»   » ಯೂಟ್ಯೂಬಲ್ಲಿ ಹೊಸ ಅಲೆ ಎಬ್ಬಿಸಿದ ಇನ್ಫಿ ಹುಡುಗ್ರು

ಯೂಟ್ಯೂಬಲ್ಲಿ ಹೊಸ ಅಲೆ ಎಬ್ಬಿಸಿದ ಇನ್ಫಿ ಹುಡುಗ್ರು

Posted By:
Subscribe to Filmibeat Kannada

"ಟೆಕ್ಕಿಗಳದ್ದೇ ಒಂದು ಲೋಕ ಬಿಡ್ರಿ. ತಾವಾಯಿತು ತಮ್ಮ ಕೆಲಸವಾಯಿತು. ವಾರಾಂತ್ಯದ ದಿನಗಳಲ್ಲಿ ಮೋಜು ಮಸ್ತಿ ಮಜಾ ಉಡಾಯಿಸಿಕೊಂಡು ಆರಾಮವಾಗಿರುತ್ತಾರೆ. ಕಂಪ್ಯೂಟರ್ ನಂತೆ ಅವರದು ಒಂದು ರೀತಿಯ ಯಾಂತ್ರಿಕ ಜೀವನ" ಎಂದು ಟೆಕ್ಕಿಗಳ ಬಗ್ಗೆ ಉಡಾಫೆಯಾಗಿ ಮಾತನಾಡುವವರೇ ಹೆಚ್ಚು.

ಆದರೆ ಇದಕ್ಕೆ ಅಪವಾದ ಎಂಬಂತೆ ಇಲ್ಲಿದೆ ನೋಡಿ ಒಂದು ಟೆಕ್ಕಿಗಳ ತಂಡ. ಅವರ ಪ್ರಯತ್ನಕ್ಕೆ ಯೂಟ್ಯೂಬ್ ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಕಿರುಚಿತ್ರಗಳನ್ನು ಮಾಡಿ ಚಿತ್ರಪ್ರೇಮಿಗಳ ಗಮನಸೆಳೆದಿದ್ದಾರೆ.

ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶ್ರವಣ್ ತಮ್ಮ ಗೆಳೆಯರೊಂದಿಗೆ ಸೇರಿ ನಿರ್ದೇಶಿಸಿರುವ ಚಿತ್ರ 'ಅನಿರೀಕ್ಷಿತ'. ಖ್ಯಾತ ನಾಟಕಕಾರ ಟಿ.ಪಿ. ಕೈಲಾಸಂ ಅವರ 'ಗಂಡಸ್ಕತ್ರಿ' ನಾಟಕದಿಂದ ಪ್ರೇರಿತಗೊಂಡು ಈ ಅನಿರೀಕ್ಷಿತ ಕಿರುಚಿತ್ರವನ್ನು ಮಾಡಿದ್ದಾರೆ. ಸಂಭಾಷಣೆ ಹಾಗೂ ಚಿತ್ರಕಥೆಯನ್ನು ಸಹ ಶ್ರವಣ್ ಅವರೇ ರಚಿಸಿದ್ದಾರೆ.

ತಾರಾಗಣದಲ್ಲಿ ಸ್ವತಃ ಶ್ರವಣ್, ಸಂದೀಪ್ ಹಾಗೂ ಪ್ರೀತಿ ಅಭಿನಯಿಸಿದ್ದು, ಸಂಗೀತ ರಾಜಾರಾಮ್ ರಾಮಮೂರ್ತಿ ಅವರದು. ಸೌಂಡ್ ಎಫೆಕ್ಟ್ಸ್ ಗಣೇಸನ್ ಗೋಪಾಲ್, ಕಲೆ ಕಾವ್ಯ, ಸಂಕಲನ ಜಗದೀಶ್ ಹಾಗೂ ಛಾಯಾಗ್ರಹಣ ಲಿಂಗರಾಜು ಅವರದು. ಇವರೆಲ್ಲಾ ಕಲಾವಿದರು ವೃತ್ತಿಪರರು ಆಗಿದ್ದು ,ಬಹುತೇಕ ಜನ ಇನ್ಫೋಸಿಸ್ ನಲ್ಲಿ ಕೆಲಸ ಮಾಡುತಿದ್ದು ಕಿರುಚಿತ್ರವನ್ನು ಮಾಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ .

ಈ ಕಿರುಚಿತ್ರ ಹಳೆಯ 'ಗಂಡಸ್ಕತ್ರಿ'ಯಿಂದ ಪ್ರೇರಿತಗೊಂಡಿದ್ದರೂ ಸಾಕಷ್ಟು ಬದಲಾವಣೆಗಳನ್ನೂ ಈಗಿನ ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಲಾಗಿದೆ. ಇದುವರೆಗೂ ಯೂಟ್ಯೂಬ್ ನಲ್ಲಿ 6,257 ಜನ ವೀಕ್ಷಿಸಿದ್ದಾರೆ. ಇವರ 'ಕಿರು' ಪ್ರಯತ್ನಕ್ಕೆ ಬೆನ್ನುತಟ್ಟಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಐಟಿಬಿಟಿ ಹುಡುಗ್ರ ತಿಳಿನಿರೂಪಣೆಯ 'ಮನೀಷೆ': ಇನ್ನೊಂದು ಕಿರುಚಿತ್ರವನ್ನು ಐಟಿ ಬಿಟಿ ಹುಡುಗ್ರು ಮಾಡಿದ್ದಾರೆ. ಇದು ವಸುಧೇಂದ್ರ ಅವರ ಸಣ್ಣ ಕಥೆ ಆಧಾರಿತ 'ಮನೀಷೆ' ಚಿತ್ರವನ್ನೂ ಈ ಹುಡುಗರ ತಂಡ ಮಾಡಿದೆ. ಈ ಚಿತ್ರವನ್ನು ಸ್ವತಃ ವಸುಧೇಂದ್ರ ಅವರು ವೀಕ್ಷಿಸಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ 2014ರಲ್ಲಿ ಮಿನಿಬಾಕ್ಸ್ ಆಫೀಸ್ ನಿಂದ 'ಸ್ಕ್ರೀನ್ ಪ್ಲೇ ಅವಾರ್ಡ್' ಪಡೆದುಕೊಂಡಿದೆ.

anireekshitha5

'ಮನೀಷೆ' ಕಿರುಚಿತ್ರಕ್ಕೆ ಮೈಸೂರಿನ ರಾಣಿ ಬಹದ್ದೂರ್‍ ಸಭಾಮಂದಿರದಲ್ಲಿ ನಡೆದ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆಯೂ ವ್ಯಕ್ತವಾಗಿದೆ. ಈ ಚಿತ್ರವನ್ನು ಸ್ವತಃ ವಸುಧೇಂದ್ರ ಅವರು ವೀಕ್ಷಿಸಿ ಈ ಹುಡುಗರ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ.

"ಸಿನಿಮಾ ಮಾಡುವ ಉತ್ಸಾಹ ನಮ್ಮ ಯುವಕರಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಡಿಜಿಟಲ್ ಕ್ರಾಂತಿಯಿಂದಾಗಿ ಜಗತ್ತಿನ ಸಿನಮಾಗಳನ್ನು ನೋಡಲು ಇಂದು ಸುಲಭಸಾಧ್ಯ ಮತ್ತು ಹೆಚ್ಚಿನ ಖರ್ಚಿಲ್ಲದೆ ಸಿನಿಮಾ ಮಾಡಬಹುದಾಗಿದೆ. ಈ ಕಾರಣಕ್ಕಾಗಿ ಕಿರುಚಿತ್ರಗಳು ಯಥೇಚ್ಛವಾಗಿ ಮೂಡಿ ಬರುತ್ತಿವೆ. ಬೇರೆ ಬೇರೆ ವೃತ್ತಿಯವರೂ ಸಿನಿಮಾ ಮಾಡುವ ಉತ್ಸಾಹ ತೋರುತ್ತಿರುವುದು ಸಂಭ್ರಮದ ವಿಷಯ. ಕಿರಿಯ ಗೆಳೆಯರಾದ Maneesh Rajagopalachar ಮತ್ತು ತಂಡದವರು ನನ್ನ ಆರಂಭದ ಕತೆ 'ಮನೀಷೆ' ಯನ್ನು ಸಿನಿಮಾ ಮಾಡಿದ್ದಾರೆ. ಚಿತ್ರವನ್ನು ನೋಡಿ, ಅವರ ಈ ಪ್ರಯತ್ನವನ್ನು ದಯವಿಟ್ಟು ಪ್ರೋತ್ಸಾಹಿಸಿ" ಎಂದಿದ್ದಾರೆ ವಸುಧೇಂದ್ರ. (ಫಿಲ್ಮಿಬೀಟ್ ಕನ್ನಡ)

English summary
Two Kannada short films by ITBT folks are mesmerizing moviegoer. One is "Anireekshitha" is a suspense thriller Kannada short movie by Shravan Narayan. "Maneeshe" by Maneesh MR, is a short film based on the short story "MANEESHE" written by popular Kannada author Vasudhendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada