ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ 'ಯು/ಎ' ಕೊಟ್ಟಿದ್ದೇಕೆ?
ಬಹುನಿರೀಕ್ಷೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ 'ಯು/ಎ' ಪ್ರಮಾಣಪತ್ರ ದೊರಕಿದ್ದು ಹಲವರಿಗೆ ಆಶ್ಚರ್ಯವನ್ನುಂಟುಮಾಡಿದೆ. ಕಾರಣ, ದೇಶಭಕ್ತಿ ಕಥೆಯುಳ್ಳ ಐತಿಹಾಸಿಕ ಚಿತ್ರಕ್ಕೆ 'ಯು/ಎ' ಸರ್ಟಿಫಿಕೇಟ್ ಕೊಡುವ ಅಗತ್ಯವೇನಿತ್ತು? ಈ ಪ್ರಶ್ನೆ ಹಲವರನ್ನು ಕಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ಐತಿಹಾಸಿಕ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣಪತ್ರ ನೀಡಿ ಪ್ರದರ್ಶನಕ್ಕೆ 'ಅಸ್ತು' ಎಂದಿದೆ.
ಈ ಸಂಗತಿ ಸಾಕಷ್ಟು ಜನರ ಅಚ್ಚರಿಗೆ ಕಾರಣವಾಗಿದ್ದು ಸುಳ್ಳಲ್ಲ. ಮಚ್ಚು-ಲಾಂಗುಗಳ ಚಿತ್ರವಾದರೆ ನೇರವಾಗಿ 'ಎ' ಸರ್ಟಿಫಿಕೇಟ್ ಕೊಡುತ್ತಾರೆ. ಅಥವಾ, ಹಾಟ್ ದೃಶ್ಯಗಳು ಹಾಗೂ ಡಬ್ಬಲ್ ಮೀನಿಂಗ್ ಚಿತ್ರಗಳಲ್ಲಿ ಹೇರಳವಾಗಿದ್ದರೂ ಅದಕ್ಕೂ 'ಎ' ಸರ್ಟಿಫಿಕೇಟ್ ನೀಡಿ ಕಳಿಸಿಬಿಡುತ್ತದೆ ಸೆನ್ಸಾರ್ ಮಂಡಳಿ. ಆದರೆ ಹೇಳಿಕೇಳಿ ಇದು 'ಐತಿಹಾಸಿಕ ಚಿತ್ರ'. ಇದಕ್ಕೆ 'ಯು/ಎ' ಪ್ರಮಾಣಪತ್ರದ ಔಚಿತ್ಯ ಪ್ರಶ್ನಿಸಿ ಕೆಲವರು ನೇರವಾಗಿ ಸೆನ್ಸಾರ್ ಮಂಡಳಿಯನ್ನೇ ಕೇಳಿದ್ದಾರೆ.
ಅದಕ್ಕೆ ಸೆನ್ಸಾರ್ ಮಂಡಳಿ ಕೊಟ್ಟ ಉತ್ತರ ಹೀಗಿದೆ. "ಕಲೆಯ ದೃಷ್ಟಿಯಿಂದ ನೋಡಿದಾಗ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ 'ಯು' ಪ್ರಮಾಣಪತ್ರ ನೀಡಬೇಕು. ಆದರೆ ಈ ಚಿತ್ರದಲ್ಲಿ ರಕ್ತದ ಕೋಡಿ ಹರಿದಿದೆ. ಬಹಳಷ್ಟು ಯುದ್ಧದ ದೃಶ್ಯಗಳಿವೆ. ಸಾಕಷ್ಟು ಶಿರಚ್ಛೇದನ ಸನ್ನಿವೇಶಗಳಿವೆ. ಹೀಗಿರುವಾಗ ಎಚ್ಚರಿಕೆ ನೀಡುವ ಅಗತ್ಯ ಬಂದೇ ಬರುತ್ತದೆ. ಈ ಕಾರಣದಿಂದ ಅನಿವಾರ್ಯವಾಗಿ 'ಯು/ಎ' ನೀಡಿದ್ದೇವೆ.
ಹೀಗಿದ್ದೂ ಮಕ್ಕಳು ನೋಡಲು ಸೂಕ್ತವಲ್ಲದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ ಇಲ್ಲವೇ ಅದನ್ನು ಔಟ್ ಆಫ್ ಫೋಕಸ್ ಮಾಡಿ ಎಂದು ಚಿತ್ರತಂಡಕ್ಕೆ ಹೇಳಿದಾಗ ಅದನ್ನು ಅವರು ಪಾಲಿಸಲಿಲ್ಲ. ನಂತರ ನಮಗೆ ಉಳಿದ ದಾರಿ 'ಯು/ಎ' ಸರ್ಟಿಫಿಕೇಟ್ ನೀಡುವುದಷ್ಟೇ. ಸಿನಿಮಾ ಒಳ್ಳೆಯದೋ ಕೆಟ್ಟದ್ದೋ ಎಂಬುದನ್ನು ನಾವು ನಿರ್ಧರಿಸುವಂತಿಲ್ಲ. ನಮಗೆ ಚಿತ್ರದಲ್ಲಿರುವ ದೃಶ್ಯಗಳ ಬಗ್ಗೆ, ಅವುಗಳನ್ನು ಪ್ರಮಾಣೀಕರಿಸುವ ಮಾನದಂಡದ ಬಗ್ಗೆಯಷ್ಟೇ ನಿರ್ಧರಿಸುವ ಹಕ್ಕು ಇದೆ" ಎಂದಿದ್ದಾರೆ. ಮುಂದಿನ ಪುಟ ನೋಡಿ...


Click it and Unblock the Notifications











