»   » ಸಿನೆಮಾ ತಾರೆಯರಿಗೆ ವಸ್ತ್ರಸಂಹಿತೆ ? ಹೂಂ!

ಸಿನೆಮಾ ತಾರೆಯರಿಗೆ ವಸ್ತ್ರಸಂಹಿತೆ ? ಹೂಂ!

Posted By: Staff
Subscribe to Filmibeat Kannada

ಚಿತ್ರ ತಾರೆಯರಿಗೂ ಡ್ರೆಸ್ ಕೊಡಬೇಕಾ? ಅಂದ್ರೆ ಡ್ರೆಸ್ ಕೋಡ್ ಬೇಕಾಂತ? ಹೀಗೊಂದು ಚರ್ಚೆ ತಮಿಳುನಾಡಿನಲ್ಲಿ ಆರಂಭವಾಗಿದೆ. ಅಲ್ಲಿನ ವಿಧಾನಸಭೆಯಲ್ಲಿ ಆರಂಭವಾದ ಚರ್ಚೆ ಚಿತ್ರ ತಾರೆಯರಿಗೆ ಮಾತ್ರವಲ್ಲ ಸಾಕ್ಷಾತ್ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿಯವರಿಗೂ ಬಿಸಿ ಮುಟ್ಟಿಸಿದೆ. ಶಾಲಾಮಕ್ಕಳಿಗೆ, ಐಟಿ ಕಂಪನಿಗಳಲ್ಲಿ, ಹೋಗಲಿ ರಾಜಕಾರಣಿಗಳಿಗೂ ವಸ್ತ್ರಸಂಹಿತೆಯೆಂಬುದಿದೆ. ಸಂಹಿತೆ ಇಲ್ಲದಿರುವುದು ಸಾರ್ವಜನಿಕರಿಗೆ, ಅವರನ್ನು ಬಿಟ್ಟರೆ ಸಿನಿತಾರೆಯರಿಗೆ.

ತಮಿಳಿನ ಸೆಕ್ಸ್ ಬಾಂಬ್‌ಗಳಾದ ನಮಿತಾ ಮತ್ತು, 'ಶಿವಾಜಿ' ಚಿತ್ರ 200 ದಿನ ಆಚರಿಸಿದ ಸಂಭ್ರಮದಲ್ಲಿ ಮುಖ್ಯಮಂತ್ರಿಗಳೇ ನಾಚುವಂತೆ ವಸ್ತ್ರ ಧರಿಸಿ ಬಂದಿದ್ದ ಚಿತ್ರದ ನಾಯಕಿ ಶ್ರಿಯಾ, ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ, ಅಸಭ್ಯವೆನಿಸುವಂಥ ದಿರಿಸುಗಳಲ್ಲಿ ಕಾಣಿಸಿಕೊಂಡಿರುವುದು ತಮಿಳ್ನಾಡಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಪರ್ಯಾಸವೆಂಬಂತೆ ಕರುಣಾನಿಧಿ ಕುಟುಂಬದ ಒಡೆತನದ ಕಲೈಗ್ನಾರ್ ಟಿವಿಯಲ್ಲಿ ನಮಿತಾಳ ಅಸಭ್ಯವಾಗಿ ವಸ್ತ್ರ ಧರಿಸಿದ ಚಿತ್ರಗಳನ್ನು ಬಿತ್ತರಿಸುತ್ತಿರುವುದು ರಾಜಕಾರಣಿಗಳನ್ನು ಗರಮ್ಮಾಗಿಸಿದೆ.

ಮಲೇಶ್ಯಾದಲ್ಲಿ ಕುಚ ಟ್ರಾನ್ಸ್‌ಪ್ಲಾಂಟೇಷನ್ ಚಿಕಿತ್ಸೆ ಮಾಡಿಸಿಕೊಂಡು ಬಂದ ನಂತರ ಕುಗ್ಗಿದ್ದ ನಮಿತಾಳ ಬೇಡಿಕೆ ಈಗ ಮತ್ತೆ ಹಿಗ್ಗಿದೆ. ಚಿತ್ರಗಳಲ್ಲಿ ಮಾತ್ರವಲ್ಲ ಖಾಸಗಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಇತ್ತೀಚೆಗೆ ಆಕೆ ಹೆಚ್ಚಾಗಿ ಕಾಣಿಸಿಕೊಳ್ಳಹತ್ತಿದ್ದಾರೆ. 'ಮಾನದ ಮಯಿಲಾದ' ಡಾನ್ಸ್ ಕಾರ್ಯಕ್ರಮದಲ್ಲಿ ನಿರ್ಣಾಯಕಿಯಾಗಿದ್ದ ನಮಿತಾ ಧರಿಸಿದ್ದ ದಿರಿಸು ಈಗ ಕೆಂಗಣ್ಣಿಗೆ ಗುರಿಯಾಗಿದೆ. ಸಿನೆಮಾಗಳಲ್ಲಾದರೆ ಸೆನ್ಸಾರ್ ಮಂಡಳಿಯಿದೆ. ಆದರೆ, ಇಂಥ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯಾದರೂ ಸಭ್ಯವಾಗಿ ಬಟ್ಟೆ ಹಾಕಿಕೊಂಡು ಬರಬಾರದೇ? ಟಿವಿಗಳಲ್ಲಿಯೂ ಮೇಲಿಂದ ಮೇಲೆ ಇಂಥ ಚಿತ್ರಗಳು ಬಿತ್ತರವಾದರೆ ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದು ಪಿಎಂಕೆ ಪಕ್ಷದ ಮುಖ್ಯ ವಿಪ್ ವೇಲ್‌ಮುರುಗನ್ ಅವರ ಆರೋಪ. ಅಂತೂ, ಡ್ರೆಸ್ ಕೋಡ್ ವಿಷಯವನ್ನು ಚರ್ಚಿಸುವ ಸಲುವಾಗಿ ತಮಿಳುನಾಡಿನ ವಿಧಾನಸಭೆ ಒಂದು ಇಡೀ ದಿನದ ಕಲಾಪವನ್ನು ಮೀಸಲಾಗಿಟ್ಟದ್ದು ಆಧುನಿಕ ಮಹಾಭಾರತದ ಒಂದು ವಸ್ತ್ರಪರ್ವ ಎನ್ನಲಿಕ್ಕಡ್ಡಿಯಿಲ್ಲ.

ತೆರೆದೆದೆಯ ದಿರಿಸು ಧರಿಸದಿದ್ದರೆ ಕಾಸು ಹುಟ್ಟುವುದಿಲ್ಲ, ಕಾಸು ಬಿಸಾಕದಿದ್ದರೆ ಇಂಥ ದಿರಿಸುಗಳಲ್ಲಿ ನಟಿಯರು ಕಾಣಿಸಿಕೊಳ್ಳುವುದಿಲ್ಲ ಎನ್ನುವಂಥ ಸನ್ನಿವೇಶ ಸೃಷ್ಟಿಯಾಗಿದೆ. ಇದು ತಮಿಳುನಾಡಿನಲ್ಲಿ ಮಾತ್ರವಲ್ಲ ಇಡೀ ಭಾರತದ ಚಿತ್ರರಂಗದಲ್ಲಿ ಕಂಡುಬರುವಂತಹ ಸಂಗತಿ. ಇಲ್ಲಿ ಚರ್ಚೆಗೆ ಹೆಸರು ಬಂದಿರುವುದು ನಮಿತಾ ಮತ್ತು ಶ್ರಿಯಾ ಮಾತ್ರ. ಉಳಿದ ಅನೇಕ ತಾರೆಯರೂ ಇದಕೆ ಹೊರತಲ್ಲ. ವಿಪರೀತ ಸ್ಪರ್ಧೆಯಿರುವ ಸಿನೆಮಾ ಕ್ಷೇತ್ರದಲ್ಲಿ ಸಭ್ಯಾತಿ ಸಭ್ಯ ನಟಿಮಣಿಯರೂ ಕ್ಯಾಬರೆ ಡ್ಯಾನ್ಸರ್‌ಗಳು ನಾಚುವಂತೆ ವಿಶೇಷವಾಗಿ ರೂಪಿಸಲಾಗಿರುವ ಬಟ್ಟೆಗಳನ್ನು ಹಾಕಲು ಶುರುಮಾಡಿದ್ದಾರೆ. ಹೇಳಿಕೇಳಿ ಥಳಕುಬಳುಕಿನ ಲೋಕ, ಸ್ವಲ್ಪ ಸೆಕ್ಸಿಯಾಗಿ ಕಂಡರೆ ತಪ್ಪೇನು ಎನ್ನುವುದು ಬಹುತೇಕ ಎಲ್ಲ ನಟಿಯರ ವಾದ. ಅಷ್ಟಕ್ಕೂ ತಮ್ಮನ್ನು ಇನ್ನೂ ಗ್ಲಾಮರಸ್ಸಾದ ಪಾತ್ರಗಳು ನೀಡಬೇಕೆಂದು ನಟಿಯರೇ ಕೇಳುತ್ತಿದ್ದಾರೆ.

ಬಣ್ಣದ ಲೋಕದ ಬೆಡಗಿಯರಿಗೆ ವಸ್ತ್ರಸಂಹಿತೆಯ ಕಾನೂನು ತರಬೇಕೆಂಬ ಕೂಗು ಒಂದೆಡೆಯಿಂದ ಎದ್ದಿದ್ದರೆ, ಗ್ಲಾಮರ್ ಇಲ್ಲದೆ ಜನರನ್ನು ಆಕರ್ಷಿಸುವುದು ಸಾಧ್ಯವೇ ಇಲ್ಲ ಎಂಬ ಇನ್ನೊಂದು ಕೂಡ ವಿಧಾನಸಭೆಯ ಮೊಗಸಾಲೆಯ ಮತ್ತೊಂದು ಮೂಲೆಯಿಂದ ಎದ್ದಿದೆ. ವಿವಿಐಪಿಗಳಿದ್ದ ಕಾರ್ಯಕ್ರಮದಲ್ಲಾದರೂ ಸಭ್ಯವಾಗಿ ಬಟ್ಟೆ ಧರಿಸುವಂತೆ ಅವರಿಗೆ ತಿಳಿಹೇಳಬಹುದು ಆದರೆ ಒತ್ತಡ ಹೇರಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೊನೆಗೂ ಉಳಿಯುವ ಪ್ರಶ್ನೆಯೆಂದರೆ, ನಕ್ಷತ್ರಗಳಿಗೆ ಕುಪ್ಪುಸ ಕೊಡುವವರು ಯಾರು? ಆಕಾಶಕ್ಕೆ ಸೀರೆ ಉಡಿಸುವವರು ಯಾರು?

Read more about: dress code, cine stars, film, movie, namitha
English summary
The Tamil Nadu assembly spent almost a day on debating whether the government should impose a dress code for actresses, after seeing the way Namitha and Shriya dresses at public functions. Should such a code be implemented? Discuss.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada