»   » ಹೃದಯಾಘಾತದಿಂದ ನಟ ಫರೂಕ್ ಶೇಖ್ ದುಬೈನಲ್ಲಿ ನಿಧನ

ಹೃದಯಾಘಾತದಿಂದ ನಟ ಫರೂಕ್ ಶೇಖ್ ದುಬೈನಲ್ಲಿ ನಿಧನ

Posted By:
Subscribe to Filmibeat Kannada

ದುಬೈ, ಡಿ. 28 : ಬಾಲಿವುಡ್ ಕಂಡ ಅತ್ಯಂತ ಪ್ರತಿಭಾವಂತ ಮತ್ತು ಸ್ಫುರಧ್ರುಪಿ ನಟರಲ್ಲಿ ಒಬ್ಬರಾಗಿದ್ದ ಫರೂಕ್ ಶೇಖ್ (65) ಅವರು ಹಠಾತ್ ಹೃದಯಾಘಾತಕ್ಕೊಳಗಾಗಿ ದುಬೈನಲ್ಲಿ ಡಿ.27, ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರ ನಿಧನದಿಂದ ಇಡೀ ಹಿಂದಿ ಚಿತ್ರರಂಗ ದಿಗ್ಭ್ರಮೆಗೊಳಗಾಗಿದೆ.

ಅತ್ಯಂತ ಸದೃಢರಾಗಿದ್ದ ಅವರು ಕೆಲವೇ ದಿನಗಳ ಹಿಂದೆ ದುಬೈನಲ್ಲಿಯೇ, ಫಿರೋಜ್ ಅಬ್ಬಾಸ್ ಖಾನ್ ನಿರ್ದೇಶಿಸಿದ್ದ, 'ತುಮ್ಹಾರಿ ಅಮೃತಾ' ಎರಡೇ ಪಾತ್ರಗಳಿದ್ದ ನಾಟಕವನ್ನು ಶಬಾನಾ ಅಜ್ಮಿ ಜೊತೆ ಆಡಿದ್ದರು. ಕುಟುಂಬದೊಡನೆ ರಜಾದಿನಗಳನ್ನು ಕಳೆಯಲೆಂದು ದುಬೈಗೆ ಬಂದಿದ್ದ ಫರೂಕ್ ಶೇಖ್ ಅವರಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಶೇಖ್ ಅವರೊಂದಿಗೆ 1992ರಿಂದ 'ತುಮ್ಹಾರಿ ಅಮೃತಾ' ನಾಟಕದಲ್ಲಿ ಅಭಿನಯಿಸುತ್ತ ಬಂದಿರುವ ಶಬಾನಾ ಅಜ್ಮಿ ಮತ್ತು ಶೇಖ್ ಅವರು ಬಹುದಿನಗಳ ಗೆಳತಿ ದೀಪ್ತಿ ನವಲ್ ಅವರು ದೃಢಪಡಿಸಿದ್ದಾರೆ. ಇದೇ ನಾಟಕ ಕನ್ನಡದಲ್ಲಿ ಕೂಡ ರೂಪಾಂತರವಾಗಿದ್ದು, 'ನನ್ನ ಪ್ರೀತಿಯ ನಮೃತಾ' ನಾಟಕದಲ್ಲಿ ಖ್ಯಾತ ರಂಗಕರ್ಮಿಗಳಾದ ಅರುಂಧತಿ ನಾಗ್ ಮತ್ತು ಶ್ರೀನಿವಾಸ ಪ್ರಭು ಅವರು ಅಭಿನಯಿಸಿದ್ದಾರೆ.

Actor Farooq Sheikh dies of heart attack in Dubai

1948ರ ಮಾರ್ಚ್ 25ರಂದು ಗುಜರಾತ್ ನಲ್ಲಿ ಜನಿಸಿದ್ದ ಫರೂಕ್ ಶೇಖ್ ಅವರು, ಕನ್ನಡಿಗ ಎಂಎಸ್ ಸತ್ಯು 1973ರಲ್ಲಿ ನಿರ್ದೇಶಿಸಿದ್ದ 'ಗರಂ ಹವಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸತ್ಯಜಿತ್ ರೇ ಅವರ 'ಶತರಂಜ್ ಕೆ ಖಿಲಾಡಿ', ಸಾಯಿ ಪರಾಂಜಪೆ ನಿರ್ದೇಶನದ 'ಚಷ್ಮೆ ಬದ್ದೂರ್', ಮುಜಫರ್ ಅಲಿ ನಿರ್ದೇಶನದ 'ಉಮ್ರಾವ್ ಜಾನ್' ಮುಂತಾದ ಚಿತ್ರಗಳು ಅವರಿಗೆ ಭಾರೀ ಹೆಸರನ್ನು ತಂದುಕೊಟ್ಟವು.

ಅಭಿನಯವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಫರೂಕ್ ಶೇಖ್ ಅವರು ತಮ್ಮ ಕೊನೆಯ ದಿನಗಳವರೆಗೆ ನಟಿಸುತ್ತಲೇ ಇದ್ದರು. 2013ರಲ್ಲಿ ರಣಬೀರ್ ಕಪೂರ್ ನಾಯಕರಾಗಿದ್ದ 'ಯೇ ಜವಾನಿ ಹೈ ದಿವಾನಿ' ಚಿತ್ರದಲ್ಲಿ ನಟಿಸಿದ್ದರು. 2013ರಲ್ಲಿ ಬಿಡುಗಡೆಯಾಗಿದ್ದ 'ಕ್ಲಬ್ 60' ಎಂಬ ಚಿತ್ರದಲ್ಲಿಯೂ ಅವರು ಡಾ. ತಾರಿಕ್ ಪಾತ್ರಕ್ಕೆ ಜೀವ ತುಂಬಿದ್ದರು.

2009ರಲ್ಲಿ ಬಿಡುಗಡೆಯಾಗಿದ್ದ 'ಲಾಹೋರ್' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿತ್ತು. ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ ಚಿತ್ರಗಳಲ್ಲಿ ಹಲವಾರು ದೂರದರ್ಶನ ಧಾರಾವಾಹಿಗಳಲ್ಲಿ ಅವರು ಕೆಲಸ ಮಾಡಿದ್ದರು. ಸ್ಟಾರ್ ಪ್ಲಸ್ ಚಾನಲ್ ನಲ್ಲಿ ಬಂದಿದ್ದ 'ಜೀ ಮಂತ್ರೀಜಿ' ಅವರ ಕಲಾವಂತಿಕೆಗೆ ಮೆರುಗು ನೀಡಿತ್ತು.

English summary
Famous bollywood actor, TV presenter Farooq Sheikh died of heart attack in Dubai on 27th December 2013. He was 65. He had been to Dubai to spend holidays with his family. Garam Hawa, Chashme Buddoor, Shatraj Ke Khiladi are few of his noted movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada