ಕಾವೇರಿ ಹೋರಾಟಕ್ಕೆ ಧುಮುಕಿದ ನಟ ದರ್ಶನ್
ಸದ್ಯಕ್ಕೆ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ವಿಜಯೋತ್ಸವದಲ್ಲಿದ್ದಾರೆ. ಈಗ ಕಾವೇರಿ ಜಲವಿವಾದ ಮತ್ತೆ ಭುಗಿಲೆದ್ದಿರುವ ಕಾರಣ ಅವರು ತಮ್ಮ ವಿಜಯಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ ಕಾವೇರಿ ಹೋರಾಟಕ್ಕೆ ಧುಮುಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, "ಮೊದಲು ನಮ್ಮ ರೈತರಿಗೆ ನೀರು ಸಿಗಲಿ. ಆಮೇಲೆ ಬೇರೆಯವರ ಬಗ್ಗೆ ಯೋಚಿಸೋಣ. ನಮಗೇ ನೀರಿಲ್ಲ ಎಂದ ಮೇಲೆ ಅವರಿಗೆ ಎಲ್ಲಿಂದ ತರುವುದು. ಮೊದಲು ನಮ್ಮ ಪರಿಸ್ಥಿತಿಯನ್ನು ಅವರು ಅರ್ಥಮಾಡಿಕೊಳ್ಳಬೇಕು" ಎಂದರು.
ಕಾನೂನಿಗೆ ಗೌರವ ಕೊಡಬೇಕಾಗುತ್ತದೆ. ಆದರೆ ಅವರು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಕಾವೇರಿ ಹೋರಾಟಕ್ಕೆ ತಮ್ಮ ರಾಯಣ್ಣ ಚಿತ್ರತಂಡ ಸಂಪೂರ್ಣ ಬೆಂಬಲ ಸೂಚಿಸುತ್ತಿದೆ. ಹಾಗಾಗಿ ರಾಯಣ್ಣ ವಿಜಯಯಾತ್ರೆಯನ್ನು ತಾವು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ ಎಂದಿದ್ದಾರೆ.
ಡಿಸೆಂಬರ್ 2ರಂದು ಬೆಂಗಳೂರಿನಿಂದ ಹೊರಟ ರಾಯಣ್ಣ ವಿಜಯಯಾತ್ರೆ ಶಿವಮೊಗ್ಗ, ಮೈಸೂರು ಜಿಲ್ಲೆಗಳನ್ನು ತಲುಪಿದೆ. ಅಲ್ಲಿಂದ ಚಾಮರಾಜನಗರ, ಮೈಸೂರು, ಮಂಡ್ಯ, ಮದ್ದೂರು, ರಾಮನಗರ, ಬೆಂಗಳೂರಿಗೆ ವಾಪಸಾಗಬೇಕಿತ್ತು. (ಒನ್ಇಂಡಿಯಾ ಕನ್ನಡ)


Click it and Unblock the Notifications












