»   »  'ಕಬಡ್ಡಿ ಕನ್ನಡದಷ್ಟೇ ಅನಿವಾರ್ಯ' ನರೇಂದ್ರ ಬಾಬು

'ಕಬಡ್ಡಿ ಕನ್ನಡದಷ್ಟೇ ಅನಿವಾರ್ಯ' ನರೇಂದ್ರ ಬಾಬು

Subscribe to Filmibeat Kannada

'ಕಬಡ್ಡಿ' ಚಿತ್ರಕನ್ನಡ ಚಿತ್ರರಂಗದಲ್ಲಿ ಮತ್ತೊಂದು 'ಲಗಾನ್' ಹಾಗೂ 'ಛಕ್ ದೇ ಇಂಡಿಯಾ' ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎಂಬಉತ್ಸಾಹದಲ್ಲಿ ನಿರ್ದೇಶಕ ನರೇಂದ್ರ ಬಾಬು ಇದ್ದಾರೆ. ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆಯಲ್ಲಿ ನವಿರಾದ ಪ್ರೇಮಕಥೆಯೊಂದನ್ನು ಹೊಂದಿರುವ ಈ ಚಿತ್ರ ಜುಲೈ 3ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ನೈಜತೆಗಾಗಿಚಿತ್ರದಲ್ಲಿ ಕಬಡ್ಡಿ ಆಟಗಾರರಾದ ಬಿ ಸಿ ರಮೇಶ್, ನವೀನ್ ಮತ್ತು ವೆಂಕಟೇಶ್ ರನ್ನು ಬಳಸಿಕೊಂಡಿರುವುದು ವಿಶೇಷ.

ಭೂಗತ ಕಥಾಹಂದರದ ಚಿತ್ರಗಳಿಂದ ಬೇಸತ್ತು ಎಂಟು ವರ್ಷಗಳ ಹಿಂದೆ ಕಬಡ್ಡಿ ಚಿತ್ರ ಮಾಡಲು ರಮೇಶ್ ರೊಂದಿಗೆ ಚರ್ಚಿಸಿದ್ದೆ. ಹೊಸ ತಂಗಾಳಿಯಂತೆ ಕಬಡ್ಡಿ ಈಗ ತೆರೆಕಾಣುತ್ತಿದೆ ಎನ್ನುತ್ತಾರೆ ನಿರ್ದೇಶಕ ನರೇಂದ್ರ ಬಾಬು. ಅಂದಹಾಗೆ ರಮೇಶ್ ಅವರು ಅರ್ಜುನ ಪ್ರಶಸ್ತಿ ವಿಜೇತರು.

ಕ್ರಿಕೆಟ್ ಆಟಕ್ಕಿರುವಷ್ಟು ಕ್ರೇಜ್ ಕಬಡ್ಡಿಗಿಲ್ಲ ಎಂಬ ಮಾತು ನಿಜ. ಆದರೆ ಈಗಲೂ ಸಣ್ಣ ಪಟ್ಟಣಗಳಲ್ಲಿ, ದೊಡ್ಡ ನಗರಗಳಲ್ಲಿ ಕಬಡ್ಡಿಗೆ ಅದರದೇ ಆದ ಸ್ಥಾನಮಾನವಿದೆ. ಅದಕ್ಕಾಗಿಗೆ ಚಿತ್ರದ ಶೀರ್ಷಿಕೆಯನ್ನು 'ಕಬಡ್ಡಿ, ಕನ್ನಡದಷ್ಟೇ ಅನಿವಾರ್ಯ'' ಎಂದಿಟ್ಟಿದ್ದೇನೆ ಎನ್ನುತ್ತಾರೆ ನಿರ್ದೇಶಕರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಕಬಡ್ಡಿ ಕಣ್ಮರೆಯಾಗುತ್ತಿದ್ದು. ಅದನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮದು. ಚಿತ್ರ ತಡವಾಗಿ ಬಿಡುಗಡೆಯಾಗುತ್ತಿದೆ. ಇದಕ್ಕೆ ಹಣಕಾಸು ಕೊರತೆ ಕಾರಣವೆ? ಎಂದರೆ, ಕಬಡ್ಡಿಯಂತಹ ಕ್ರೀಡಾ ಪ್ರಧಾನವಾದ ಚಿತ್ರಕ್ಕೆ ವಿತರಕರು ಸಿಗುವುದು ಕಷ್ಟ. ನಾವು ಗೆಳೆಯರೆಲ್ಲಾ ಸೇರಿ 35 ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಮಂಡ್ಯದಲ್ಲಿ ಚಿತ್ರೀಕರಿಸಿದ್ದೇವೆ. ಸುಮಾರು 30,000 ಮಂದಿ ಕಬಡ್ಡಿಯನ್ನು ವೀಕ್ಷಿಸಿದರು. ಈ ಚಿತ್ರ ಕಬಡ್ಡಿ ಕ್ರೀಡೆ ಬಗ್ಗೆ ಹೊಸ ಉತ್ಸಹ ಮೂಡಿಸಲಿದೆ ಎಂಬ ನಂಬಿಕೆಯಲ್ಲಿ ನರೇಂದ್ರ ಬಾಬು ಇದ್ದಾರೆ. ನಶಿಸಿಹೋಗುತ್ತಿರುವ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಜನಪ್ರಿಯಗೊಳಿಸುವುದು ಈ ತಂಡದ ಮುಖ್ಯ ಉದ್ದೇಶ.

ವಿಸ್ತಾರ ಹಾಗೂ ಬಂಡಾಯದ ಅಡಿಯಲ್ಲಿ ಡಿ.ಕೆ. ರವಿ, ಕೆ. ರಾಜು. ಜಿ. ಕಿಶೋರ್ ಕುಮಾರ್, ಅನೂಪ್ ಗೌಡ, ಎನ್. ಆಶಾ, ಡಿ.ವಿ. ರಾಜೇಂದ್ರ ಪ್ರಸಾದ್ (ಡೊಡ್ಡಕುರುಗೋಡು) ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕನ್ನಡದಲ್ಲಿ ಹೊಸದೊಂದು ಪ್ರಯತ್ನ ಆಟವನ್ನು ಮೂಲವಾಗಿಟ್ಟುಕೊಂಡು ಚಿತ್ರವೊಂದನ್ನು ನಿರ್ಮಿಸಿದ್ದು, ಇದನ್ನು ಹೊಸಬರ ಚಿತ್ರವೆಂದು ಹೇಳಲು ಸಾಧ್ಯವೇ ಇಲ್ಲ ಎಂದು ಸೆನ್ಸಾರ್ ಮಂಡಳಿ ಮೆಚ್ಚುಗೆ ಸೂಚಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada