»   »  ಗಾಂಧಿನಗರದ ಬುದ್ಧಿಜೀವಿ ನಿರ್ದೇಶಕರು!

ಗಾಂಧಿನಗರದ ಬುದ್ಧಿಜೀವಿ ನಿರ್ದೇಶಕರು!

Posted By: *ಜಯಂತಿ
Subscribe to Filmibeat Kannada

''ನಾವೊಂದು ನಾಲ್ಕೈದು ಜನ ಸ್ವಮೇಕ್ ಸಿನಿಮಾ ಮಾಡಿಕೊಂಡು ಇದ್ದೇವೆ. ರೀಮೇಕ್ ಚಿತ್ರಗಳಿಗೆ ಪೂರ್ಣವಿರಾಮ ಹಾಕಿ, ನಮ್ಮದೇ ಸ್ವಂತ ಚಿತ್ರಗಳನ್ನು ಮಾಡುವ ಮನಸ್ಸು ನಿರ್ಮಾಪಕರಿಗೆ ಬರಬೇಕು. ನಮ್ಮಂಥ ಸೃಜನಶೀಲ ನಿರ್ದೇಶಕರನ್ನು ಉತ್ತೇಜಿಸುವ ನಿರ್ಮಾಪಕರ ಸಂಖ್ಯೆ ಹೆಚ್ಚಬೇಕು. ಇನಿಯ ಚಿತ್ರ ಅಂಥ ಒಂದು ಬದಲಾವಣೆಗೆ ಕಾರಣವಾಗುತ್ತದೆ ಎಂದು ಆಶಿಸುತ್ತೇನೆ...'' ಮುಸ್ಸಂಜೆ ಮಹೇಶ್ ಎಂಬ ನಿರ್ದೇಶಕ ವೇದಿಕೆ ಮೇಲೆ ಅತಿ ಭಾವುಕರಾಗಿ ಹೀಗೆಲ್ಲಾ ಮಾತಾಡಿದ್ದರು.

ಈಗ ಇನಿಯ ತೆರೆಕಂಡಿದೆ. ಚಿತ್ರದ ಮೊದಲರ್ಧದ ಅನೇಕ ದೃಶ್ಯಗಳನ್ನು ಅವರು 'ಅತುಡು' ತೆಲುಗು ಚಿತ್ರದಿಂದ ಎತ್ತಿಕೊಂಡಿದ್ದಾರೆ. ಅಷ್ಟೇ ಅಲ್ಲ, ರೀರೆಕಾರ್ಡಿಂಗ್ ಚಿತ್ರದ ಆತ್ಮ. ಹಾಗಾಗಿ ಚಿತ್ರದ ನಿಜವಾದ ಇನಿಯ ಶ್ರೀಧರ್ ಎಂದು ಸಂಗೀತ ನಿರ್ದೇಶಕರನ್ನೂ ಅವರು ವಾಚಾಮಗೋಚರವಾಗಿ ಹೊಗಳಿದ್ದರು. ತಮಾಷೆಯೆಂದರೆ "ಫ್ಯಾಷನ್" ಚಿತ್ರದ ಪ್ರಮುಖ ಸಂಗೀತವನ್ನು ಅವರು ಹಿನ್ನೆಲೆ ಸಂಗೀತದಲ್ಲಿ ವ್ಯಾಪಕವಾಗಿ ಬಳಸಿದ್ದಾರೆ. ಸೃಜನಶೀಲತೆಯ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾ, ಗಡ್ಡ ನೀವಿಕೊಳ್ಳುವ ಇವರನ್ನು ಗಾಂಧಿನಗರದ ಕೆಲವರು ಪ್ರತಿಭಾವಂತರು ಎಂದು ನಂಬಿದ್ದಾರೆ!

ಮಹೇಶ್ ಮಾತನ್ನು ಸ್ವಲ್ಪ ಝೂಮ್ ಹಾಕಿಕೊಂಡು ನೋಡೋಣ. ಕನ್ನಡದಲ್ಲಿ ಸ್ವಮೇಕ್ ಚಿತ್ರಗಳನ್ನು ಮಾಡುವ ನಿರ್ದೇಶಕರು ಯಾರು? ಯೋಗರಾಜ ಭಟ್, ಸೂರಿ, ಗುರುಪ್ರಸಾದ್, ನಾಗಶೇಖರ, ಮಗೇಶ್ ಕುಮಾರ್, ನರೇಂದ್ರ ಬಾಬು, ಪ್ರೇಮ್, ಸೈಕೋ ದೇವದತ್ತ, ಪ್ರೀತಮ್ ಗುಬ್ಬಿ, ರಾಜೇಂದ್ರ ಸಿಂಗ್ ಬಾಬು, ಮಹೇಶ್ ಸುಖಧರೆ, ಪಿ.ಎಚ್.ವಿಶ್ವನಾಥ್, ಭಾರ್ಗವ ಹೀಗೆ ಒಂದು ಒಂದೂವರೆ ಡಜನ್ ಹೆಸರುಗಳು ಸಿಕ್ಕಾವು.

ಯೋಗರಾಜ್ ಭಟ್‌ಗೆ ಒಂದು ಮಧುರ ಲಹರಿ ಸಿಕ್ಕಿದೆ. ಕಚ್ಚಾ ದೃಶ್ಯಗಳ ಪರಿಕಲ್ಪನೆಯ ಮೂಲಕ ಗಮನ ಸೆಳೆದ ಸೂರಿ "ಜಂಗ್ಲಿ" ಎಂಬ ಅಪಸವ್ಯದ ಸಿನಿಮಾ ಮಾಡಿಟ್ಟರು. ಗುರುಪ್ರಸಾದ್ ಮಾತು ನೆಚ್ಚಿಕೊಂಡಿದ್ದು, ಇಲ್ಲಿಯವರೆಗೆ ವರ್ಕ್‌ಔಟ್ ಆಗಿದೆ. ಮಗೇಶ್ ಕುಮಾರ್, ನಾಗಶೇಖರ್ ಮಾಡಿಟ್ಟುಕೊಂಡ ಸ್ಕ್ರಿಪ್ಟ್‌ಗಳನ್ನು ಒಂದೂವರೆ ವರ್ಷದಿಂದ ಅನೇಕರಲ್ಲಿ ಹೇಳಿಕೊಂಡಿದ್ದಾರೆ. ಅವಕಾಶ ಮಾತ್ರ ಸಿಕ್ಕಿಲ್ಲ.

ತಾಂತ್ರಿಕವಾಗಿ ಉತ್ತಮ ಚಿತ್ರ ಕೊಟ್ಟ ದೇವದತ್ತ ಹೆಸರು ಎಷ್ಟೋ ಜನರಿಗೆ ಮರೆತುಹೋಗಿದೆ. ಅವರ "ರನ್ನ" ಚಿತ್ರದ ಸ್ಕ್ರಿಪ್ಟ್‌ಗೆ ಯಾವಾಗ ಜೀವ ಬರುತ್ತದೋ ಗೊತ್ತಿಲ್ಲ. ಇನ್ನು ಉಳಿದ ಹಳಬರು ಸುಮ್ಮನಾಗಿದ್ದಾರೆ ಅಥವಾ ಅವರನ್ನು ಸಿನಿಮಾ ಮಾಡಿಕೊಡಿ ಎಂದು ಯಾವ ನಿರ್ಮಾಪಕರೂ ಕೇಳುತ್ತಿಲ್ಲ. ಗಿಮಿಕ್ ರಾಜ ಪ್ರೇಮ್ ಮಂಡ್ಯ ಭಾಷೆಯಲ್ಲಿ ಈಗಲೂ "ರಾಜ್" ಚಿತ್ರದ ಬಗ್ಗೆ ತಪ್ಪು ತಪ್ಪು ಅಂಕಿಅಂಶಗಳನ್ನು ಒದರುತ್ತಿದ್ದಾರೆ.

ಅದೇ ಇನ್ನೊಂದು ಕಡೆ ನೋಡಿ. ಸುದೀಪ್, ಮಾದೇಶ, ಪಿ.ಸತ್ಯ, ಕೆ.ಎಚ್.ವಾಸು, ಪಿ.ವಾಸು, ಓಂ ಸಾಯಿಪ್ರಕಾಶ್, ಎಸ್.ನಾರಾಯಣ್ ತರಹದವರು ಪುರುಸೊತ್ತೇ ಇಲ್ಲದಂತೆ ರೀಮೇಕ್ ಚಿತ್ರಗಳನ್ನು ಸುತ್ತುತ್ತಿದ್ದಾರೆ. ಇವರ ನಡುವೆ ಪ್ರಕಾಶ್, ಮಹೇಶ್ ಬಾಬು, ಇಂದ್ರಜಿತ್ ಅವರಂಥ ಕಿಚಡಿ ಚಿತ್ರಗಳ ನಿರ್ದೇಶಕರೂ ಬ್ಯುಸಿ. ಇವರೆಲ್ಲರ ಭರಾಟೆಯ ಮಧ್ಯೆ ರಮೇಶ್ ಅರವಿಂದ್ ನಟನೆ- ನಿರ್ದೇಶನದ ಪ್ಯಾಕೇಜ್ ಡೀಲ್ ಅನ್ನು ಆಗಾಗ ಕುದುರಿಸುತ್ತಿದ್ದಾರೆ.

ಚಾಲ್ತಿಯಲ್ಲಿರುವ ನಿರ್ದೇಶಕರ ಪೈಕಿ ಯೋಗರಾಜ್ ಭಟ್, ಸೂರಿ, ಗುರುಪ್ರಸಾದ್ ಬಿಟ್ಟರೆ ಮಿಕ್ಕವರದ್ದು ಗಿಮಿಕ್ಕುಗಳ ಮೆರವಣಿಗೆ. ಮಹೇಶ್ ಕೂಡ ಆ ಸಾಲಿಗೆ ಸೇರ್ಪಡೆಯಾಗಿದ್ದಾರಷ್ಟೆ. ಮುಸ್ಸಂಜೆ ಮಾತು ಚಿತ್ರ ಹಾಡುಗಳ ಮೂಲಕ ಸದ್ದು ಮಾಡಿತ್ತು. ಸುದೀಪ್-ರಮ್ಯಾ ಕಾಂಬಿನೇಷನ್ ವರ್ಕ್‌ಔಟ್ ಆಗಿತ್ತು. ಹಾಗಾಗಿ ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ ನಿರ್ಮಾಪಕ ಶೈಲೇಂದ್ರ ಬಾಬು ತಮಗೂ ಒಂದು ಸಿನಿಮಾ ಮಾಡಿಕೊಡುವಂತೆ ಮಹೇಶ್‌ಗೆ ಆಫರ್ ಕೊಟ್ಟರು.

ಬಹುಶಃ ತಲೆಯಲ್ಲಿ ಆಗ ಏನೂ ಸರಕಿರಲಿಲ್ಲವೋ ಏನೋ, ಮಹೇಶ್ ಶೈಲೇಂದ್ರ ಬಾಬು ಮೇಲೆ ಹೂವಿಟ್ಟಿದ್ದಾರೆ. ಚಿತ್ರ ಬಿಡುಗಡೆಯಾದ ಮೇಲೆ ಅವರು ನಿರ್ಮಾಪಕರ ಕಿವಿಮೇಲೆ ಇಟ್ಟಿರುವುದು ಲಾಲ್‌ಬಾಗ್ ಎಂಬುದು ಸ್ಪಷ್ಟವಾಗಿದೆ. "ಇನಿಯ" ಗೆದ್ದರೆ ರೀಮೇಕ್ ತಂಟೆಗೆ ಹೋಗುವುದಿಲ್ಲ ಎಂದಿದ್ದ ಶೈಲೇಂದ್ರ ಬಾಬು ಈಗ ಮತ್ತೆ ಬೇರೆ ಭಾಷೆ ಚಿತ್ರಗಳ ಸೀಡಿ ನೋಡುವ ಪರಿಸ್ಥಿತಿ ಬಂದಿರುವುದು ಮಾತ್ರ ವಿಪರ್ಯಾಸ.

ಅಂದಹಾಗೆ, ತಮ್ಮದೇ ಸಿನಿಮಾ ವ್ಯಾಕರಣವನ್ನು ಅದ್ಭುತ ಎಂದು ಬಣ್ಣಿಸಿಕೊಳ್ಳುವ ಬಿ.ಆರ್.ಕೇಶವ, ಆದರ್ಶ, ಓಂಪ್ರಕಾಶ್ ನಾಯಕ್, ಬರಗೂರು ರಾಮಚಂದ್ರಪ್ಪ ಒಂದಾದ ನಂತರ ಒಂದು ಸಿನಿಮಾ ಮಾಡುತ್ತಲೇ ಇದ್ದಾರೆ. ಅದನ್ನು ನೋಡುವವರು ಯಾರು ಎಂಬುದಷ್ಟೇ ಪ್ರಶ್ನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada