For Quick Alerts
  ALLOW NOTIFICATIONS  
  For Daily Alerts

  ಅಮ್ಮನ ದಿನಕ್ಕಾಗಿ ಟಿಎನ್ ಸೀತಾರಾಂ ನೆನಪುಗಳು

  By Rajendra
  |

  ಹೆಸರಾಂತ ನಿರ್ದೇಶಕ, ಬರಹಗಾರ, ಕಿರುತೆರೆ ವೀಕ್ಷಕರ ಮೆಚ್ಚಿನ ಲಾಯರ್, ಬಹುಮುಖಿ ಪ್ರತಿಭೆ ಟಿ.ಎನ್ ಸೀತಾರಾಮ್ ಅವರ ಬದುಕಿನಲ್ಲಿ ನಡೆದ ಕಹಿ ಘಟನೆ ಇದು. ಬಹುಶಃ ಅಂದು ರಾತ್ರಿ ಅವರ ತಾಯಿ ಮಗನಿಗೆ ಧೈರ್ಯ ತುಂಬದಿದ್ದರೆ ಇಂದು ಅವರನ್ನು ನಾವ್ಯಾರೂ ನೋಡಲು ಸಾಧ್ಯವಾಗುತ್ತಿರಲಿಲ್ಲವೇನೋ.

  ಸೀತಾರಾಮ್ ಅವರ ಬದುಕಿನಲ್ಲಿನ ಕಹಿ ಅಧ್ಯಾಯವಿದು. ಅವರ ಬದುಕಿನಲ್ಲಿ ನಡೆದ ಘೋರ ಸತ್ಯವಿದು. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಅವರೇ ಬರೆದುಕೊಂಡು ಕೊಂಚ ನಿರಾಳರಾಗಿದ್ದಾರೆ. ಓದುತ್ತಿದ್ದರೆ ನಿಮ್ಮ ಕಣ್ಣಾಲಿಗಳು ತುಂಬಿ ಬರದಿದ್ದರೆ ಕೇಳಿ. [ತಂದೆ ಸಾವಿಗೆ ಪರೋಕ್ಷ ಕಾರಣನಾದೆ: ಟಿಎನ್ ಸೀತಾರಾಮ್]

  "Mother-that was the bank where we deposited all our hurts and worries" ಎಂಬ ಮಾತೊಂದಿದೆ. ಈಗ ತಾಯಂದಿರನ್ನು ನೆನೆಯುವ ದಿನ ಮತ್ತೆ ಬಂದೇ ಬಂದಿದೆ. ಇದೇ ಮೇ.10ರಂದು ವಿಶ್ವ ಅಮ್ಮಂದಿರ ದಿನ. ಈ ಸಂದರ್ಭದಲ್ಲಿ ಸೀತಾರಾಮ್ ಅವರ ತಾಯಿ ತಮ್ಮ ಮಗನಿಗೆ ಧೈರ್ಯ ತುಂಬಿದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಓವರ್ ಟು ಸೀತಾರಾಮ್...

   ಬದುಕಿನ ಬಗ್ಗೆಯೇ ದ್ವೇಷ ಬಂದುಬಿಟ್ಟಿತ್ತು

  ಬದುಕಿನ ಬಗ್ಗೆಯೇ ದ್ವೇಷ ಬಂದುಬಿಟ್ಟಿತ್ತು

  ಅವತ್ತು ಏಕೋ ಬದುಕಿನ ಬಗ್ಗೆಯೇ ದ್ವೇಷ ಬಂದುಬಿಟ್ಟಿತ್ತು...ಅದೊಂದು ಬೇಸಿಗೆಯ ಹುಣ್ಣಿಮೆ ರಾತ್ರಿ...ನಾವು ಆಗ ಗೌರಿಬಿದನೂರಿನ ನಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದೆವು...ನನ್ನ ತಂದೆ ಸತ್ತಾಗ ನನಗೆ 19 ವರ್ಷ..(ಅವರಿಗೂ ಕೂಡ ಸಾಯುವ ವಯಸ್ಸಲ್ಲ--56 ವರ್ಷ...ಅವರು ಸತ್ತ ಬಗೆಯೇ ನನ್ನ ಬದುಕಿನ ಒಂದು ದುರಂತ ಅಧ್ಯಾಯ...ಅದನ್ನು ಎಂದಾದರೂ ಹೇಳುತ್ತೇನೆ).

  ವ್ಯವಹಾರದಲ್ಲಿ ಜಾಣನಲ್ಲದ ನಾನು

  ವ್ಯವಹಾರದಲ್ಲಿ ಜಾಣನಲ್ಲದ ನಾನು

  ನಾನು ದೊಡ್ಡ ಮಗನಾದರಿಂದ ಇಡೀ ಸಂಸಾರದ ಜವಾಬ್ದಾರಿಯನ್ನು ನಾನು ಹೊರಬೇಕಾಯಿತು...ವ್ಯವಹಾರದಲ್ಲಿ ಜಾಣನಲ್ಲದ ನಾನು... ಪ್ರಾಕ್ಟೀಸ್ ಇಲ್ಲದ ಲಾಯರ್...ಮತ್ತು ಸದಾ ಕಷ್ಟದಲ್ಲಿರುವ ರೈತ ಇವೆಲ್ಲಾ ಆಗಿದ್ದುದರಿಂದ ಆಗುತ್ತಿದ್ದ ನಿರಂತರ ನಷ್ಟಗಳಿಂದಾಗಿ ಮನೆಯವರನ್ನು ಯಾವಾಗಲೂ ಕಷ್ಟಕ್ಕೆ ಈಡು ಮಾಡುತ್ತಿದ್ದೆ...ಇದಕ್ಕಾಗಿ ನನ್ನನ್ನು ಸದಾ ಪಾಪಪ್ರಜ್ಞೆ ಕಾದುತ್ತಿತ್ತು.

  ಹತ್ತಿ ಬೆಳೆ ಕೈಕೊಡ್ತು, ಉಳಿದದ್ದು ಮಾವಿನ ಫಸಲಿನ ಭರವಸೆ

  ಹತ್ತಿ ಬೆಳೆ ಕೈಕೊಡ್ತು, ಉಳಿದದ್ದು ಮಾವಿನ ಫಸಲಿನ ಭರವಸೆ

  ಆ ವರ್ಷವಂತೂ ಹೆಚ್ಚು ದುಡ್ಡು ಸಂಪಾದಿಸುವ ಆಸೆಯಿಂದ ಕಬ್ಬಿನ ಬದಲು 4 ಎಕರೆಯಲ್ಲಿ ಹತ್ತಿ ಹಾಕಿದ್ದೆ...ಬೆಳೆ ನೋಡಿದವರೆಲ್ಲ ಕನಿಷ್ಟ 50 ಸಾವಿರ ಹುಟ್ಟುತ್ತದೆ ಎಂದು ಅಂದಾಜು ಮಾಡಿದ್ದರು. 50 ಸಾವಿರ ಬಂದರೆ ಎರಡು ವರ್ಷ ಸುಖವಾಗಿರುವ ಆಸೆ...ಹತ್ತಿ ಕುಯ್ಲು ಮಾಡಿ ಲಾರಿ ಯಲ್ಲಿ ರಾಯಚೂರಿಗೆ ಕಳಿಸಿದಾಗ ಹುಟ್ಟಿದ್ದು ಬರೀ 2800 ರೂಪಾಯಿ...ಲಾರಿ ಬಾಡಿಗೆ 1500 ಹೊರಟು ಹೋಯಿತು...ಬ್ಯಾಂಕ್ ನಲ್ಲಿ 9 ಸಾವಿರ ಬೆಳೆ ಸಾಲ ಮಾಡಿದ್ದೆ....ನಮಗೆ ಉಳಿದದ್ದ್ದು ಮಾವಿನ ಫಸಲಿನ ಭರವಸೆ ಮಾತ್ರ.

  ಇದ್ದಕ್ಕಿದ್ದ ಹಾಗೆ ಜೋರು ಗಾಳಿ ಮಳೆ

  ಇದ್ದಕ್ಕಿದ್ದ ಹಾಗೆ ಜೋರು ಗಾಳಿ ಮಳೆ

  ನಮ್ಮ ಮನೆಯ ಸುತ್ತ 160 ಮಾವಿನ ಮರಗಳಿದ್ದವು...ಪ್ರತಿ ವರ್ಷ ಅದರ ಫಸಲು ಸುಮಾರು 15 ಸಾವಿರ ಬರುತ್ತಿತ್ತು....ಅವತ್ತಿನ ವೇಳೆಗೆ ಎಲ್ಲ ಮರಗಳ ತುಂಬಾ ಚೆನ್ನಾಗಿ ಕಾಯಿ ಬಿಟ್ಟು ತೂಗಾಡುತ್ತಿತ್ತು...ಆ ಹುಣ್ಣಿಮೆಯ ದಿನ ಮಧ್ಯಾನ್ಹ ಇದ್ದಕ್ಕಿದ್ದ ಹಾಗೆ ಜೋರು ಗಾಳಿ ಮಳೆ 2 ಗಂಟೆ ಕಾಲ ಹೊಡೆಯಿತು...ಮಳೆ ನಿಂತಾಗ ನೋಡಿದರೆ ಎಲ್ಲಾ ಕಾಯಿಗಳೂ ಉದುರಿ ಹೋಗಿದ್ದವು.

  ಎದೆಯಲ್ಲಿ ಬೆಂಕಿಯಂತೆ ಕೂತಿದ್ದ ನೋವು

  ಎದೆಯಲ್ಲಿ ಬೆಂಕಿಯಂತೆ ಕೂತಿದ್ದ ನೋವು

  ನಮ್ಮಕ್ಕ ಮೊಳಕಾಲ್ಮೂರಿನಿಂದ ಮೂರು ಮಕ್ಕಳ ಸಮೇತ ಬಂದಿದ್ದರು..ತಂಗಿ ಕೂಡ ಗೋವದಿಂದ ಬಂದಿದ್ದಳು...ಎಲ್ಲರೂ ಕಣ್ಣಲ್ಲ್ಲಿ ನೀರು ತುಂಬಿಕೊಂಡು ಮೌನವಾಗಿ ಓಡಾಡುತ್ತಿದ್ದರು..ನನಗೆ ತಲೆ ಪೂರ್ತಿ ಕೆಟ್ತಂತೆ ಆಗಿತ್ತು..ಬದುಕಲು ಬೇಕಾಗುವಷ್ಟು ಸಾಲ ಎಲ್ಲೂ ಸಿಗುವ ಸಂಭವ ಇರಲಿಲ್ಲ....ಇದರ ಜತೆಗೆ ಸ್ವಂತ ಬದುಕಿನ ಒಂದು ಹೊಸ ಗಾಯ ನೋವು ಕೊಡುತ್ತಾ ಎದೆಯಲ್ಲಿ ಬೆಂಕಿಯಂತೆ ಕೂತಿತ್ತು. ಎಲ್ಲಾ ಸೇರಿ ಮಧ್ಯ ರಾತ್ರಿಯ ವೇಳೆಗೆ ಬದುಕಿನ ಬಗ್ಗೆಯೇ ದ್ವೇಷ ಹುಟ್ಟಿಬಿಟ್ಟಿತ್ತು.

  ಟೇಬಲ್ ಡ್ರಾಯರ್ ನಿಂದ ಸಯನೈಡ್ ತೆಗೆದೆ

  ಟೇಬಲ್ ಡ್ರಾಯರ್ ನಿಂದ ಸಯನೈಡ್ ತೆಗೆದೆ

  ರಾತ್ರಿ ಒಂದು ಗಂಟೆ. ಇನ್ನು ಮಲಗಲು ಸಾಧ್ಯವಿರಲಿಲ್ಲ...ಗೆಳೆಯ ವಿ.ಕೆ.ಸುಬ್ರಮಣ್ಯನ ಹತ್ತಿರ ಯಾವುದೋ ಕುತೂಹಲಕ್ಕೆಂದು ತರಿಸಿದ್ದ ಸ್ವಲ್ಪ ಸಯನೈಡ್ ಅನ್ನು ಟೇಬಲ್ ಡ್ರಾಯರ್ ನಿಂದ ತೆಗೆದೆ..( ಸುಬ್ರಮಣ್ಯ ಅಲ್ಲೇ ನ್ಯಾಷನಲ್ ಕಾಲೇಜ್ ನಲ್ಲಿ chemistry head of the Department ಆಗಿದ್ದ...ಕಡೆಗೆ ಅವನು ಸಯನೈಡ್ ತಿಂದೇ ಸತ್ತುಹೋದ..)...ಅದನ್ನ್ನೂ ತೆಗೆದುಕೊಂಡು ಆಚೆ ಬಂದೆ...ಹಾಲಿನಲ್ಲಿ ಎಲ್ಲರೂ ಸಾಲಾಗಿ ಮಲಗಿದ್ದರು...ಮನೆಯ ಆಚೆ ಒಂದು ಸಿಮೆಂಟ್ ಕಟ್ಟೆ ಇತ್ತು. ಅದರ ಮೇಲೆ ಕೂತೆ.

  ಬದುಕನ್ನು ಮುಗಿಸಿಕೊಂಡರೆ ನಿರಾಳ ಅನ್ನಿಸಿತು

  ಬದುಕನ್ನು ಮುಗಿಸಿಕೊಂಡರೆ ನಿರಾಳ ಅನ್ನಿಸಿತು

  ಮಳೆಯ ನಂತರದ ಹೊಳೆಯುವ ಬೆಳದಿಂಗಳು....ಪಕ್ಕದಲ್ಲಿ ಕಾಲುವೆಯಲ್ಲಿ ನೀರು ಹರಿಯುತ್ತಿತ್ತು..ಹಾಗೇ ಯೋಚನೆ ಮಾಡುತ್ತಾ ಕೂತೆ.. ಅರ್ಧಘಂಟೆ ಕೂತಿರಬಹುದು..ಎಷ್ಟು ವರ್ಷ ದುಡಿದರೂ ನೀಗದ ಕಷ್ಟ ಅನ್ನಿಸತೊಡಗಿತು...ತಳವಿಲ್ಲದ ಪಾತಾಳದಂಥ ಭಾವಿಯಲ್ಲಿ ಬಿದ್ದಿದ್ದೇನೆ ಅನ್ನಿಸ ತೊಡಗಿತು... ಬದುಕನ್ನು ಮುಗಿಸಿಕೊಂಡರೆ ನಿರಾಳ ಅನ್ನಿಸಿತು..ತಂದಿದ್ದ ವಿಷವನ್ನು ಬಾಯಲ್ಲಿ ಹಾಕಿಕೊಳ್ಳಲು ನಿರ್ಧರಿಸಿದೆ.

  ಇದ್ದಕ್ಕಿದ್ದ ಹಾಗೇ ಪಕ್ಕದಲ್ಲಿ ಯಾರೋ ಕೂತಂತೆ

  ಇದ್ದಕ್ಕಿದ್ದ ಹಾಗೇ ಪಕ್ಕದಲ್ಲಿ ಯಾರೋ ಕೂತಂತೆ

  ಆಗ ಇದ್ದಕ್ಕಿದ್ದ ಹಾಗೇ ಪಕ್ಕದಲ್ಲಿ ಯಾರೋ ಕೂತಂತೆ ಆಯಿತು..ನೋಡಿದರೆ ನನ್ನ ಅಮ್ಮ...ನನ್ನ ಕೈಯನ್ನು ತನ್ನ ಕೈಯಲ್ಲಿ ಇರಿಸಿಕೊಂಡರು...ನನ್ನ ಮನಸಿನಲ್ಲಿ ಇದ್ದದ್ದು ಅಮ್ಮನಿಗೆ ಗೊತ್ತಾಗಿ ಹೋಗಿತ್ತು..ಅಮ್ಮ ಹೇಳಿದರು "ಯಾಕೆ ಕಂದಾ ಇಂಥ ಕೆಟ್ಟ ಯೋಚನೆ..ನಿನಗೆ ಏನಾದರೂ ಆದರೆ ನಾನು ಬದುಕುತ್ತೇನಾ... ಬೇಡಪ್ಪ... ಅಷ್ಟು ಕಷ್ಟ ಆದರೆ ಈ ಜಮೀನು ಮಾರಿಬಿಡೋಣ.. ನಿನಗಿಂತ ದೊಡ್ಡದು ಯಾವುದೂ ಅಲ್ಲ...ಇದಕ್ಕಿಂತ ನೂರು ಪಟ್ಟು ಕಷ್ಟ ಬಂದಿರೋರು ಲಕ್ಷಾಂತರ ಜನ ಇದ್ದಾರೆ ಕಂದಾ...ನೋಡು.

   ಅಮ್ಮನ ಕಣ್ಣಲ್ಲಿ ದೈನ್ಯತೆ ಇತ್ತು

  ಅಮ್ಮನ ಕಣ್ಣಲ್ಲಿ ದೈನ್ಯತೆ ಇತ್ತು

  ಈಗ ಸದ್ಯಕ್ಕೆ ಇದನ್ನು ಮಾರಿದರೆ ಸ್ವಲ್ಪ ನಿರಾಳ ಆಗಬಹುದು.." ಎಂದು ಕರ್ಚೀಫ಼್ ನಲ್ಲಿ ಗಂಟು ಹಾಕಿದ್ದ ತಮ್ಮ ಒಡವೆಗಳನ್ನು ನನ್ನ ಕೈಯಲ್ಲಿ ಇಟ್ಟು ಕೈ ಮುಗಿದರು... ಅವರ ಕಣ್ಣಲ್ಲಿ ದೈನ್ಯತೆ ಇತ್ತು.. ನನ್ನ ಕಣ್ಣು ತುಂಬಿ ಬಂತು...ನಂತರ ಕಷ್ಟಗಳು ಬಂದಾಗೆಲ್ಲಾ ಅಮ್ಮನ ಅವತ್ತಿನ ಮುಖ ನೆನಪು ಬಂದು ಮತ್ತೆ ಭರವಸೆ ಮೂಡುತ್ತದೆ.

  ನಿನ್ನೆಯಂತೆ ಅವತ್ತು ಕೂಡ ಬುದ್ಧ ಪೂರ್ಣಿಮೆ

  ನಿನ್ನೆಯಂತೆ ಅವತ್ತು ಕೂಡ ಬುದ್ಧ ಪೂರ್ಣಿಮೆ

  ಮಧ್ಯಾಹ್ನ ಯಾವುದೋ ಚ್ಯಾನಲ್ ನಲ್ಲಿ "ತಾಯಿ ದೇವಿಯನು ಕಾಣೆ ಹಂಬಲಿಸಿ......" ಹಾಡು ಬರುತ್ತಿತ್ತು..ನನಗೆ ಪ್ರಿಯವಾದ ಹಾಡು...ಅದನ್ನು ಕೇಳಿ ಇದೆಲ್ಲಾ ನೆನಪು ಬಂತು...ನಿನ್ನೆಯಂತೆ ಅವತ್ತು ಕೂಡ ಬುದ್ಧ ಪೂರ್ಣಿಮೆ. [ಸೀತಾರಾಮ್ ಫೇಸ್ ಬುಕ್ ಪುಟಕ್ಕೆ ದಾರಿ]

  English summary
  Mother's day special article: A prominent Indian Kannada film and TV serial director, actor and screenwriter T. N. Seetharam remembers his past and bitter days in his life. He feels the pinch in his life. How he get off the hook? Read the heart rendering story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X