»   » ಕ್ರೇಜಿಸ್ಟಾರ್ ರವಿಚಂದ್ರನ್ ಮೌನದ ಹಿಂದಿನ ಮರ್ಮ

ಕ್ರೇಜಿಸ್ಟಾರ್ ರವಿಚಂದ್ರನ್ ಮೌನದ ಹಿಂದಿನ ಮರ್ಮ

Posted By:
Subscribe to Filmibeat Kannada
ಕ್ರೇಜಿಸ್ಟಾರ್ ರವಿಚಂದ್ರನ್ ಕೆಲವೊಮ್ಮೆ ಮಾತ್ರ ಮಾತನಾಡುತ್ತಾರೆ. ಮೈಕ್ ಸಿಕ್ಕಿದ ತಕ್ಷಣ ಮಾತನಾಡುವ ವ್ಯಕ್ತಿ ಅವರಲ್ಲ. ಕೆಲವೊಮ್ಮೆ ಅವರು ಕಾರಣವಿದ್ದೇ ಮೌನವಾಗುವುದೂ ಇದೆಯಂತೆ. ಕನ್ನಡದ 'ಕನಸುಗಾರ' ಬಿರುದಾಂಕಿತ ಈ ನಟನ ಇತ್ತೀಚಿನ ಚಿತ್ರಗಳ್ಯಾವುದೂ ಗೆಲ್ಲುತ್ತಿಲ್ಲ ಯಾಕೆ ಎಂಬುದು ರವಿಚಂದ್ರನ್ ಅಭಿಮಾನಿಗಳ ಪ್ರಶ್ನೆ.

ಈ ಪ್ರಶ್ನೆಗೆ ಇತ್ತೀಚಿಗೆ ಆಡಿಯೋ ಬಿಡುಗಡೆಯೊಂದರಲ್ಲಿ ರವಿಚಂದ್ರನ್ ಉತ್ತರಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆ ಒಂದೆರಡಲ್ಲ. ರವಿಚಂದ್ರನ್ ಯಾಕೆ ಸುಮ್ಮನೆ ಸಿಕ್ಕ ಸಿಕ್ಕ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಯಾರ್ಯಾರದೋ ನಿರ್ದೇಶನದ ಸಿನಿಮಾಗಳಲ್ಲಿ ನಟಿಸುತ್ತಾರೆ? ಹಾಡೂ ಚೆನ್ನಾಗಿರದ, ಕಥೆಯೂ ಅಷ್ಟಕ್ಕಷ್ಟೇ ಆಗಿರುವ ಚಿತ್ರಗಳು ರವಿಗೆ ಯಾಕೆ ಬೇಕು?

ಇತ್ತೀಚಿಗೆ ಸ್ಟಾರ್ ಪಟ್ಟಕ್ಕೆ ಬಂದಿರುವ ನಟರೂ ಕೂಡ ಕಥೆ, ಚಿತ್ರಕಥೆಯಲ್ಲಿ ಬದಲಾವಣೆ ಬೇಕೆಂದು ನಿರ್ದೇಶಕರಿಗೆ ಸೂಚಿಸುತ್ತಾರೆ. ಆದರೆ ರವಿಚಂದ್ರನ್ ಮಾತ್ರ ಯಾಕೆ ಸುಮ್ಮನಿರುತ್ತಾರೆ. ನಿರ್ದೇಶಕರು ಹೇಳಿದಂತೆ ನಟಿಸಿ, ಚಿತ್ರ ಏನೇ ಆದರೂ ಯಾಕೆ ಈ ಪರಿ ಮೌನವಾಗಿರುತ್ತಾರೆ. ಹಾಡು, ದೃಶ್ಯಗಳ ಬಗ್ಗೆ ರವಿಚಂದ್ರನ್ ಅವರಿಗೆ ಸಾಕಷ್ಟು ಗೊತ್ತಿದ್ದರೂ ಅವರೇಕೆ ಸುಮ್ಮನಿರುತ್ತಾರೆ?

ಪ್ರಶ್ನೆ ಒಂದೆರಡಲ್ಲ. ಇವೆಲ್ಲಕ್ಕೂ ರವಿಚಂದ್ರನ್ ಉತ್ತರಿಸಿದ್ದಾರೆ. "ನನ್ನ ಯೋಚನೆ, ಚಿಂತನೆಗಳಿಗೆ ಆ ನಿರ್ದೇಶಕರ ಕೆಲಸ ಹೊಂದಾಣಿಕೆ ಆಗೋದಿಲ್ಲ. ಬೇರೆಯವರ ನಿರ್ದೇಶನದ ಚಿತ್ರಗಳಲ್ಲಿ ನಟಿಸುವಾಗ ನಾನು ಸುಮ್ಮನಿರುತ್ತೇನೆ. ನನ್ನ ಯೋಚನಾ ಲಹರಿಯನ್ನು ಅವರು ಮುಟ್ಟುವುದೂ ಸಾಧ್ಯವಾಗುವುದಿಲ್ಲ. ಸುಮ್ಮನೆ ಹೇಳಿ ಏನು ಪ್ರಯೋಜನ.

ಬೇರೆಯವರ ಚಿತ್ರಗಳಲ್ಲಿ ನಾನು ನಟಿಸುವಾಗ ಅವರಲ್ಲಿ 'ಸುಮ್ಮನೆ ಬಂದು ನಟಿಸಿ ಹೋಗಿ' ಎಂಬ ಭಾವನೆ ಇರುವುದನ್ನು ನಾನು ಗಮನಿಸಿದ್ದೇನೆ. ಹೀಗಾಗಿ ನಾನು ಮೂಗು ತೂರಿಸಲು ಹೋಗುವುದಿಲ್ಲ. ಏನೋ ಹೇಳಲು ಹೋದರೆ ಇನ್ನೇನೋ ಆಗುತ್ತದೆ. ಅದು ನನಗಿಷ್ಟವಿಲ್ಲ. ಸುಮ್ಮನೆ ವಾದ-ವಿವಾದಗಳಲ್ಲಿ ಕಾಲಹರಣ ಮಾಡುವುದು ನನ್ನ ಜಾಯಮಾನವಲ್ಲ"

ಇಷ್ಟು ಹೇಳಿ ನಿಟ್ಟುಸಿರಿಟ್ಟರು ರವಿಚಂದ್ರನ್. ಇತ್ತೀಚಿಗೆ ಬಂದ ಕವಿತಾ ಲಂಕೇಶ್ ನಿರ್ದೇಶನ ಕ್ರೇಜಿಲೋಕ ಚಿತ್ರವು ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿದೆ. ಕ್ರೇಜಿಲೋಕವನ್ನು ಪ್ರೇಮಲೋಕಕ್ಕೆ ಹೋಲಿಸಿ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ರವಿಚಂದ್ರನ್ ಅವರಿಗೆ ಈಗ ಹೋದಲ್ಲೆಲ್ಲಾ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ.

ಇಷ್ಟೇ ಅಲ್ಲ, ಕ್ರೇಜಿಲೋಕದ ಮೇಲ್ಬರಹ ಕೂಡ 'ಅಂದು ಪ್ರೇಮಲೋಕ ಇಂದು ಕ್ರೇಜಿಲೋಕ' ಎಂದಿತ್ತು. ನಿರ್ದೇಶಕಿ ಕವಿತಾ ಲಂಕೇಶ್ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸ್ವತಃ ಈ 'ಕ್ರೇಜಿಲೋಕ' ಚಿತ್ರ ಇನ್ನೊಂದು 'ಪ್ರೇಮಲೋಕ' ಎಂದು ಹೇಳಿದ್ದರು. ಈ ಕಾರಣದಿಂದ ಪ್ರೇಕ್ಷಕರು ಬಹಳಷ್ಟು ನಿರೀಕ್ಷೆ ಇಟ್ಟಿದ್ದರು. ಅದು ಕ್ರೇಜಿಲೋಕದ ಮೂಲಕ ಈಡೇರಿಲ್ಲ.

ಕ್ರೇಜಿಲೋಕ ಚಿತ್ರ ಬಿಡುಗಡೆಯ ನಂತರ ರವಿಚಂದ್ರನ್ ಅಭಿಮಾನಿಗಳಿಗೂ ಬೇರವಾಗಿದೆ. ಪ್ರೇಕ್ಷಕರಿಗೆ ಕನಿಷ್ಠ ಹಿಂಸೆಯಾಗದ ರೀತಿಯಲ್ಲೂ ಈ ಚಿತ್ರವಿಲ್ಲ ಅನ್ನೋದು ಅವರ ಅಳಲು. ಇದನ್ನು ಸೂಚ್ಯವಾಗಿ ರವಿಚಂದ್ರನ್ ಕೂಡ ಅಂದು ಹೇಳಿದರು. ಪ್ರೇಮಲೋಕದ ರೂವಾರಿ ರವಿಚಂದ್ರನ್ ಅವರಿಗೆ ಕ್ರೇಜಿಲೋಕ ಇಷ್ಟವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರವಿಚಂದ್ರನ್ "ಪ್ರೇಮಲೋಕಕ್ಕೂ ಕ್ರೇಜಿಲೋಕಕ್ಕೂ ಹೋಲಿಸುವುದು ಸರಿಯಲ್ಲ. ಕ್ರೇಜಿಲೋಕದ ಯಾವ ದೃಶ್ಯವೂ ಪ್ರೇಮಲೋಕಕ್ಕೆ ಸಾಟಿಯೇ ಅಲ್ಲ". ಆದರೆ ಬೇರೆಯವರ ಚಿತ್ರದ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ ಎಂದು ಹೇಳಿ ಮಾತಿಗೆ 'ಫುಲ್ ಸ್ಟಾಪ್' ಇಟ್ಟುಬಿಟ್ಟರು ಕನಸುಗಾರ ರವಿಚಂದ್ರನ್.

ಇಷ್ಟೆಲ್ಲಾ ನಡೆದಿದ್ದು ಇತ್ತೀಚಿಗೆ ಕಾಮಿಡಿ ಖ್ಯಾತಿಯ ನಟ ಶರಣ್ ನಾಯಕತ್ವದ 'ರಾಂಬೋ' ಚಿತ್ರದ ಆಡಿಯೋ ಬಿಡುಗಡೆಯಲ್ಲಿ. ಅಂದು ವೇದಿಕೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಬಾಲಾಜಿ ಮುಂತಾದವರು ಹಾಜರಿದ್ದರು. ನಟ ಶರಣ್ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. (ಒನ್ ಇಂಡಿಯಾ ಕನ್ನಡ)

English summary
Crazy Star Ravichandran talks about his recent released movie Crazyloka failure. He told that he don't want to involve others directions movie as he is the only actor for their film. In the venue of comedy actor Sharan's audio release, Ravichandran told like this. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada