»   » ಒಂದೇ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಮಾಡಿದ ತಾರತಮ್ಯ

ಒಂದೇ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಮಾಡಿದ ತಾರತಮ್ಯ

Written By:
Subscribe to Filmibeat Kannada
Censor board double standard on Charulatha movie
ಸೆನ್ಸಾರ್ ಬೋರ್ಡ್ ಜೊತೆಗಿನ ಸಮಸ್ಯೆ, ತಕರಾರು ನಿರ್ಮಾಪಕರಿಗೆ ಇದ್ದದ್ದೆ. ಈ ಕಿತ್ತಾಟ ಸೆನ್ಸಾರ್ ಆದಾಗಿನಿಂದಲೂ ಜಾರಿಯಲ್ಲಿದೆ. ಅದರಲ್ಲೂ ಕನ್ನಡ ಚಿತ್ರರಂಗ ಇನ್ನೂ ಹತ್ತು ಹೆಜ್ಜೆ ಮುಂದಿಟ್ಟಿರುವುದು ಇತ್ತೀಚೆಗೆ ನಡೆದ ಮದನ್ ಪಟೇಲ್ ಪ್ರಕರಣದಲ್ಲಿ ಭಯಂಕರವಾಗಿ ಸಾಬೀತಾಯ್ತು.

ಸತ್ಯಾನಂದ ಸಿನಿಮಾದ ವಿಷಯದಲ್ಲಿ, ಚಿತ್ರತಂಡ ಮತ್ತು ಸೆನ್ಸಾರ್ ಅಧಿಕಾರಿಯವರ ನಡುವೆ ಯಾವ ಪರಿ ರಂಪ ರಾದ್ಧಾಂತವಾಯ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಒಟ್ಟಿನಲ್ಲಿ ಸೆನ್ಸಾರ್ ಬಗ್ಗೆ ಮಾತು ಬಂದಾಗಲೆಲ್ಲಾ ಅನೇಕರು ಅದರ ಕಾರ್ಯವೈಖರಿ ನಿಯಮಾವಳಿಗಳ ಬಗ್ಗೆ ಅಸಮಾಧಾನ ಮತ್ತು ಸಂಶಯ ವ್ಯಕ್ತಪಡಿಸಿದ್ದುಂಟು.

ಈಗೇನು ಯಾರೂ ಸೆನ್ಸಾರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲವಾದರೂ, ಚಾರುಲತಾ ವಿಷಯದಲ್ಲಿ ಲಭ್ಯವಾದ ಎರಡು ವ್ಯತಿರಿಕ್ತ ಪ್ರಮಾಣ ಪತ್ರಗಳು ಕೆಲವು ಪ್ರಜ್ಞಾವಂತರಲ್ಲಿ ಸೆನ್ಸಾರ್ ಕಾರ್ಯವೈಖರಿ ಬಗ್ಗೆ ಮತ್ತೆ ಅಸಮಾಧಾನ ಹುಟ್ಟುಹಾಕಿದೆ.

ಅದೇನೆಂದರೆ ಎಲ್ಲರಿಗೂ ಗೊತ್ತಿರುವಂತೆ ಚಾರುಲತಾ ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲು ಸಜ್ಜಾಗಿರುವ ಸಿನಿಮಾ. ಇದೇ ಸೆಪ್ಟಂಬರ್ ಇಪ್ಪತ್ತೊಂದಕ್ಕೆ ಪ್ರದರ್ಶನಕ್ಕೆ ಡೇಟ್ ಕೂಡಾ ಅನೌನ್ಸ್ ಆಗಿದೆ. ಕನ್ನಡ ಸಿನಿಮಾ ಮಲಯಾಳಂಗೆ ಡಬ್ ಆಗಿದ್ದರೆ, ತಮಿಳು ವರ್ಷನ್ ತೆಲುಗಿಗೆ ಡಬ್ ಆಗಿ ಪ್ರದರ್ಶನ ಕಾಣಲಿದೆ.

ಕನ್ನಡ ಚಿತ್ರಕ್ಕೆ ಇಲ್ಲಿನ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ ಎ ಸರ್ಟಿಫಿಕೇಟ್ ಕೊಟ್ಟು ಕೈತೊಳೆದುಕೊಂಡಿತ್ತು. ಆದರೆ ಇದೇ ಚಿತ್ರಕ್ಕೆ ತಮಿಳು ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಯು ಸರ್ಟಿಫಿಕೆಟ್ ಕೊಟ್ಟಿದೆ.

ಒಂದೇ ಕಥೆಯುಳ್ಳ, ಒಟ್ಟಿಗೇ ಚಿತ್ರೀಕರಿಸಿದ ಚಾರುಲತಾಕ್ಕೆ, ಅದು ಹೇಗೆ ಒಂದೊಂದು ಕಡೆ ಒಂದೊಂದು ರೀತಿ ಪ್ರಮಾಣ ಪತ್ರ ನೀಡಲು ಸಾಧ್ಯ? ನಿಯಮಗಳು ಎಲ್ಲಾ ಕಡೆಯೂ ಒಂದೇ ಇರಬೇಕಲ್ಲವೇ?

ಕೆಲವರು ಚಕಿತ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸೆನ್ಸಾರ್ ಮಂಡಳಿ ತನಗಿಷ್ಟ ಬಂದಂತೆ ಕಾರ್ಯ ನಿರ್ವಹಿಸುತ್ತಿದೆ, ವಿಪರೀತ ಎನಿಸುವಂಥ ಮಡಿವಂತಿಕೆ ತೋರುತ್ತಿದೆ ಎಂದು ಆರೋಪಿಸುತ್ತಿದ್ದವರಿಗೆ, ಈಗ ಇದೊಂದು ಇನ್ನೊಂದು ಆಧಾರ ಸಿಕ್ಕಿದಂತಾಗಿಬಿಟ್ಟಿದೆ.

ಹಾಗಾಗಿ ಮತ್ತೆ ಮತ್ತೆ ಸೆನ್ಸಾರ್ ಮಂಡಳಿಯ ಬಗ್ಗೆ ಅಸಮಾಧಾನಗಳು ಉದ್ಭವಿಸುತ್ತಿವೆ. ಆದರೆ ಈ ಬಗ್ಗೆ ಚಿತ್ರತಂಡವೇನು ಜಾಸ್ತಿ ತಲೆಕೆಡಿಸಿಕೊಂಡಂತಿಲ್ಲ.

ಚಾರುಲತಾಕ್ಕೆ ಕನ್ನಡ ಸಿನಿಮಾ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಂಪೂರ್ಣ 'ಎ' ಕೊಟ್ಟುಬಿಟ್ಟಿದರೆ ಪ್ರಾಯಶಃ ದ್ವಾರಕೀಶ್ ಆಗ ಗುಡುಗುತ್ತಿದ್ದರೇನೋ.

ಆದರೆ ಚಾರುಲತಾಕ್ಕೆ ಯು/ ಎ ಸಿಕ್ಕಿರುವುದರಿಂದ ದ್ವಾರಕೀಶ್ ಸುಮ್ಮನಾಗಿದ್ದಾರೆ. ಪ್ರಸ್ತುತ ಅವರ ಕಣ್ಣೆದುರಿಗಿರುವುದು ಪ್ರೇಕ್ಷಕ ಮಾತ್ರ.

English summary
Karnataka censor board has issued U/A certificate and Tamilu Nadu board has issued U certificate for movie Charulatha. This movie releasing in 4 languages on September 21st.
Please Wait while comments are loading...