»   » ಈ ವಾರ ತೆರೆಗೆ 'ವಿಸ್ಮಯ'ದೊಂದಿಗೆ 'ಕಿರೀಟ' ಮತ್ತು 'ಆ ಎರಡು ವರ್ಷಗಳು'

ಈ ವಾರ ತೆರೆಗೆ 'ವಿಸ್ಮಯ'ದೊಂದಿಗೆ 'ಕಿರೀಟ' ಮತ್ತು 'ಆ ಎರಡು ವರ್ಷಗಳು'

Posted By:
Subscribe to Filmibeat Kannada

ಚಂದನವನದಲ್ಲಿ ಕಳೆದ ವಾರ ಬರೋಬರಿ ಏಳು ಸಿನಿಮಾಗಳು ಬಿಡುಗಡೆ ಆಗಿದ್ದವು. ಯಾವುದನ್ನು ನೋಡಿ ಯಾವ ಚಿತ್ರ ಬಿಡುವುದು ಎಂಬ ಗೊಂದಲ ಕನ್ನಡ ಸಿನಿ ಪ್ರಿಯರಿಗೆ ಎದುರಾಗಿತ್ತು. ಆದರೆ ಕಳೆದ ವಾರಕ್ಕಿಂತ ಈ ವಾರ ಬಿಡುಗಡೆ ಚಿತ್ರಗಳ ಸಂಖ್ಯೆ ಕಡಿಮೆ ಇದ್ದು, ನಾಲ್ಕು ಸಿನಿಮಾಗಳು ತೆರೆ ಕಾಣುತ್ತಿವೆ.

ಈ ವಾರ ಬಿಡುಗಡೆ ಆಗುತ್ತಿರುವ ನಾಲ್ಕು ಚಿತ್ರಗಳು ಸಹ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಟ್ರೈಲರ್ ಮೂಲಕ ಸಿನಿ ಪ್ರಿಯರಿಗೆ ಕುತೂಹಲ ಹೆಚ್ಚಿಸಿವೆ. ನಾಳೆ ಗಾಂಧಿನಗರಕ್ಕೆ ಕಾಲಿಡುತ್ತಿರುವ ಆ ನಾಲ್ಕು ಚಿತ್ರಗಳು ಯಾವುವು? ಆ ಚಿತ್ರಗಳ ವಿಶೇಷತೆ ಏನು ಎಂಬುದನ್ನು ತಿಳಿಯಲು ಮುಂದೆ ಓದಿರಿ..

'ವಿಸ್ಮಯ'

ಸ್ಯಾಂಡಲ್ ವುಡ್ ನಲ್ಲಿ ನಾಳೆ ಬಿಡುಗಡೆ ಆಗುತ್ತಿರುವ ಚಿತ್ರಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಚಿತ್ರ ಎಂದರೆ 'ವಿಸ್ಮಯ'. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮುಖ್ಯ ಭೂಮಿಕೆಯ ಈ ಚಿತ್ರ ಅವರ 150 ನೇ ಸಿನಿಮಾ ಆಗಿದ್ದು, ಕಂಪ್ಲೀಟ್ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಎಂಬುದು ವಿಶೇಷ.

ಅರ್ಜುನ್ ಸರ್ಜಾಗೆ ಶ್ರುತಿ ಹರಿಹರನ್ ಜೋಡಿ

ಬಹುಭಾಷಾ ಖ್ಯಾತ ನಟ ಅರ್ಜುನ್ ಸರ್ಜಾ ಅವರೊಂದಿಗೆ ನಟಿ ಶ್ರುತಿ ಹರಿಹರನ್ ಜೊತೆಯಾಗಿ ನಟಿಸಿದ್ದಾರೆ. 'ವಿಸ್ಮಯ' ಚಿತ್ರ ಏಕ ಕಾಲದಲ್ಲಿ ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ತಮಿಳಿನಲ್ಲಿ 'ನಿಬುನನ್' ಎಂದು ಹೆಸರಿಡಲಾಗಿದೆ. ಅರುಣ್ ವೈದ್ಯನಾಥನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಎಸ್.ನವೀನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ಯಾಷನ್ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ನಟಿ ಸುಧಾರಾಣಿ, ಸುಹಾಸಿನಿ, ಸುಮನ್ ರವರು ನಟಿಸಿದ್ದಾರೆ. ಕನ್ನಡದವರೇ ಆದ ಆನಂದ ರಾಘವನ್ ಸ್ಕ್ರೀನ್ ಪ್ಲೇ ಚಿತ್ರಕ್ಕಿದೆ.

'ಆ ಎರಡು ವರ್ಷಗಳು'

ಎರಡು ಯುವ ಮನಸ್ಸುಗಳ ನಡುವಿನ ಪ್ರೀತಿ, ಸಾಮರಸ್ಯಗಳ ಕುರಿತ, ಕೇಳಲು ಮಜವಾದ ಸಂಭಾಷಣೆಯುಳ್ಳ ಸಿನಿಮಾ 'ಆ ಎರಡು ವರ್ಷಗಳು'. ಟ್ರೈಲರ್ ನಲ್ಲೇ ಚಿತ್ರ ಅತ್ಯುತ್ತಮ ಮನರಂಜನೆ ನೀಡುವ ಭರವಸೆ ನೀಡಿದೆ. ಈ ಚಿತ್ರದಲ್ಲಿ ಕಪಲ್ಸ್ ಗಳಾಗಿ 'ಅನುರೂಪ' ಧಾರಾವಾಹಿಯಲ್ಲಿ ನಟಿಸಿದ್ದ ರೇಣು ಮಠದ ಮತ್ತು ಮಂಗಳೂರು ಹುಡುಗಿ ಅಮಿತಾ ಕುಲಾಳ್ ನಾಯಕಿ ಆಗಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಕಿರುತೆರೆ ಧಾರಾವಾಹಿ ನಿರ್ದೇಶಕ ಮಧುಸೂಧನ್ ಆಕ್ಷನ್ ಕಟ್ ಹೇಳಿದ್ದಾರೆ. ಅಭಿಮತ ಪ್ರೊಡಕ್ಷನ್ಸ್ ಅಡಿಯಲ್ಲಿ ರಿಷಿಕಾ ಮಧುಸೂಧನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ರವಿ ಕಿಶೋರ್ ಛಾಯಾಗ್ರಹಣ, ಅಕ್ಷಯ್ ಸಂಕಲನ ಚಿತ್ರಕ್ಕಿದೆ.

'ಕಿರೀಟ'

ನವ ನಿರ್ದೇಶಕ ಕಿರಣ್ ಚಂದ್ರ ನಿರ್ದೇಶನದ ಕಂಪ್ಲೀಟ್ ಎಂಟರ್‌ಟೈನ್‌ಮೆಂಟ್ 'ಕಿರೀಟ' ಚಿತ್ರವು ಈ ವಾರ ತೆರೆಕಾಣುತ್ತಿದೆ. ಪಂಚಿಂಗ್ ಡೈಲಾಗ್‌ಗಳು, ಮೈನವಿರೇಳಿಸುವ ಫೈಟಿಂಗ್ ಇರುವ ಟ್ರೈಲರ್ ನೋಡಿ ಪ್ರೇಕ್ಷಕರು ಈ ಚಿತ್ರದ ಕಡೆಗೂ ಹೆಚ್ಚು ಆಕರ್ಷಿತರಾಗಿದ್ದಾರೆ. ಸಮರ್ಥ ಹೆಸರಿನ ಹೊಸ ಪ್ರತಿಭೆ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ದೀಪ್ತಿ ಕಾಪ್ಸೆ, ಲೇಖಾ ಚಂದ್ರ, ರಿಶಿಕಾ ಸಿಂಗ್ ರವರು ನಾಯಕ ನಟಿಯರಾಗಿ ಕಾಣಿಸಿಕೊಂಡಿದ್ದಾರೆ. ಉಗ್ರಂ ಮಂಜು ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಂದ್ರಶೇಖರ್ ನಿರ್ಮಾಣದ ಈ ಚಿತ್ರಕ್ಕೆ ಪರಮೇಶ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಶಮೀರ್ ಕುಲಕರ್ಣಿ ಸಂಗೀತವಿದೆ.

ಸ್ನೇಹಚಕ್ರ

ಸುರೇಶ್ ಕುಮಾರ್ ನಿರ್ಮಾಣದ, ಮಂಜು ವಿಷ್ಣುವರ್ಧನ್ ನಿರ್ದೇಶನದ 'ಸ್ನೇಹಚಕ್ರ' ಚಿತ್ರವು ಈ ವಾರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ವಿಜಯ್ ವೆಂಕಟ್ ಮತ್ತು ಅನ್ವಿತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, 'ಎ ಫ್ಯಾನ್ ಆಫ್ ಪವರ್ ಸ್ಟಾರ್' ಎಂದು ಚಿತ್ರದ ಅಡಿಕೆ ಶೀರ್ಷಿಕೆ ನೀಡಲಾಗಿದೆ. ರಾಜ್ ಭಾಸ್ಕರ್ ರವರು ಸಂಗೀತ ಸಂಯೋಜನೆ ಚಿತ್ರಕ್ಕಿದೆ.

English summary
Actor Arjun Sarja Starrer 'Vishmay', Samartha Starrer 'Kireeta' and 'Anuroopa' Sereial fame Renu Matadha starrer 'Aa Eradu Varshagalu', Vijay Venkat's 'SnehaChakra' movies are releasing on July 28th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada