೇಮಿಸಂ ಸಹ ಈ ವಾರ ತೆರೆಗೆ ಅಪ್ಪ್ಪಳಿಸುತ್ತಿದೆ. ಒಟ್ಟಿನಲ್ಲಿ ಗುರು ಶಿಷ್ಯರ ಚಿತ್ರಗಳು ಬಾಕ್ಸಾಫೀಸಲ್ಲಿ ಸೆಣೆಸಲಿವೆ. ಒಂದು ಪ್ರೇಮಕತೆಯಾದರೆ ಮತ್ತೊಂದು ಹಾಸ್ಯಪ್ರಧಾನ ಚಿತ್ರ.

ಅಗಸ, ದರ್ಜಿ ಹಾಗೂ ಪೂಜಾರಿ ಪಾತ್ರಗಳ ಮೂಲಕ ಕಚಗುಳಿಯಿಡಲಿದೆ 'ತಿಪ್ಪಾರಹಳ್ಳಿ ತರ್ಲೆಗಳು'. 1981ರಲ್ಲಿ ತೆರೆಕಂಡ 'ಅಂತ' ಚಿತ್ರದ 'ಕನ್ವರ್ ಲಾಲ್' ಪಾತ್ರ ಮತ್ತೆ ತಿಪ್ಪಾರಹಳ್ಳಿ ತರ್ಲೆಗಳಲ್ಲಿ ಜೀವ ಪಡೆದುಕೊಳ್ಳಲಿದೆ. ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು ಮತ್ತು ಕತ್ತೆಗಳು ಸಾರ್ ಕತ್ತೆಗಳು ಚಿತ್ರಗಳ ಮಾದರಿಯ ಹಾಸ್ಯ ಪ್ರೇಕ್ಷಕರಿಗೆ ಸಿಗಲಿದೆ ಎನ್ನುತ್ತಾರೆ ಸಿಂಗ್ ಬಾಬು.

ಸಿಂಗ್ ಬಾಬು ಚಿತ್ರಗಳಲ್ಲಿ ಕತೆ ತುಂಬ ಸರಳವಾಗಿರುತ್ತದೆ. ಅರ್ಥಗರ್ಭಿತವಾಗಿ ಅದ್ಭುತ ಹಾಸ್ಯವನ್ನು ಅವರ ಚಿತ್ರಗಳಿಂದ ಪ್ರೇಕ್ಷಕರು ನಿರೀಕ್ಷಿಸಬಹುದು ಎನ್ನುತ್ತಾರೆ ಸಿಂಗ್ ಬಾಬು ಕ್ಯಾಂಪ್ ನಲ್ಲಿ ಪಳಗಿದ ಮತ್ತೊಬ್ಬ ನಿರ್ದೇಶಕ ಹಾಗೂ ನಟ ಎಸ್ ನಾರಾಯಣ್. ಒಟ್ಟಿನಲ್ಲಿ ಸುಂದರವಾದ, ರುಚಿಕಟ್ಟಾದ ಉಪ್ಪಿನಕಾಯಿ ತರಹ ಚಿತ್ರ ಇದೆ ಎಂಬುದು ಕೋಮಲ್ ಕುಮಾರ್ ಅವರ ಅಭಿಪ್ರಾಯ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada