ಭೂಗತ ದೊರೆಗಳ ಮನ ಪರಿವರ್ತನೆಗೆ ರವಿ ಬೆಳಗೆರೆ

ಭೂಗತ ದೊರೆ ಚಿತ್ರದಲ್ಲಿ ಮೊದಲ ಬಾರಿ ಪತ್ರಕರ್ತರೊಬ್ಬರು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರೇ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ. ಚಿತ್ರದಲ್ಲೂ ಅವರು ನಟಿಸುತ್ತಿರುವುದು ರವಿ ಬೆಳಗೆರೆಯಾಗಿಯೇ. ಭೂಗತಲೋಕದ ದೊರೆಗಳ ಮನಃ ಪರಿವರ್ತನೆಗೊಳಿಸುವ ಪತ್ರಿಕಾ ಸಂಪಾದಕನೇ ಈ ಚಿತ್ರದ ಹೈ ಲೈಟಂತೆ.
ನಿರ್ದೇಶಕ ಶಿವಮಣಿ ಅವರು ರವಿ ಬೆಳಗೆರೆ ಲೇಖನಗಳ ಖಾಯಂ ಓದುಗ. ಡೆಡ್ಲಿ ಸೋಮ ಎಂಬ ರೌಡಿಯನ್ನು ಸರಿಹಾದಿಗೆ ತರಲು ರವಿ ಪಟ್ಟ ಪರಿಶ್ರಮವೇ ಶಿವಮಣಿಗೆ ಸ್ಫೂರ್ತಿಯಾಯಿತು. ಭೂಗತ ದೊರೆ ಚಿತ್ರದ ಕಥೆಯೂ ಇದೇ ಧಾಟಿಯಲ್ಲಿ ಸಾಗುತ್ತದೆ. ಸೋಮನೇ ಹೀರೋ ಅಂದುಕೊಳ್ಳುವುದಾದರೆ ಆತನ ಪತ್ನಿ ಪಾತ್ರವನ್ನು ನಟಿ ಸುಧಾರಾಣಿ ಮಾಡುತ್ತಿದ್ದಾರೆ.
ಹಾಗೆ ನೋಡಿದರೆ, ಪತ್ರಕರ್ತ ರವಿ ಬೆಳಗೆರೆಯವರಿಗೆ ಚಿತ್ರರಂಗದ ನಂಟು ಇಂದು ನಿನ್ನೆಯದಲ್ಲ. ಗೋಕಾಕ್ ಚಳವಳಿ ಸಂದರ್ಭದಲ್ಲಿ ಅವರು ಇತರ ಪತ್ರಕರ್ತರೊಡನೆ ಚಳವಳಿಯಲ್ಲಿ ಧುಮುಕಿದ್ದರು ಮತ್ತು ವರದಿಗಾರಿಕೆ ಮಾಡಿದ್ದರು. ನಟನೆ ಕೂಡ ಅವರಿಗೆ ಅತ್ಯಂತ ಸ್ವಾಭಾವಿಕವಾಗಿಯೆ ಬಂದಿದೆ. ಪತ್ರಿಕಾ ಲೋಕದಲ್ಲಿ ಮಿಂಚಿದಂತೆ ಅಭಿನಯದಲ್ಲಿಯೂ ರವಿ ಬೆಳಗೆರೆ ಅವರು ಮಿಂಚಲೆಂದು ಅವರ ಅಭಿಮಾನಿಗಳ ಕೋರಿಕೆಯಾಗಿದೆ.


Click it and Unblock the Notifications











